image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೌಂದರ್ಯ ಮನ ತಣಿಸುವಂತಿರಲಿ...

ಸೌಂದರ್ಯ ಮನ ತಣಿಸುವಂತಿರಲಿ...

ಸೌಂದರ್ಯವೆಂದರೆ ನಮ್ಮ ಬುದ್ಧಿ ಮತ್ತು ಮನಸ್ಸುಗಳು ಒಂದಾಗಿ ಆನಂದಿಸುವ ಒಂದು ಅದ್ಭುತ ಅನುಭವ. ಸೌಂದರ್ಯವನ್ನು ಆರಾಧಿಸುವ ಬಾವನೆ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ. ಸುಂದರವಾದದ್ದನ್ನು ಕಂಡಾಗ ಮೈ-ಮನಸ್ಸುಗಳು ಅರಳುತ್ತವೆ. ಸೌಂದರ್ಯಕ್ಕೆ ಅಂತಹ ಶಕ್ತಿ ಇರುವುದರಲ್ಲಿ ಸಂದೇಹವಿಲ್ಲ. ಆದರೂ ಸೌಂದರ್ಯವನ್ನು ಆಸ್ವಾದಿಸಲು ವಿಶೇಷ ಮನಸ್ಥಿತಿ ಇರಬೇಕು. ಅದಕ್ಕಾಗಿ ಬುದ್ಧಿ,ಭಾವಗಳು ಒಸೆಯಬೇಕು. ಆಗ ಮಾತ್ರ ಸೌಂದರ್ಯದ ರಸಾಸ್ವಾದ ನಮ್ಮ್ಮ ತನು-ಮನವನ್ನು ತಣಿಸಲು ಸಾಧ್ಯ. ಸೌಂದರ್ಯದ ರಸದೌತಣ ಕೊಡುವ, ಬೋರ್ಗರೆದು ದುಮ್ಮಿಕ್ಕುವ ಜಲದಾರೆ, ಗಿರಿ ಶಿಖರಗಳಲ್ಲಿ ಹಿಮರಾಶಿಯ ಶೃಂಗಾರ, ಹಸಿರಿನ ಹೊದಿಕೆಯ ವನಸಿರಿ, ಕಣಿವೆಗಳ ಚಿತ್ತಾರ, ಪಾಲ್ನೊರೆಯಂತೆ ಕಂಗೊಲಿಸುವ ಸಾಗರದ ಅಲೆ, ಜುಳು ಜುಳು ಹರಿಯುವ ಜಲರಾಶಿ, ಗಿರಿ ಗಗನವ ಮುತ್ತಿಕ್ಕುವ ಮೋಡ, ಬೆಳ್ಮಂಜಿನಲ್ಲಿ ಹಾರಾಡುವ ಹಾಲಕ್ಕಿ ಹಿಂಡು, ಚಿಗುರೆಲೆಯಿಂದ ತೊಟ್ಟಿಕ್ಕುವ ಮಳೆಯ ಹನಿ, ನವಿಲಿನ ಕುಣಿತ, ಕೋಗಿಲೆಯ ಇನಿದನಿ, ಕರುವಿನ ಕೊರಳಿನ ಗೆಜ್ಜೆ ಸದ್ದು, ಸಿಂಹದ ರಾಜ ಗಾಂಬಿರ್ಯ, ಜಿಂಕೆಗಳ ಓಟ, ಪಕ್ಷಿಗಳ ಕಲರವ, ಪ್ರಶಾಂತ ಕೊಲದಲ್ಲಿ ಮೀನಿನ ವಯ್ಯಾರ, ಹಂಸಗಳ ಸಿಂಗಾರ, ಕೆಂಪು ಗುಲಾಬಿಯ ಚೆಲುವು, ಮಲ್ಲಿಗೆಯ ಬಿಳುಪು, ನಮ್ಮಮ್ಮನ ಮುಗ್ಧ ನಗೆ...ಅಬ್ಭಾ ಎಲ್ಲೆಲ್ಲಿಯೂ ಸೌಂದರ್ಯವೇ! ಇದನ್ನೆಲ್ಲಾ ಕಂಡಾಗ ನಮ್ಮ ಮನಸ್ಸು ನಮಗರಿವಿಲ್ಲದಂತೆಯೇ ‘ವಾವ್’ ಎಂದು ಉದ್ಘರಿಸದೇ ಇರಲು ಸಾದ್ಯವೇ?. ಇಂತಹ ಸೌಂದರ್ಯದ ಸವಿಯನ್ನು ನೆನೆದು ಮನಸ್ಸು ಮತ್ತೆ ಮತ್ತೆ ಆನಂದದಲ್ಲಿ ತೇಲದಿರಲು ಸಾದ್ಯವೇ?. ಪ್ರಕೃತಿಯ ಈ ಚೆಲುವಿನ ಮುಂದೆ ನಿನ್ನ ಸೌಂದರ್ಯಕ್ಕೆ ಬೆಲೆ ಎಲ್ಲಿದೆಯೋ ಮನುಜ?.

ನನ್ನ ಪ್ರಕಾರ ಸೌಂದರ್ಯ ಎನ್ನುವುದು ನಮ್ಮ ದೃಷ್ಟಿಯ ಮೇಲೆ ಅವಲಂಬಿತವಾಗಿರುತ್ತದೆ. ಹೌದು, ಆದರೆ ಪ್ರಕೃತಿ ಸೌಂರ್ಯವನ್ನು ಆಹ್ಲಾದಿಸದವರು ಯಾರಿದ್ದಾರೆ ಈ ಜಗದಲಿ. ಅದರಲ್ಲೂ ನಮ್ಮ ಕವಿ ಪುಂಗವರು ಈ ಪ್ರಕೃತಿಯಲ್ಲಿ ಬೆರೆತು ಎಷ್ಟೋ ಮಹಾ ಕಾವ್ಯಗಳನ್ನೇ ನಮಗೆ ಉಡುಗೊರೆಯಾಗಿ ನೀಡಿದ್ದಾರೆ. ಹಾಗೆಂದು ಸೌಂದರ್ಯ ಎನ್ನುವುದು ಸುಂದರವಾದ ದೃಶ್ಯಗಳಲ್ಲಿ ಮಾತ್ರವೇ ಅಡಗಿರುತ್ತದೆ ಎಂದುಕೊಂಡರೆ ತಪ್ಪು. ಸೌಂದರ್ಯ ಎಲ್ಲೆಡೆಯೂ ಇರುತ್ತದೆ. ಅದನ್ನು ಗುರುತಿಸುವ, ಆಸ್ವಾದಿಸುವ ಮನಸ್ಸು ಬೇಕಷ್ಟೆ. ಸ್ವಚ್ಛತೆಯಲ್ಲಿ, ಒಂದೊಳ್ಳೆ ಉಡುಪಿನಲ್ಲಿ ಒಂದು ಮುಗುಳ್ನಗೆಯಲ್ಲಿ, ಕಗ್ಗತ್ತಲಲ್ಲಿ ಮಿನುಗುವ ಮಿಣುಕು ಬೆಳಕಲ್ಲಿ ಹೀಗೆ ಎಲ್ಲೆಲ್ಲೂ ಸೌಂದರ್ಯವಿದೆ.

ನಮ್ಮ ಒಳಗಣ್ಣನ್ನು ತೆರೆದು ನೋಡಿದಾಗ ಮಾತ್ರ ಇಡೀ ಜಗತ್ತೇ ನಮಗೆ ಸೌಂದರ್ಯದಿಂದ ತುಂಬಿ ತುಳುಕುವಂತೆ ಕಾಣಲು ಸಾದ್ಯ. ಇದೆಲ್ಲ ಬಾಹ್ಯ ಸೌಂದರ್ಯದ ಅನುಭವ ಅಷ್ಟೆ. ಅದರೆ ಮನುಷ್ಯನಿಗೆ ಬಾಹ್ಯ ಸೌಂದರ್ಯದ ಜೊತೆಗೆ ಆಂತರಿಕ ಸೌಂದರ್ಯ ಬಹು ಮುಖ್ಯ. ನನಗೆ ಆಗಾಗ ಕಾಡುವ ಪ್ರಶ್ನೆ “ಈ ನಮ್ಮ ಜನ ನಿಜವಾದ ಸೌಂದರ್ಯವನ್ನು ಮರೆತು ಅದ್ಯಾಕೆ ನಾಲ್ಕು ದಿನದಲ್ಲಿ ಮಾಸುವ ನಮ್ಮ ದೇಹ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ”. ಸೌಂದರ್ಯ ಎಂದರೆ ಕಣ್ಣು ಕುಕ್ಕುವುದಲ್ಲ. ಅದು ಅಹ್ಲಾದಿಸುವಂತಿರಬೇಕು ಅಂತ ಅಮ್ಮ ನನಗೆ ಆಗಾಗ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತದೆ. ಹೌದು ಕಣ್ಣು ಕುಕ್ಕುವ ಸೌಂದರ್ಯ ಎಂದರೆ ನಮ್ಮ ದೇಹ ಸೌಂದರ್ಯದ ಪ್ರದರ್ಶನವಿರಬಹುದಲ್ಲವೇ?. ಅರೆಬರೆ ಬಟ್ಟೆ ಹಾಕಿದಾಗ ಮಾತ್ರ ಸೌಂದರ್ಯ ಅಂದುಕೊಳ್ಳುವವರ ಸೌಂದರ್ಯ ಎಲ್ಲರ ಕಣ್ಣು ಕುಕ್ಕದೇ ಬಿಡುವುದಿಲ್ಲ. ಇನ್ನು ಮೈ ಮುಚ್ಚುವ ಬಟ್ಟೆಯಲ್ಲೂ ಇನ್ನೊಮ್ಮೆ ತಿರುಗಿ ನೋಡಬೇಕು ಎನಿಸುವ ಸೌಂದರ್ಯ ಅಹ್ಲಾದಕರ ಎನಿಸುತ್ತದೆ.

ಇನ್ನು ಕಪ್ಪು, ಬಿಳುಪು, ಉದ್ದ, ಗಿಡ್ಡ, ದಪ್ಪ, ಸಣ್ಣ ಇದೆಲ್ಲವೂ ಮನುಷ್ಯನ ಸೌಂದರ್ಯದಲ್ಲಿ ಮಹತ್ವವನ್ನು ಪಡೆದಿರುತ್ತದೆ. ಚರ್ಮದ ಬಿಳುಪು ಅಂದವೇ ಆಗಿದ್ದರೆ ಕಪ್ಪಗಿದ್ದ ಶ್ರೀಕೃಷ್ಣನ ಚೆಲುವಿಗಿಲ್ಲವೇ ಬೆಲೆ? ಶ್ರೀರಾಮ ಚೆಲುವನಲ್ಲವೇ? ಬೆಳ್ಳಗಿದ್ದ ಮನುಷ್ಯನ ಮನಸ್ಸು ಕಪ್ಪಾಗಿದ್ದರೆ ಅದೆಲ್ಲಿಯ ಸೌಂದರ್ಯ?. ಕೆಲವು ಸಲ ದುಡ್ಡಿನಲ್ಲಿಯೂ ಸೌಂದರ್ಯ ಅಡಗಿರುತ್ತದೆ. ದುಡ್ಡಿದ್ದವರ ಮಕ್ಕಳು ಕಪ್ಪಗಿರಲಿ, ಕುಳ್ಳಗಿರಲಿ, ದಪ್ಪಗಿರಲಿ ಕೊನೆಗೆ ಅಸಹ್ಯವಾಗಿರಲಿ ಅವರನ್ನು ಮುದ್ದಿಸುವ ಪರಿಯೇ ಬೇರೆ.

ಇನ್ನು ಬಡವನ ಮಗು ಮುದ್ದಾಗಿ, ಲಕ್ಷಣವಾಗಿದ್ದರೂ ಅದನ್ನು ಹತ್ತಿರ ಕರೆಯುವವರಿರಲ್ಲ. ಎಲ್ಲವೂ ಅವರವರ ಭಾವಕ್ಕೆ ಬಿಟ್ಟಿದ್ದು ಎನ್ನಬಹುದು. ಸ್ವಚ್ಚ ಮನಸಿನಿಂದ ಸೌಂದರ್ಯವನ್ನು ಅಸ್ವಾಧಿಸಿದಾಗ ಮಾತ್ರ ಮನ ತಣಿಯಲು ಸಾಧ್ಯ ಎನ್ನುವುದನ್ನು ಮರೆಯದಿರೋಣ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ