“ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲಿ, ಪಯಣಿಗ ನಾನಮ್ಮ” ಅಂತ ಚಿ.ಉದಯಶಂಕರ್ ಬರೆದ ಶುಭಮಂಗಳ ಚಿತ್ರದ ಹಾಡನ್ನು ನಾವು ಕೇಳಿರುತ್ತೇವೆ. ಹೌದು ಗೆಳೆತನದ ಸೊಬಗೇ ಹಾಗೆ, ನಮ್ಮ ಜೀವನದಲ್ಲಿ ಬಂದು ಹೋಗುವ ಕೆಲವು ಸಂಬಂಧಗಳು ನಮ್ಮ ಮನದಲಿ ಅಚ್ಚೊತ್ತಿರುತ್ತದೆ, ಅದರಲ್ಲಿ ಗೆಳೆತನವೂ ಒಂದು. ನಿಜವಾದ ಗೆಳತನಕ್ಕೆ ಪ್ರಾಯದ ಹಂಗಿಲ್ಲ. ಆಸ್ತಿ, ಅಂತಸ್ತಿನ ಕಿಮ್ಮತ್ತಿರಲ್ಲ. ಮೇಲು ಕೀಳೆಂಬ ಭೇದ ಭಾವವಿಲ್ಲ. ಹೆಣ್ಣು ಗಂಡೆಂಬ ತಾರತಮ್ಯವಿಲ್ಲ. ಇಲ್ಲಿ ಬೇಕಾಗುವುದು ನಿರ್ಮಲವಾದ ಮನಸ್ಸು ಮಾತ್ರ. ಅಂತಹ ಸ್ನೇಹಕ್ಕೆ ನಮಗೆ ಪುರಾಣಗಳಲ್ಲೂ ಉದಾಹರಣೆಗಳು ಸಿಗುತ್ತದೆ. ಅವುಗಳಲ್ಲಿ ಕೃಷ್ಣ- ಕುಚೇಲರ ಕಥೆಯೂ ಒಂದು. ಕುಚೇಲ ತನ್ನ ಗೆಳೆಯನಾದ ಕೃಷ್ಣನ ಮನೆಗೆ ಸಹಾಯ ಕೇಳಲು ಬಂದು ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ, ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿಕೊಂಡ್ಡಿದ್ದನ್ನು ಕಂಡು ಸ್ವತ: ಕೃಷ್ಣನೆ ಮಿತ್ರ ನನಗೇನು ಏನು ತಂದಿದ್ದೀಯಾ? ಎನ್ನುತ್ತಾನೆ ಆಗ ಗಂಟನ್ನು ನೋಡಿ, ತಾನೆ ಗಂಟನ್ನು ಬಿಚ್ಚಿ ಅದರಲ್ಲಿದ್ದ ಅವಲಕ್ಕಿಯನ್ನು ತೆಗೆದುಕೊಂಡು “ನೋಡು ರುಕ್ಮಿಣಿ ಎಷ್ಟು ರುಚಿಯಾಗಿದೆ ನನ್ನ ಗೆಳೆಯ ತಂದಿರುವುದು” ಅಂತ ರುಕ್ಮಿಣಿಯ ಜೊತೆ ತಿನ್ನುತ್ತಾನೆ ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲನ ಬಡತನವನ್ನು ಶ್ರೀ ಕೃಷ್ಣ ಹೋಗಲಾಡಿಸುತ್ತಾನೆ.
ಇನ್ನು ದುರ್ಯೋಧನ ಕರ್ಣರೂ ಕೂಡ ಅಸಾಮಾನ್ಯ ಸ್ನೇಹಿತರು. ಒಮ್ಮೆ ಕರ್ಣ ದುರ್ಯೋಧನನ ಪತ್ನಿ ಭಾನುಮತಿ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಆಕೆಯನ್ನು ಹಿಡಿಯಲು ಹೋಗುತ್ತಾನೆ. ಆಕಸ್ಮಿಕವಾಗಿ ಆಕೆಯ ಮುತ್ತಿನ ಸರ ಕಿತ್ತು ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ. ಆ ವೇಳೆ ಅಲ್ಲಿಗೆ ಬಂದ ದುರ್ಯೋಧನ ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ, ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ, “ಕರ್ಣ ನನಗೆ ನಿನ್ನಲ್ಲಿ ನಂಬಿಕೆಯಿದೆ” ಎಂದು ದುರ್ಯೋಧನನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ದುರ್ಯೋಧನನಿಗೆ ತನ್ನ ಗೆಳೆಯನಲ್ಲಿ ನಂಬಿಕೆ ವಿಶ್ವಾಸವಿತ್ತು.
ದುರ್ಯೋಧನ ಎಂದರೆ ಕುರುಸಾರ್ವಭೌಮ, ಹಠಮಾರಿ, ಕ್ರೂರಿ, ಆದರೆ ಕರ್ಣನ ಪಾಲಿಗೆ ಅಂತರಂಗದ ಬಂಧು, ಅಣ್ಣನಂಥ ಆತ್ಮ ಬಂಧು, ಇಡೀ ಜಗತ್ತೇ ಕರ್ಣನನ್ನು ಸೂತಪುತ್ರ ಎಂದು ಹಂಗಿಸಿದಾಗ ಅಂಗರಾಜ್ಯದ ಕಿರೀಟ ತೊಡಿಸಿದವನು ದುರ್ಯೋಧನ ಎನ್ನುವುದು ವಿಶೇಷ. ಅಂಥ ಗೆಳೆಯನಿಗೆ ಯುದ್ದ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು ಎಂಬ ಆಸೆ ಕರ್ಣನಿಗಿತ್ತು. ಅಂತಹ ಸಂದರ್ಭದಲ್ಲಿ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಾಂಡವರಿಗೆಲ್ಲ ಹಿರಿಯ, ಬಂದು ಪಾಂಡವರ ಜೊತೆ ಸೇರು ಎಂದು ಹೇಳುತ್ತಾನೆ.ಆದರೆ ಕರ್ಣ ನಾನು ರಾಜನಿಗೆ ನಿಷ್ಠನಾಗಿದ್ದೇನೆ. ಹೀಗಾಗಿ ಪಾಂಡವರ ಜೊತೆ ಸೇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇಲ್ಲಿ ಕರ್ಣನಿಗೆ ದುರ್ಯೋಧನನ ಗೆಳೆತನವೇ ಹೆಚ್ಚಾಗಿತ್ತೇ ಹೊರತು, ಅಧಿಕಾರ ಅಂತಸ್ತಲ್ಲ. ಸ್ನೇಹವನ್ನು ವೈನ್ ಗೆ ಹೋಲಿಸಲಾಗುತ್ತದೆ. ಗೆಳೆತನ ವೈನ್ ನಂತೆ ಕಾಲ ಕಳೆದಷ್ಟೂ ರುಚಿಯಗುತ್ತಾ ಹೋಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ನಾವು ಬಯಸಲಿ ಬಿಡಲಿ, ನಮ್ಮ ಅರಿವಿಗೆ ಬಾರದಂತೆ ನಾವು ಗೆಳೆತನದ ನವಿರಾದ ಬಳ್ಳಿಗಳನ್ನು ನಮ್ಮ ಸುತ್ತಲೂ ಹಬ್ಬಿಸಿಕೊಂಡಿರುತ್ತೇವೆ. ಅಂತಹ ಗೆಳೆತನದ ಸವಿಯನ್ನು ಸವಿಯುತ್ತಾ ಬದುಕುವುದನ್ನು ಕಲಿತು ಮುಂದಿನ ಪೀಳಿಗೆಗೆ ದಾರಿ ದೀಪವಾಗೋಣ...
✍ಲಲಿತಶ್ರೀ ಪ್ರೀತಂ ರೈ