ಹೌದು ತಾಯಿಯೇ ಮೊದಲ ಪಾಠ ಶಾಲೆ. ತಾಯಿ ಹೇಳಿಕೊಡುವ ಪಾಠ ನಮ್ಮ ಜೀವನದ ದಾರಿ ದೀಪವಾಗಿರುತ್ತದೆ. ಹುಟ್ಟಿಸಿದ ತಂದೆಯಾದರೂ ತನ್ನ ಸ್ವಾರ್ಥಕ್ಕೋಸ್ಕರ ಮಕ್ಕಳಿಗೆ ಕೆಟ್ಟವರಾಗಬಹುದು ಆದರೆ ತಾಯಿ ಹಾಗೆ ಇರಲು ಸಾದ್ಯವೇ ಇಲ್ಲ. ಮಕ್ಕಳಿಗೋಸ್ಕರ ತನ್ನ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು, ಮಕ್ಕಳ ಒಳಿತಿಗಾಗಿ ತಾನು ಮೇಣದ ಬತ್ತಿಯಂತೆ ಉರಿದು ಹಾಗೇ ಕರಗುವವಳು ತಾಯಿ. ಮನುಷ್ಯರಲ್ಲಿ ಹೇಗೆ ತಾಯಿಯ ಪ್ರೀತಿ ದೊಡ್ಡದೋ ಹಾಗೆ ಪ್ರಾಣಿ ಪಕ್ಷಿಗಳಲ್ಲೂ ತಾಯಿ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ ಹಾಗೇ ನೋಡಿಯೂ ಇದ್ದೇವೆ. ಪುಟ್ಟ ಮಗುವಿರುವಾಗಲೇ ತಾಯಿ ಮಗುವಿನಲ್ಲಿ ಸಂಭಾಷಣೆ ಶುರುವಾಗುತ್ತದೆ. ಮಗು ತೊದಲು ಮಾತನಾಡಲು ಶುರು ಮಾಡಿತೆಂದರೆ ಸಾಕು ಅಮ್ಮನ ಪಾಠ ಇನ್ನೂ ಹೆಚ್ಚಾಗುತ್ತದೆ. ಅಮ್ಮನ ಕೈಯ ಕಿರುಬೆರಳು ಹಿಡಿದು ನಡೆಯುವಾಗ ನನಗೆ ನೆನೆಪಿರುವ ಅಮ್ಮನ ಮೊದಲ ಪಾಠ "ದೊಡ್ಡವರಿಗೆ ಮರ್ಯಾದೆ ಕೊಡಬೇಕು ಮಗು". ಅಮ್ಮನ ಮಾತಿಗೆ ಪ್ರಶ್ನೆ ಕೇಳದೇ ಇರಲು ಸಾದ್ಯವೇ? ತೊದಲು ನುಡಿಯಿಂದ ಕೇಳಿಯೇ ಬಿಟ್ಟೆ " ದೊಡ್ಡವರೆಂದರೆ ಯಾರಮ್ಮ" ಅಮ್ಮ ತಟ್ಟನೆ ನಗುತ್ತಾ, ಅದೇ ಪ್ರೀತಿಯಿಂದ ನಿನಗಿಂತ ದೊಡ್ಡವರೆಲ್ಲರೂ ದೊಡ್ಡವರು ಕಂದ. ಅದರೆ ಅಮ್ಮನ ಪಾಠದಲ್ಲಿ, ನನಗಿಂತ ಯಾವುದರಲ್ಲಿ ದೊಡ್ಡವರು, ನನಗಿಂತ ಯಾರು ದೊಡ್ಡವರಾಗುತ್ತಾರೆ ಎನ್ನುವುದನ್ನು ಹೇಳಲು ಮರೆತಿದ್ದರೋ ಅಥವಾ ನನ್ನ ಮುಗ್ಧ ಪ್ರಶ್ನೆಯಲ್ಲಿರುವ ನನಗೆ ಅರಿಯದ ಒಳ ಅರ್ಥ ಅವರ ಅರಿವಿಗೆ ಬಂದಿತ್ತೋ ಗೊತ್ತಿಲ್ಲ. ನನಗಂತೂ ನನ್ನ ಅಮ್ಮ ಹೇಳಿದ "ದೊಡ್ಡವರು" ಪದ ಇಂದಿಗೂ ತುಂಬಾ ಗೊಂದಲವನ್ನುಂಟು ಮಾಡುತ್ತಿರುತ್ತದೆ. ನಿಮಗೂ ಕೆಲವು ಸಲ "ದೊಡ್ಡವರು" ಯಾರೆಂಬ ಸಂಶಯ ಬಂದಿರಬಹುದಲ್ಲವೇ. ನನ್ನ ಗೊಂದಲ ಒಂದೊಂದು ಸಲ ಈ ಸಮಾಜದಲ್ಲಿ ನಾವು ನೋಡುವ ಒಬ್ಬೊಬ್ಬರಲ್ಲೂ ಉತ್ತರ ಹುಡುಕಲು ಶುರು ಮಾಡಿ ಬಿಡುತ್ತದೆ. ಕೆಲವರ ಮಾತು, ನಡವಳಿಕೆಗಳು ಗೊಂದಲಕ್ಕೆ ಉತ್ತರ ಕೊಡುವ ಬದಲು ನಗು ತರಿಸುತ್ತದೆ. ಹೌದು ಯಾರು ದೊಡ್ಡವರು? ವಯಸ್ಸಿನಲ್ಲಿ ನಮಗಿಂತ ದೊಡ್ಡವರಾದರೆ ಅವರು ನಮಗಿಂತ ದೊಡ್ಡವರೇ? ಅದು ಹೇಗೆ ಸಾದ್ಯ? ವಯಸ್ಸಿನಲ್ಲಿ ದೊಡ್ಡವರಾದರೂ ಮನಸ್ಸಿನಲ್ಲಿ ಬರೀ ಅಸೂಯೆ, ಇನ್ನೊಬ್ಬರ ವಿಷಯ ಇರಲಿ, ತನ್ನವರ ಒಳಿತನ್ನೇ ಬಯಸದವರು, ಅಹಂಕಾರಗಳನ್ನೇ ಮೈದುಂಬಿಸಿಕೊಂಡಿರುವ ಇವರನ್ನು ನಮಗಿಂತ ದೊಡ್ಡವರೆಂದು ತಲೆ ಬಾಗಬಹುದು ಆದರೆ ಗೌರವ ಹೇಗೆ ಮೂಡಲು ಸಾದ್ಯ ? ಆಸ್ತಿ, ಅಂತಸ್ತಿನಲ್ಲಿ ಅವರು ನಮಗಿಂತ ದೊಡ್ಡವರೆ? ಇರಬಹುದು ಎಂದು ಒಪ್ಪಿಕೊಳ್ಳೋಣ. ಈ ಸಮಾಜದಲ್ಲಿ ಆಸ್ತಿ ಅಂತಸ್ತಿಗೆ ಇರುವ ಮರ್ಯಾದೆ ಗುಣ ನಡತೆಗಿಲ್ಲ. ಕೊಲೆಗಡುಕನಾದರೂ ಅವನಲ್ಲಿ ಆಸ್ತಿ ಇದ್ದರೆ ಸಾಕು ಕೊಲೆಯ ವಿಚಾರವನ್ನೇ ಬೇಕಾದರೂ ಮರೆತು ಬಿಡುತ್ತಾರೆ. ಅವನಲ್ಲಿರುವ ಆಸ್ತಿ ಕರಗಲು ಶುರುವಾದರೆ ಅವನ ಮೇಲಿನ ಗೌರವ ತಾನಾಗಿಯೇ ಕರಗುವುದು ನಿಶ್ಚಿತ. ಇಂತವರನ್ನು ನೋಡಿದಾಗ ಗೊಂದಲ ಮತ್ತೆ ತಲೆ ಎತ್ತುತ್ತದೆ. ಆಸ್ತಿ ಅಂತಸ್ತು ಇದ್ದವರಿಗೆ ಗೌರವ ಕೊಡಬೇಕೇ? ಯಾಕೆ ಕೊಡಬೇಕು? ಇವತ್ತು ಇದ್ದ ಆಸ್ತಿ ನಾಳೆ ನೀರಿನಂತೆ ಕರಗಬಹುದು. ಹಾಗೆ ಕರಗಿದಾಗ ಗೌರವ ಕೊಡುವುದು ಬೇಡವೇ?. ಪ್ರೀತಿ ಪ್ರೇಮದಲ್ಲಿ ನಮಗಿಂತ ದೊಡ್ಡವರೆ? ಇಂತವರಿಗೆ ನಾವು ಗೌರವ ಕೊಡಲೇ ಬೇಕು. ಇಂತಹ ಸಮಯದಲ್ಲಿ ನನ್ನ ಗೊಂದಲ ತುಟಿ ಪಿಟಿಕ್ ಎನ್ನುವುದಿಲ್ಲ. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಎನ್ನುವ ಹಾಗೆ ಇಂತವರು ನಮ್ಮ ಜೀವನದಲ್ಲಿ ಇಣುಕುವುದುಂಟು. ಇಂತವರ ಮಾತು, ನಗು ಶುದ್ದವಾಗಿ ಕಾಣಿಸುತ್ತದೆ. ಅಂತವರಲ್ಲಿ ಮಾತಾಡುತ್ತಿದ್ದರೆ ನಮಗೂ ಅದೇನೋ ಖುಷಿ. ಅವರ ಪ್ರತಿ ಮಾತಿನಲ್ಲೂ ನಮ್ಮ ಏಳಿಗೆಗೆ ಅರಸುತ್ತಿರುವ ಭಾವನೆ ಮೂಡದಿರದು. ಇಂತವರು ದೊಡ್ಡವರು ಆಗದಿರಲು ಹೇಗೆ ಸಾಧ್ಯ ನೀವೇ ಹೇಳಿ?. ಹಾಃ ಕೆಲವು ಸಲ ನಮಗಿಂತ ವಯಸ್ಸಿನಲ್ಲಿ ಚಿಕ್ಕವರಿರುತ್ತಾರೆ ಆದರೆ ಅವರ ಮನಸ್ಸಿನಲ್ಲಿ ದೊಡ್ಡತನವನ್ನು ಕಾಣಬಹುದು. ಇಂತವರಿಗೆ ಗೌರವ ಬೇಡವೇ? ಬೇಡ ಎಂದರೆ ಏಕೆ ಬೇಡ? ಆದರೆ ಬೇಕು ಅಂತ ನಮ್ಮ ಅಂತರಾತ್ಮ ಹೇಳದೆ ಬಿಡದು. ಹೌದು ಅಮ್ಮ ಹೇಳಿದ ದೊಡ್ಡವರನ್ನು ಹುಡುಕುತ್ತಾ ಹೋದರೆ ಇಂತಹ ಸಾವಿರಾರು ಗೊಂದಲಗಳು ಕಾಡುತ್ತಾ ಹೋಗುತ್ತದೆ. ಹಾಗಂತ ನನ್ನ ಅಮ್ಮ ಹೇಳಿದ ದೊಡ್ಡವರ ಪರಿಕಲ್ಪನೆ ಸರಿ ಇಲ್ಲ ಎನ್ನಲು ಸಾದ್ಯವಿಲ್ಲ. ನನ್ನ ಅಮ್ಮ ಮುಗ್ಧೆ, ಓದು ಬರಹ ಕಲಿಯದ್ದಿದ್ದರೂ ಜೀವನದ ಪಾಠಶಾಲೆಯಲ್ಲಿ ಪಿ ಎಚ್ ಡಿ ಮುಗಿಸಿದ್ದರು. ಆದರೆ ನಾವು ಶಾಲೆಯಲ್ಲಿ ಕಲಿಯುವುದರ ಜೊತೆಗೆ ಜನರ ಜೊತೆ ಬೆರೆತಾಗ ಅವರ ಮಾತು ನಡತೆಯ ಬಗ್ಗೆ ವಿಮರ್ಶೆ ಮಾಡುವ ಶಕ್ತಿಯೂ ಬೆಳೆಯುತ್ತಾ ಹೋಗುತ್ತದೆ. ಆಗ ಇಂತಹ ಗೊಂದಲಗಳು ನಮ್ಮನ್ನು ಕಾಡುತ್ತದೆ. ಇಲ್ಲಿಯವರೆಗೆ ಇನ್ನೊಬ್ಬರಲ್ಲಿ ದೊಡ್ಡವರನ್ನು ಹುಡುಕುವ ನೀನೆಷ್ಟು ದೊಡ್ಡವಳು ಅಂತ ಆಗಾಗ ನನ್ನ ಅಂತರಾತ್ಮ ನನಗೇ ಒದೆಯುವುದುಂಟು. ಹೌದು ನಾವೆಷ್ಟು ದೊಡ್ಡವರು?. ನಾವು ಯಾವಾಗ ಇನ್ನೊಬ್ಬರ ಕಣ್ಣಿಗೆ ದೊಡ್ಡವರಾಗಿ ಕಾಣುತ್ತೇವೆ? ಇದಕ್ಕೂ ನಮ್ಮ ಅಮ್ಮ ಒಂದು ಉತ್ತರ ಹೇಳಿದ್ದರು "ನಿನ್ನಿಂದ ಸಾದ್ಯವಾದರೆ ಇನ್ನೊಬ್ಬರಿಗೆ ಉಪಕಾರ ಮಾಡು. ಸಾಧ್ಯ ಇಲ್ಲ ಎಂದಾದರೆ ಸುಮ್ಮನೆ ಇದ್ದು ಬಿಡು, ಅಪಕಾರ ಮಾಡುವ ಗೋಜಿಗೆ ಹೋಗಬೇಡ" ಉಪಕಾರ ಮಾಡಿದವನು ಎಷ್ಟು ದೊಡ್ಡವನೊ, ಅಪಕಾರ ಮಾಡದಿರುವವನು ಅಷ್ಟೇ ದೊಡ್ಡವನು ಎನ್ನುವುದು ಅಮ್ಮನ ಮಾತಾಗಿತ್ತು. ಹೌದು ಇನ್ನೊಬ್ಬರಿಗೆ ಕೆಡುಕು ಬಯಸದೆ, ಇನ್ನೊಬ್ಬರ ಮೇಲೆ ಅಸೂಯೆ ಪಡದೆ ಇನ್ನೊಬ್ಬರ ಒಳಿತಿಗೆ ಹಾರೈಸಿ ನಾವು ದೊಡ್ಡವರೆನಿಸಿಕೊಳ್ಳೋಣ..............