ಮನುಷ್ಯ ಈ ಭೂಮಿ ಮೇಲೆ ತಾನು ತನ್ನದೆಂದು ಎಷ್ಟೇ ಮೆರೆದರೂ ದೇವರ ಮುಂದೆ ಬರೀ ಶೂನ್ಯನಾಗಿ ನಿಲ್ಲಲೇಬೇಕು. ಅದಕ್ಕೆ ಉದಾಹರಣೆಗೆ ಪ್ರಕೃತಿ ವಿಕೋಪ. ಅಂದರೆ ಅತಿವೃಷ್ಟಿ, ಅನಾವೃಷ್ಟಿ, ಹವಾಮಾನದ ಏರುಪೇರು, ಸುನಾಮಿ, ಪ್ರವಾಹ, ಚಂಡಮಾರುತ, ಭೂಕಂಪ ಮೊದಲಾದವುಗಳು. ಈ ಪ್ರಕೃತಿ ವಿಕೋಪಕ್ಕೆ ಎಷ್ಟೋ ಜೀವಗಳು ಬಲಿಯಾಗಿವೆ ಹಾಗೆ ಮಾನವ ನಿರ್ಮಿತ ಕಟ್ಟಡಗಳೂ ಧರೆಗುಳಿರುವುದು ನಾವು ಕಂಡಿದ್ದೇವೆ. ಮನುಷ್ಯ ಮಾಡುತ್ತಿರುವ ಅನ್ಯಾಯ, ಅಕ್ರಮಗಳನ್ನು ನೋಡಿ, ತಾಳಲಾರದೆ ಆ ದೇವನು ಮುನಿಸಿಕೊಂಡಾಗ ಮಾತ್ರ ಇಂತಹ ಘಟನೆಗಳು ನಡೆಯುತ್ತಿದೆಯೇನೋ ಎನ್ನುವುದು ನನ್ನ ಅನಿಸಿಕೆ. ಇನ್ನು ಮಹಾಮಾರಿ ರೋಗಗಳು ಕೂಡ ಮನುಷ್ಯನನ್ನು ಹಿಂಡದೇ ಬಿಡಲಿಲ್ಲ. ಈ ಹಿಂದೆ ಪ್ಲೇಗ್, ಸಿಡುಬು, ಇನ್ಪು÷್ಲಯೆಂಜಾ, ಮಲೇರಿಯಾ, ವಿಷಮಶೀತಜ್ವರ ಇನ್ನು ಆಫೀಕಾದಲ್ಲಿ ಶುರುವಾದ ಎಬೋಲಾ ಹೀಗೆ ಹಲವಾರು ಮಾರಕ ರೋಗಗಳು ಮನುಕುಲವನ್ನು ಬೆನ್ನು ಬಿಡದೇ ಕಾಡಿದೆ, ಹಾಗೇ ಕಾಡುತ್ತಿದೆ. ಹಾಗೇ ಕಾಡುತ್ತಿರುವ ಮಹಾಮಾರಿಯಲ್ಲಿ ಕೋವಿಡ್ ೧೯ ನಾವು ಕಂಡ ಅತೀ ಕ್ರೂರ ಕಾಯಿಲೆ ಎನ್ನಬಹುದು, ಯಾಕೆಂದರೆ ಈ ಹಿಂದೆ ಬಂದ ರೋಗಗಳಿಗೆ ನಮ್ಮ ಕಾಲಕ್ಕೆ ಔಷದಿ ಹುಡುಕಿಯಾಗಿದೆ. ಹಾಗಾಗಿ ಆ ರೋಗಗಳ ಪ್ರಖರತೆ ನಮ್ಮನ್ನು ತಟ್ಟಲಿಲ್ಲ. ಆದರೆ ಕೋವಿಡ್ ಎಲ್ಲರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಈ ಮಹಾಮಾರಿ ಮನುಷ್ಯ, ಮನುಷ್ಯನಿಂದಲೇ ಮಾರು ದೂರ ಓಡುವ ಹಾಗೆ ಮಾಡಿದೆ. ನಾನು ನನ್ನವರೆಂದು ಪಾಶ್ಚಾತ್ಯರ ಶೈಲಿಯಲ್ಲಿ ಬಿಗಿದಪ್ಪುತ್ತಿದ್ದವರು ಅಪ್ಪಟ ಭಾರತೀಯ ಶೈಲಿಯಲ್ಲಿ ಕೈಮುಗಿದು ಆದರಿಸುವಂತೆ ಮಾಡಿದೆ. ಇಂತಹ ಮಹಾಮಾರಿಯ ಹೊಡೆತಕ್ಕೆ ಇಡೀ ಜಗತ್ತೇ ನಲುಗಿದೆ ಎಂದರೆ ತಪ್ಪಾಗಲಾರದು. ಮಹಾಮಾರಿ ಹರಡಲು ವೈರಸ್‌ನ ಪ್ರಭಾವ ಎಷ್ಟಿದೆಯೋ ಹಾಗೆ ಮನುಷ್ಯನ ನಿರ್ಲಕ್ಷö್ಯವೂ ಕಾರಣವಾಗಿದೆ. ಕೆಲವರು ಕೋವಿಡ್ ಎನ್ನುವ ಖಾಯಿಲೆಯೇ ಇಲ್ಲ ಎನ್ನುವ ಹಾಗೆ ವರ್ತಿಸಿದರೆ ಇನ್ನು ಕೋವಿಡ್ ನ ಆಟಾಟೋಪಕ್ಕೆ ಸಿಲುಕಿ ನಲುಗಿದವರು ಭಯದಲ್ಲಿ ಇನ್ನೂ ನಡುಗುತ್ತಿದ್ದಾರೆ. ಭಾರತದಂತಹ ಅತೀ ಜನಸಂಖ್ಯೆಯುಳ್ಳ ದೇಶದಲ್ಲಿ ಇಂತಹ ಮಾಹಾಮಾರಿಯನ್ನು ನಿಬಾಯಿಸುವುದು ಬಹಳ ಕಷ್ಟದ ಕೆಲಸ. ಆದರೂ ನಮ್ಮ ಸರಕಾರ ದಿಟ್ಟ ಹೆಜ್ಜೆ ಇಟ್ಟು ಈ ಸವಾಲನ್ನು ಸ್ವೀಕರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿನ ಕಾಲದಲ್ಲಿ ಇಂತಹ ಘೋರ ಕಾಯಿಲೆಗಳು ಕಾಡಿದಾಗ ಊರಿಗೆ ಊರೇ ಸ್ಮಶಾನವಾಗುತ್ತಿದ್ದವು ಅಂತ ಅಮ್ಮ ಹೇಳುತ್ತಿದ್ದರು. ಆದರೆ ಈಗಿನ ಕಾಲದ ಪರಿಸ್ಥಿತಿಯೇ ಬೇರೆ, ಈಗ ಎಲ್ಲಾ ತರದ ಸೌಲಭ್ಯಗಳು ನಮಗೆ ದೊರಕುತ್ತಿದೆ. ವೈಧ್ಯಕೀಯ, ಆರ್ಥಿಕ, ಶೈಕ್ಷಣಿಕವಾಗಿ ನಾವು ಮುಂದುವರಿದಿದ್ದೇವೆ. ಆದರೂ ಕೆಲವು ವಿಧ್ಯಾವಂತರು ಅವಿಧ್ಯಾವಂತರಿಗೂ ಕೀಳಾಗಿ ವರ್ತಿಸುವುದನ್ನು ಈ ಕೋವಿಡ್ ಸಂದರ್ಭದಲ್ಲಿ ನಾವು ಗಮನಿಸಿರಬಹುದು. ಅದರಲ್ಲೂ ಪೇಟೆಗಳಲ್ಲಿ ಇಂತಹವರನ್ನು ಹೆಚ್ಚಾಗಿ ನೋಡಿರಬಹುದು. ಕೋವಿಡ್ ಅತೀಯಾಗಿ ಹರಡಿ, ಸರಕಾರ ಲಾಕ್ಡೌನ್ ಆದೇಶಿಸಿದ್ದರೂ ಅಂಗಡಿ ಮುಂಗಟ್ಟುಗಳಲ್ಲಿ ಜನರ ನಡವಳಿಕೆ ನೋಡಿದರೆ ಭಯ ಹುಟ್ಟಿಸುವಂತಿರುತ್ತದೆ. ಸರಕಾರ ಎಷ್ಟೇ ರೋಗದ ಗಾಂಬೀರ್ಯತೆಯನ್ನು ಮನವರಿಕೆ ಮಾಡಲು ಪ್ರಯತ್ನಿಸಿದರೂ ನಮ್ಮ ಕೆಲವು ಜನಕ್ಕೆ ಅದರ ಅರಿವೇ ಆಗಲಿಲ್ಲ. ಅದರ ಪರಿಣಾಮವಾಗಿ ಊರು ಸ್ಮಶಾನದ ಹಾದಿ ತುಳಿಯುವಂತಾಯಿತು. ಹೌದು ಸರಕಾರದ ಜವಾಬ್ಧಾರಿ ಏನು? ನಮ್ಮ ಬಾಯಿಗೆ ಊಟ ಕೊಡಬಹುದು ಆದರೆ ಅದನ್ನು ಜಗಿದು ನುಂಗುವುದು ನಮ್ಮ ಕೆಲಸವಾಗಬೇಕು, ಅಂದರೆ ಸರಕಾರ ನಮಗೆ ಅರಿವು ಮೂಡಿಸಬಹುದು ಅದನ್ನು ತಿಳಿದು ಮುನ್ನಡೆಯುವ ಜವಾಬ್ಧಾರಿ ನಮ್ಮದಲ್ಲವೆ?. ಮುಖದಲ್ಲೊಂದು ಮಾಸ್ಕ್ ಇದ್ದರೆ ತನ್ನ ಸೌಂದರ್ಯವನ್ನು ಎಲ್ಲಿ ಮರೆಮಾಚಿದಂತಾಗುವುದೋ, ಅಥವಾ ಎಲ್ಲಿ ಸೌಂದರ್ಯ ಕಳೆಗುಂದುವುದೋ ಎನ್ನುವ ಭಾವನೆ ಇರಬೇಕು ಕೆಲವರಿಗೆ. ನಾವೊಬ್ಬರು ಮಾಸ್ಕ್ ಹಾಕುವುದರಿಂದ ನಮ್ಮ ಜೊತೆಗೆ ನಮ್ಮ ಮನೆ, ಪರಿವಾರದವರನ್ನು ಈ ಕೋವಿಡ್ ಎನ್ನುವ ಮಹಾಮಾರಿಯಿಂದ ಕಾಪಾಡಬಹುದು ಎನ್ನುವ ಸಾಮಾನ್ಯ ಪ್ರಜ್ಙೆಯೂ ನಮ್ಮ ಕೆಲವರಲ್ಲಿ ಕಂಡುಬರುತ್ತಿಲ್ಲ. ಹಾಗೇ ದೈಹಿಕ ಅಂತರದ ವಿಷಯಕ್ಕೆ ಬಂದರೆ ಅದನ್ನು ಮರೆತೇ ಬಿಟ್ಟಿದ್ದಾರೆ ಬಿಡಿ. ಈ ರೀತಿ ಎಲ್ಲರೂ ಇದ್ದಾರೆ ಎನ್ನುವುದಿಲ್ಲ ಶೇ. ೩೦%ರಷ್ಟು ಜನರಿಗೆ ಕೋವಿಡ್ ನ ಪ್ರಖರತೆ ಇನ್ನೂ ತಿಳಿದಿಲ್ಲ ಎನ್ನಬಹುದು. ಸಾಮಾನ್ಯ ಜನರ ದಾರಿ ಈ ರೀತಿಯಾದರೆ ಜನ ನಾಯಕರದು ಇನ್ನೊಂದು ದಾರಿ. ತನ್ನ ಸುತ್ತಲೂ ಜನ ಸಾಗರವನ್ನು ಸೇರಿಸಿಕೊಂಡು ಓಡಾಡುವುದೆಂದರೆ ಅವರಿಗೇನೋ ಹೆಮ್ಮೆ. ಅವರ ಹಿಂಬಾಲಕರು ಹಾಗೆಯೆ. ಇಂತವರ ಸುತ್ತ ಜೇನು ನೊಣಗಳಂತೆ ತುಂಬಿಕೊAಡಿರುತ್ತಾರೆ. ಇದರಿಂದ ಜನನಾಯಕನಿಗೇನೋ ತನ್ನ ಶಕ್ತಿ ಪ್ರದರ್ಶನ ಮಾಡಿದ ಹಾಗೆ ಕಾಣಬಹುದು ಆದರೆ ನಾಳೆ ತಮ್ಮ ಕೈಯಲ್ಲಿ ಅಧಿಕಾರ, ಹಣ ಇಲ್ಲದಿರುವಾಗ ಇವರಾರು ತನ್ನ ಸುತ್ತಾ ಇರುವುದಿಲ್ಲ ಎನ್ನುವ ಸತ್ಯ ತಿಳಿಯದಿರುವುದಿಲ್ಲ ನಮ್ಮ ಜನ ನಾಯಕರಿಗೆ. ಬೇರೆ ಸಂದರ್ಭದಲ್ಲಿ ಸಾಯಲಿ ಕೋವಿಡ್ ಸಂದರ್ಭದಲ್ಲೂ ಕೆಲ ಶಾಸಕರ ವರ್ತನೆ ಹೀಗೆ ಇರುವುದನ್ನು ನಾನು ಕಂಡಿದ್ದೇನೆ. ಇವರಿಗೇನೋ ಕಾಯಿಲೆ ಬಂದರೆ ಸರಕಾರದ ಹಣವಿದೆ ಹಾಗೆ ಕ್ವಾರಂಟೈನ್ ಗೆ ಬಂಗಲೆಯಿದೆ ಆದರೆ ಇವರ ಸುತ್ತ ಸುತ್ತುವ ಸಾಮಾನ್ಯ ಮನುಷ್ಯನ ಪರಿ ಏನು ನೀವೇ ಹೇಳಿ, ಜನರ ಯೋಗಕ್ಷೇಮ ನೋಡಿಕೊಳ್ಳಬೇಕಾದ ಇವರೇ ಹೀಗಾದರೆ ಬೇಲಿಯೇ ಬಂದು ಹೊಲ ಮೇಯಿದಂತಲ್ಲವೆ?. ಈ ಜನರನ್ನು ಸರಿ ಮಾಡಲು ಸಾಧ್ಯವಿಲ್ಲ ಹಾಗಾಗಿ ನಾವೇ ಜಾಗ್ರತರಾಗಿ ಇರಬೇಕು. ಬೇರೆಯವರು ಮಾಸ್ಕ್ ಧರಿಸುತ್ತಾರೋ ಇಲ್ಲವೋ ನಾವು ದರಿಸೋಣ, ದೈಹಿಕ ಅಂತರ ಪಾಲಿಸೋಣ. ಸಮಾಜದ ಚಿಂತೆ ನಮಗಿಲ್ಲದಿದ್ದರು ನಮ್ಮ ಮನೆಮಂದಿಯ ಸೌಖ್ಯಕ್ಕೋಸ್ಕರ ಆದರೂ ಕೋವಿಡ್ ನಿಯಮ ಪಾಲಿಸೋಣ. ಹೀಗೆ ಎಲ್ಲರೂ ಯೋಚಿಸಿದಾಗ ಮಾತ್ರ ನಮ್ಮ ಸಮಾಜ ಸ್ವಸ್ಥವಾಗಿಲು ಸಾಧ್ಯ. ಅದರೊಂದಿಗೆ ನಾವು ನಮ್ಮ ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಯಾಮ, ಯೋಗದ ಜೊತೆಗೆ ನಮ್ಮ ಹಿರಿಯರು ಅಯಾಯ ಋತುಗಳಿಗೆ ಅನುಸಾರವಾಗಿ ನಮ್ಮ ಪ್ರಕೃತಿಯಲ್ಲಿಯೇ ದೊರೆಯುವ ಔಷಧೀಯ ಆಹಾರಗಳ ಬಗ್ಗೆ ತಿಳಿಸಿದ್ದಾರೆ. ಇವೆಲ್ಲವೂ ನಮ್ಮ ದೇಹದ ರೋಗನಿರೋದಕ ಶಕ್ತಿಯ ವೃದ್ಧಿಗೆ ಸಹಕಾರಿ. ಇವೆಲ್ಲದರ ಜೊತೆಗೆ ನಮ್ಮ ಮನೆ, ಮನಸ್ಸನ್ನು ನಿರ್ಮಲವಾಗಿಟ್ಟುಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.