ಪ್ರಾಣ ಒಂದು ನೀರಿನ ಗುಳ್ಳೆಯಂತೆ ಅದು ಯಾವ ಕ್ಷಣದಲ್ಲಿ ಬೇಕಾದರೂ ಹಾರಿ ಹೋಗಬಹುದು. ಅದಕ್ಕೆ ಪುರಂಧರದಾಸರು “ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ” ಅಂತ ತನ್ನ ದಾಸ ವಾಣಿಯಲ್ಲಿ ಹೇಳಿರಬೇಕು. ಈಗ ನಮ್ಮ ಕಣ್ಣ ಮುಂದೆ ಇದ್ದ ಜೀವ ಇನ್ನೊಂದು ಕ್ಷಣದಲ್ಲಿ ಕಟ್ಟಿಗೆಯ ತುಂಡಿನಂತೆ ಮಲಗಿಬಿಡಬಹುದು. ಇಂತಹ ಸಾವನ್ನು ನೋಡಿಯೇ ಗೌತಮ ಎಲ್ಲವನ್ನು ತೊರೆದು ಬುದ್ದನಾಗಿ ಬದಲಾಗಿದ್ದು ಅಲ್ಲವೇ?. ಇರುವಷ್ಟು ದಿನ ನಾನು ನನ್ನದು ಎನ್ನುವ ಅಹಂಕಾರದಲ್ಲಿ ಮೆರೆದು, ಪರರನ್ನು ಹೀಯಾಳಿಸಿ, ಅವಮಾನಿಸಿ ಕೊನೆಗೊಂದು ದಿನ ಈ ಜಗದಲ್ಲಿ ನನ್ನದೆಂಬುದು ಏನು ಇಲ್ಲ ಎಂದು ತಮ್ಮವರನ್ನೆಲ್ಲಾ ಬಿಟ್ಟು ಹೊರಟು ಬಿಡುವ ನಮಗೇಕೆ ಅಹಂಕಾರ?. ಈ ಭೂಮಿಯಲ್ಲಿ ಹುಟ್ಟಿದ ಪ್ರತೀ ಜೀವಿಗೂ ಸಾವು ಕಟ್ಟಿಟ್ಟ ಬುತ್ತಿ. ಇವತ್ತಲ್ಲ ನಾಳೆ ನಾವಾದರೂ ಹೋಗಲೇ ಬೇಕು. ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ. ಹಾಗೆಯೇ ಎಲ್ಲಾ ಧರ್ಮಗಳಲ್ಲಿಯೂ ಮರಣದ ಬಗ್ಗೆ ಅವರವರದೇ ಆದ ದೃಷ್ಟಿಕೋನ, ಕಟ್ಟುಪಾಡುಗಳನ್ನು ನಾವು ನೋಡಬಹುದು. ಮನುಷ್ಯ ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರಿದಿದ್ದರೂ ಅವನಿಗೆ ಇನ್ನೂ ಬೇಧಿಸಲಾಗದ ಒಂದೇ ಒಂದು ವಿಸ್ಮಯವೆಂದರೆ ಅದು ಸಾವು. ಸಾವನ್ನು ಬೇಧಿಸುವ ವಿಷಯ ಬಿಡಿ ಈ ಸಾವಿನ ಬಗ್ಗೆ ಪರಿಪೂರ್ಣವಾದ ವ್ಯಾಖ್ಯಾನವನ್ನೂ ಕೊಡುವುದು ಮನು ಷ್ಯನಿಗೆ ಸಾದ್ಯವಾಗಲಿಲ್ಲ. ಎಷ್ಟೋ ಕಡೆ ಮನುಷ್ಯ ಸತ್ತ ನಂತರ ಹೆಣವನ್ನು ಮನೆಯಿಂದ ಹೊರಗೆ ಇಟ್ಟು ಬಿಡುತ್ತಾರೆ. ಸತ್ತ ವ್ಯಕ್ತಿಯ ಹೆಣವನ್ನು ತನ್ನ ಸ್ವಂತ ಮನೆಯ ಒಳಗೆ ತೆಗೆದುಕೊಂಡು ಹೋಗುವುದೇ ನಿಶಿದ್ಧವಾಗಿರುತ್ತದೆ. ಬದುಕಿರುವಷ್ಟು ದಿನ ತನ್ನ ಮನೆಗಾಗಿ ಜೀವವನ್ನೆ ಸವೆದಿರುತ್ತಾನೆ ಆದರೆ ಹೆಣವಾದ ಮೇಲೆ ಮನೆಯಿಂದ ಹೊರಗೆ ಮಲಗಿರುತ್ತಾನೆ. ಸಾವಿನ ಮರು ಕ್ಷಣವೇ ಸತ್ತ ವ್ಯಕ್ತಿಯ ದೇಹ ಕೊಳೆಯಲು ಆರಂಭಿಸಿಸುತ್ತದೆ. ಹಾಗಾಗಿ ಬೇಗನೆ ಶವಕ್ಕೆ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತದೆ. ಈ ಅಂತ್ಯ ಸಂಸ್ಕಾರದಲ್ಲೂ ಎರಡು ವಿಧಾನಗಳಿವೆ ಹೂಳುವ ಮತ್ತು ಸುಡುವ ಪದ್ದತಿ. ಪ್ರಪಂಚದ ಯಾವುದೋ ಒಂದು ಮೂಲೆಯಲ್ಲಿ ಸತ್ತ ಮನುಷ್ಯನ ದೇಹವನ್ನು ಕಾಡು ಪ್ರಾಣಿಗಳಿಗೆ ಆಹಾರವಾಗಿ ಕೊಡುವ ಪದ್ದತಿಯೂ ಇದೆಯಂತೆ. ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಹಲವು ವಿಧವಾದ ಸೂತಕಗಳನ್ನಂಟಿಸಿಕೊಂಡಿರುತ್ತಾನೆ. ಜಾತಿ ಸೂತಕ, ಜನನ ಸೂತಕ, ಮರಣಸೂತಕ, ಉಚ್ಛಿಷ್ಟ ಸೂತಕ, ರಜೋಸೂತಕ. ಚೆನ್ನ ಬಸವಣ್ಣ 'ಭ್ರಾಂತು ಸೂತಕ' 'ವರ್ಣ ಸೂತಕ'ಗಳನ್ನೂ ಸೇರಿಸಿ "ಇವರೆಂತು ಭಕ್ತರಹರು?" ಎಂದು ಪ್ರಶ್ನಿಸುತಾರೆ. ಅವರ ಪ್ರಕಾರ ಶಿವಲಿಂಗಧಾರಿಗಳಿಗೆ ಯಾವುದೇ ಸೂತಕ ಇರುವುದಿಲ್ಲವಂತೆ “ಗಂಗೆಗೆ ಕಟ್ಟಿಲ್ಲ ಲಿಂಗಕ್ಕೆ ಮುಟ್ಟಿಲ್ಲ” ಎಂಬ ಗಾದೆ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೂತಕದ ಅವಧಿಯಲ್ಲಿ ದೇವಕರ್ಮ ಮಾಡಬಾರದು ಎಂದು ಗರುಡಪುರಾಣ, ಮನುಸ್ಮೃತಿ ಸೇರಿದಂತೆ ಹಲವಾರು ಗ್ರಂಥಗಳಲ್ಲಿ ಉಲ್ಲೇಖಿಸಿರುವುದನ್ನು ನಾವು ಕಾಣಬಹುದು. ಅದರಲ್ಲೂ ಮರಣ ಸೂತಕದ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃ ಕರ್ಮ ಮಾಡುವ ನಿಯಮವನ್ನು ಹೇಳಲಾಗಿದೆ. ಸಂತರಾದವರ ತಂದೆ-ತಾಯಿಯ ಮರಣದ ನಂತರ ಕೇವಲ ಸ್ನಾನ ಮಾಡುವುದರಿಂದ ಸೂತಕವು ಕೊನೆಗೊಳ್ಳುತ್ತದೆ ಎಂದು ಹೇಳಲಾಗಿದೆ. “ರಾಜ ಧರ್ಮಾ ಯತನಂ ಸರ್ವೇಶಾನ್ ತಸ್ಮಾದಾನವರುದ್ಧಃ ಪ್ರೇತ ಪ್ರಸವ ದೋಷಃ” ಅಂತ ಶಂಖಸ್ಮೃತಿಯಲ್ಲಿ ಉಲ್ಲೇಖಿಸಲಾಗಿದೆ. ದೇಶಾಚಾರ ಮತ್ತು ಲೋಕಾಚಾರದ ಪ್ರಕಾರ, 10 ದಿನಗಳನ್ನು ಸಾಮಾನ್ಯ ವಾಗಿ ಸೂತಕದ ಅವಧಿ ಎಂದು ಪರಿಗಣಿಸಲಾಗುತ್ತದೆ. ಮದನ ಪಾರಿಜಾತದಲ್ಲಿ ದೇಶಾಚಾರ ಮತ್ತು ಲೋಕಾಚಾರದ ವಿಚಾರಕ್ಕೆ ಅನುಗುಣವಾಗಿ ಸೂತಕವನ್ನು ಪರಿಗಣಿಸುವುದು ಸೂಕ್ತ ಎಂದು ಸೂಚನೆ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಸಾವಿನ ಸೂತಕಕ್ಕಿಂತಲೂ ಜನನದ ಸೂತಕ ಹೆಚ್ಚು ಪರಿಣಾಮಕಾರಿ ಎಂದು ಬಾವಿಸಲಾಗುತ್ತದೆ ಹಾಗೆಯೇ ಪುರಾಣಗಳಲ್ಲಿ ಕೂಡ ಉಲ್ಲೇಖಿಸಲಾಗಿದೆ. ನಮ್ಮ ಹಿರಿಯರು ಮಾಡಿಕೊಂಡು ಬಂದಿರುವ ಪ್ರತಿ ಆಚರಣೆಗಳಿಗೂ ಅದರದೇ ಆದ ಅರ್ಥವಿದೆ. ಆದರೆ ಇಂತಹ ಆಚರಣೆಗಳು ನಮ್ಮ ಮುಂದಿನ ಪೀಳಿಗೆಗೆ ಮುಟ್ಟುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ಉದಾಹರಣೆಗೆ ಹಿಂದೂ ಸಂಪ್ರದಾಯದಲ್ಲಿ ಮದುವೆಯ ಸಂದರ್ಭದಲ್ಲಿ ಮಾಡುವ ವಿಧಿ ವಿದಾನಗಳೇ ವಿಶಿಷ್ಟಪೂರ್ಣವಾಗಿತ್ತು. ಹಿಂದೆ ವಾರಗಟ್ಟಲೆ ನಡೆಯುತ್ತಿದ್ದ ಮದುವೆ ಸಮಾರಂಭಗಳ ವಿಧಿ ಇಂದು ಒಂದು ದಿನದಲ್ಲಿ ಮುಗಿಯುತ್ತಿದೆ. ಅಂಗಡಿಗಳಲ್ಲಿ ಮಾರುವ ಇನ್ ಸ್ಟಂಟ್ ಅಡುಗೆಯ ಪದಾರ್ಥಗಳಂತಾಗಿದೆ ನಮ್ಮ ಮದುವೆಯ ವೈಭವ. ಇಂದಿನ ಯುವ ಪೀಳಿಗೆಯನ್ನು ಕೇಳಿದರೆ ಮದುವೆ ಎಂದರೆ ಕುಡಿದು, ಕುಣಿದು ಕುಪ್ಪಳಿಸುವುದಷ್ಟೆ. ಅಲ್ಲಿನ ಆಚಾರ ವಿಚಾರಗಳ ಬಗ್ಗೆ ತಿಳಿಯದು. ಇದಕ್ಕೆ ಕಾರಣ ಯಾರು? ಅವರರವರ ಹಿರಿಯರಲ್ಲವೇ?. ಹಿಂದೆ ಒಂದು ಕಾಲವಿತ್ತು ಸಂಬಂದಿಕರ ಮನೆಯಲ್ಲಿ ಮದುವೆ, ಮುಂಜಿ, ಕೊಲ, ನೇಮ ಏನೇ ಇರಲಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ಮರೆಯು ತ್ತಿರಲಿಲ್ಲ. ಹಾಗೆ ಕರೆದುಕೊಂಡು ಹೋದಾಗ ಅಲ್ಲಿ ನಡೆಯುವ ಆಚರಣೆಗಳ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳು ಮೂಡುತ್ತಿದ್ದವು. ಆಗ ತಂದೆ ತಾಯಿ ಅಂತಹ ಆಚರಣೆಗಳ ಬಗ್ಗೆ ವಿವರಿಸುತ್ತಿದ್ದ ಕಾರಣ ನಮ್ಮ ಸಂಸ್ಕೃತಿಯ ಆಚಾರ ವಿಚಾರಗಳು ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿ ಅಚ್ಚೊತ್ತುತ್ತಿತ್ತು. ಆದರೆ ಇಂದು ಮಕ್ಕಳನ್ನು ಕೇವಲ ಮನೋರಂಜನೆ ಇದ್ದ ಕಡೆ ಮಾತ್ರ ಕರೆದುಕೊಂಡು ಹೋಗುವುದು ವಾಡಿಕೆಯಾಗಿದೆ. ಹೀಗಿರುವಾಗ ಮಕ್ಕಳಿಗೆಲ್ಲಿ ತಿಳಿಯಬೇಕು ನಮ್ಮ ಆಚರಣೆಗಳು ನೀವೇ ಹೇಳಿ. ಅದಕ್ಕಾಗಿಯೇ ಮಕ್ಕಳಿರುವಾಗಲೇ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ತಮ್ಮ ಆಚಾರ ವಿಚಾರಗಳ ಬಗ್ಗೆ ತಿಳಿಸಿಕೊಟ್ಟು ಮುಂದಿನ ಪೀಳಿಗಗೆ ದಾರಿ ದೀಪವಾಗಬೇಕು.
✍ ಲಲಿತಶ್ರೀ ಪ್ರೀತಂ ರೈ