ಉಡುಗೊರೆ (gift) ಎಂದ ಕೂಡಲೇ ಎಲ್ಲರ ಕಣ್ಣು ಮನಸ್ಸು ಅರಳುವುದರಲ್ಲಿ ಸಂಶಯವಿಲ್ಲ. ಮಕ್ಕಳಿಗೆ ಹೆತ್ತವರು ಏನಾದರೂ ಉಡುಗೊರೆ (gift)ಕೊಡುತ್ತಾರೆ ಎಂದರೆ ಅದೆಂತದ್ದೋ ಸಂತೋಷ. ಹೆಂಡತಿಗೆ ಗಂಡನೇನಾದರೂ ಉಡುಗೊರೆ ಕೊಡುತ್ತಾನೆಂದರೆ ಅವಳಿಗೆ ಅದೇ ಸ್ವರ್ಗ. ಇದು ಗಂಡ ಹೆಂಡತಿ, ಹೆತ್ತವರು ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಅಣ್ಣ ತಮ್ಮಂದಿರು, ಅಕ್ಕತಂಗಿಯರು, ಗೆಳೆಯ (friend) ಗೆಳತಿಯರು, ಪ್ರೇಮಿಗಳು, ಅಜ್ಜಿ ಮೊಮ್ಮಕ್ಕಳು ಕೊನೆಗೆ ಅಕ್ಕ ಪಕ್ಕದವರು ಕೊಟ್ಟರೂ ಅದು ಖುಷಿಯ ಅನುಭೂತಿಯೇ. ಇಂತಹ ಉಡುಗೊರೆಗಳು ಚಿಕ್ಕದೋ ದೊಡ್ಡದೋ ಎನ್ನುವ ವಿಷಯ ಇಲ್ಲಿ ಬರುವುದಿಲ್ಲ. ಕೆಲವು ಸಮಯ, ಸಂದರ್ಭದಲ್ಲಿ ಅಂತಹ ಉಡುಗೊರೆಗಳಿಗೆ ಬೆಲೆಯೇ ಕಟ್ಟಲಾಗುವುದಿಲ್ಲ ಎಂದರೆ ತಪ್ಪಾಗಲಾರದು. ಇಲ್ಲಿ ನಾನು ಹೇಳುತ್ತಿರುವ ಉಡುಗೊರೆ ಯಾವುದೇ ಸ್ವಾರ್ಥ, ಅಂತಸ್ತುಗಳನ್ನು ಪರಿಗಣಿಸದೇ ಮುಂದುವರಿದಾಗ ಮಾತ್ರ. ಈಗ ಮದುವೆಗಳಲ್ಲಿ ಅದರಲ್ಲೂ ಹೆಚ್ಚಾಗಿ ನಮ್ಮ ಮಂಗಳೂರಿಗರ ಮದುವೆಯಲ್ಲಿ ನಾನು ಗಮನಿಸಿರುವುದು “ಆಮಂತ್ರಣ ಪತ್ರಿಕೆ”ಯಲ್ಲಿ “ಆಶಿರ್ವಾದವೇ ಉಡುಗೊರೆ” ಎನ್ನುವುದನ್ನು ಎಲ್ಲರಿಗೂ ಎದ್ದು ಕಾಣಲಿ ಎಂದು ಸ್ವಲ್ಪ ದಪ್ಪ ಅಕ್ಷರದಲ್ಲಿಯೇ ಬರೆದಿರುತ್ತಾರೆ. ಆದರೂ ಕೆಲವು ಬುದ್ದಿವಂತರು ಹಸೆ ಮನೆಯಲ್ಲಿರುವ ಅವರಿಗೆ ಬೇಕಾದ ಹೆಣ್ಣೋ ಅಥವಾ ಗಂಡಿಗೋ ಉಡುಗೊರೆ ಎಲ್ಲರಿಗೂ ಕಾಣುವ ಹಾಗೇ ನೀಡುವುದುಂಟು. ಇಲ್ಲಿ ನೀಡುವ ಉಡುಗೊರೆ ಹೆಚ್ಚಾಗಿ ಚಿನ್ನದ ರೂಪದಲ್ಲಿಯೇ ಇರುತ್ತದೆ. ಕಾರಣ ಅಲ್ಲಿ (blessing) ಆಶಿರ್ವಾದವೇ ಉಡುಗೊರೆ ಹಾಕಿದ್ದಾರೆ. ಇನ್ನು ಹಣವೋ ಅಥವಾ ಚಿಕ್ಕ ಉಡುಗೊರೆಯೋ ಕೊಟ್ಟು ಅಂತಸ್ತು ಕಡಿಮೆ ಆಗಬಾರದು ಅಲ್ಲವೇ. ಕೆಲವು ಸಲ ಇವರ ಉಡುಗೊರೆಯಿಂದ, ಉಡುಗೊರೆ ತೆಗೆದುಕೊಂಡವರು ಇರಿಸು ಮುರಿಸು ಅನುಭವಿಸುವುದುಂಟು. ಕಾರಣ ಉಡುಗೊರೆ ಕೊಟ್ಟು ಹೋದವರ ನಂತರ ಹಾರೈಸಲು ಬಂದವರು ಉಡುಗೊರೆ ಇಲ್ಲ ಎಂದಿರಿ ಮಾರಯರೆ, ಗೊತ್ತಿದ್ದರೆ ನಾನೂ ತರುತ್ತಿದೆ ಎನ್ನುತ್ತಾ ಹೋಗುವುದು ಸಾಮಾನ್ಯ. ಹೌದು ಹಿಂದಿನ ಕಾಲದಲ್ಲಿ ಮದುವೆ, ಮುಂಜಿಗಳಲ್ಲಿ ಮುಯ್ಯಿ ಇಡುವ ಪದ್ದತಿ ಇತ್ತು. ಅದಕ್ಕೆ ಕಾರಣ, ಆ ಮದುವೆ ಅಲ್ಲಿ ಇಡಲಾಗುವ ಮುಯ್ಯಿಯನ್ನು ಅವಲಂಬಿಸಿರುತ್ತಿತ್ತು. ಎಷ್ಟೋ ಮದುವೆಗಳಲ್ಲಿ ಈ ಮುಯ್ಯಿ ಹಣವೇ ಗಂಡಿನ ಮನೆಯವರಿಗೆ ವರದಕ್ಷಿಣೆಯಾಗಿ ಹೋಗುತ್ತಿತ್ತು. ಇಂದಿಗೂ ಬಡವರ ಮನೆಯವರು ಈ ಆಶಿರ್ವಾದವೇ ಉಡುಗೊರೆ ಎನ್ನುವುದನ್ನು ಆಮಂತ್ರಣದಲ್ಲಿ ಬರೆಯುವುದಿಲ್ಲ. ಆದರೆ ಅಂತಹ ಮದುವೆಗಳಲ್ಲಿ ಇಂತಹ ದುಬಾರಿ (coastlt)ಉಡುಗೊರೆ ಕೊಡುವವರೂ ಕಡಿಮೆಯೇ. ಕಾರಣ ಇಲ್ಲಿ ಅವರಿಗೆ ಅಂತಸ್ತು ತೋರಿಸುವ ಪ್ರಮೇಯ ಸಿಗುವುದಿಲ್ಲ. ನಾನು ಇಷ್ಟೆಲ್ಲಾ ಮಾತನಾಡಲು ಕಾರಣ ಇತ್ತೀಚೆಗಷ್ಟೆ ಹುಟ್ಟಿದ ಮಗುವಿನ ನಾಮಕರಣಕ್ಕೆ ಹೋಗಿದ್ದಾಗ ನಾನು ಕಂಡ ದೃಶ್ಯ. ಕೋಟ್ಯಾದೀಶರ ಮಗಳೊಬ್ಬಳಿಗೆ ಮಗುವೊಂದು ಜನಿಸಿದೆ. ಅಂತಹ ಮಗುವಿನ ನಾಮಕರಣ ಎಂದರೆ ಬಹಳ ಅದ್ದೂರಿ ಆಡಂಬರ ಇದ್ದೇ ಇರುತ್ತದೆ ಎನ್ನುವುದನ್ನು ಎಲ್ಲರೂ ಊಹಿಸಬಹುದು. ಮನೆ ಮುಂದೆ ಕೋಟಿಗಳ ಕಾರುಗಳೇ ಹೆಚ್ಚಾಗಿ ನಿಂತಿತ್ತು. ಬರುವವರೆಲ್ಲಾ ಕೊಟಿಗಳ ಕಾರಲ್ಲಿ ಬಂದು ಸುಮ್ಮನೆ ಹೋಗುವರೇ? ಬಂದವರೆಲ್ಲರದ್ದೂ ಅವರವರ ಅಂತಸ್ತು ತೋರಿಸುವ ರೀತಿಯಲ್ಲಿ ಉಡುಗೊರೆ. ಈಗಾಗಲೇ ಅಪ್ಪ ಅಮ್ಮನ ಮನೆಗಳಿಂದ ಹೊರಲಾರದಷ್ಟು (ಬಂಗಾರ ಎಂದರೆ ಅಂತಸ್ತು ಕಡಿಮೆ ಎನ್ನಿಸುತ್ತಿದೆ ಇಲ್ಲಿ) ವಜ್ರ ವೈಡೂರ್ಯಗಳನ್ನು ಹೊರಿಸಿದ್ದಾರೆ ಮಗುವಿಗೆ. ಅದನ್ನು ಹೊತ್ತ ಮಗು ನಿದ್ದೆಯಲ್ಲಿ ಮಂದಹಾಸ ಬೀರುತ್ತಿದೆ. ಇನ್ನು ಬಂದವರೆಲ್ಲರೂ ಹಾಕುವ ಆಭರಣಗಳು ಬೇರೆ. ಅಲ್ಲೇ ದೂರದಲ್ಲಿ ಕೂತಿದ್ದ ಮಹಿಳೆಗೆ ಏನನ್ನಿಸಿತೋ ಏನೋ ಯಾರನ್ನೋ ಕರೆದು “ನೋಡಮ್ಮಾ ಬಂದವರೆಲ್ಲ ಮಗುವಿಗೆ ಆಭರಣ ಹಾಕುವುದು ಬೇಡ” ಪಕ್ಕದಲ್ಲಿ ಒಂದು ತಟ್ಟೆ ಇಡು. ಅದಕ್ಕೆ ಹಾಕಲಿ ಎಂದು ಬಿಡುವುದೇ. ಈ ಮಗುವಿನ ಮೇಲಿದ್ದ ಅಂದರೆ ಉಡುಗೊರೆ ಬಂದಿದ್ದ ಆಭರಣವೂ ತಟ್ಟೆ ಸೇರಿತು. ಬಂದವರೆಲ್ಲ ಮುಯ್ಯಿ ಹಾಕುವ ಹಾಗೆ ಅದಕ್ಕಿಂತಲೂ ಹೆಚ್ಚಾಗಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಹುಂಡಿಗೆ ದುಡ್ಡು ಹಾಕುವ ಹಾಗೆ ತಂದ ಉಡುಗೊರೆ ರೂಪದ ಆಭರಣಗಳನ್ನು ಅದರಲ್ಲಿ ಹಾಕಿ ಹೋಗುತ್ತಿದ್ದರೆ ಇವರನ್ನೆಲ್ಲಾ ನೋಡಿ ನನಗೆ ಅಯ್ಯೋ ಎನಿಸಿತು. ಎಂತಹ ಮನಸ್ಥಿತಿ ನೋಡಿ. ಕೋಟಿಗಳಲ್ಲೇ ಬದುಕುವ ಕುಟುಂಬ. ಇವರಿಗೆ ಇಂತಹ ಆಭರಣಗಳು ಲೆಕ್ಕಕ್ಕೂ ಇಲ್ಲ. ಇಂತವರಿಗೆ ಉಡುಗೊರೆ ಕೊಡುವ ಬದಲು ಯಾವುದಾದರೂ ಅನಾಥಶ್ರಮಕ್ಕೆ ಹೋಗಿ ಅಲ್ಲಿರುವ ಮಕ್ಕಳಿಗೆ ಊಟವೋ ಅಥವಾ ಬಟ್ಟೆಯೋ ಕೊಟ್ಟಿದ್ದರೆ ಅದೆಷ್ಟು ತೃಪ್ತಿಯಿಂದ ಆ ಮಕ್ಕಳು ಉಣ್ಣುತ್ತಿದ್ದವು. ನಮ್ಮ ಜನರ ಮನಸ್ಥಿತಿ ಬದಲಾಗಬೇಕಿದೆ. ತನ್ನ ದೊಡ್ಡಸ್ಥಿಕೆಯನ್ನು ಇಂತಹ ಕಡೆ ತೋರಿಸುವ ಬದಲು ಅಸಹಾಯಕರಿಗೆ ಒಂದೊತ್ತು ಊಟ ಹಾಕಿದರೆ ನಮಗೂ ಸಂತೃಪ್ತಿ ಅಲ್ಲವೇ? ಉಡುಗೊರೆ ಎನ್ನುವುದು ತನ್ನ ಅಂತಸ್ತನ್ನು ತೋರಿಸುವ ಸಾದನವಾಗಬಾರದು. ಅದು ಇನ್ನೊಬ್ಬರ ಮುಖದಲ್ಲಿ ತರುವ ಸಂತೃಪ್ತಿಯ ಪ್ರತೀಕವಾಗಿರಬೇಕು. ಇಂತಹ ಸೂಕ್ಮ ವಿಷಯಗಳನ್ನು ನಾವು ಅರಿತು, ನಮ್ಮ ಮುಂದಿ ಪೀಳಿಗೆಗೂ ಅರಿವು ನೀಡಿ, ಅವರಿಗೆ ದಾರಿದೀಪವಾಗೋಣ...
✍ ಲಲಿತಶ್ರೀ ಪ್ರೀತಂ ರೈ