ಇಂದು ಜಗತ್ತೇ ಅಮ್ಮಂದಿರ ದಿನವನ್ನು ಆಚರಿಸುತ್ತಿದೆ. ನನಗೂ ನಮ್ಮಮ್ಮನ ಬಗ್ಗೆ ಹೇಳುವ ಮನಸ್ಸಾಗುತ್ತಿದೆ. ಹೆಣ್ಣೆಂದರೆ ಅವಳಿಗೊಂದು ಕಟ್ಟುಪಾಡುಗಳನ್ನು ಸಮಾಜ ಅವಳು ಹುಟ್ಟುವ ಮೊದಲೇ ಸಿದ್ದ ಪಡಿಸಿರುತ್ತದೆ. ಹೌದು ಹೆಣ್ಣು ಆ ಕಟ್ಟುಪಾಡಿನ ಪರಿದಿಯೊಳಗೆಯೇ ಬದುಕಿದ್ದಾಳೆ, ಬದುಕುತ್ತಿದ್ದಾಳೆ. ಹೆಣ್ಣು ಆ ಕಟ್ಟು ಪಾಡಿನಲ್ಲಿ ಬದುಕುವಾಗ ಅನುಭವಿಸುವ ಕಷ್ಟ, ಕಾರ್ಪಣ್ಯಕ್ಕೆ ಹೊಣೆ ಯಾರು?. ಅದರ ಹೊಣೆ ಹೊತ್ತುಕೊಳ್ಳಲು ಒಬ್ಬರಾದರೂ ಮುಂದೆ ಬರುತ್ತಾರೆಯೇ?. ಅಂತ ನಮಗೆ ಅನ್ನಿಸದಿರುವುದಿಲ್ಲ. ಅದರಲ್ಲೂ ಹಿಂದಿನ ಕಾಲದಲ್ಲಿ ಹತ್ತೋ, ಹನ್ನೆರಡೋ ಮಕ್ಕಳು, ಅದರಲ್ಲಿ ಹೆಣ್ಣು ಮಕ್ಕಳು ಮನೆಯ ಕೆಲಸಕ್ಕೆ, ಇಲ್ಲ ಅಂದರೆ ಅವರ ಹಿರಿಯ ಅಕ್ಕನದೋ ಅಣ್ಣನದೋ ಮಕ್ಕಳನ್ನು ನೋಡಿಕೊಳ್ಳುವ ಕೆಲಸ. ಇಂತಹ ಹೆಣ್ಣು ಮಕ್ಕಳಿಗೆ ವಿದ್ಯಾಬ್ಯಾಸ ಕನಸಿನ ಮಾತು. ಒಂದು ಕಡೆ ಬಡತನದ ಬೇಗೆ, ಅನಕ್ಷರತೆ, ಇವೆಲ್ಲದರ ನಡುವೆ ಮದುವೆ. ಮದುವೆಯಾಗಿ ಗಂಡ ಒಳ್ಳೆಯವನಾದರೆ ಸಮಾದಾನ, ಅದೇ ಕುಡುಕನೋ, ಕ್ರೂರಿಯೋ ಸಿಕ್ಕಿ ಬಿಟ್ಟರೆ ಅವಳ ಬದುಕು ನರಕವೇ ಸರಿ. ಇನ್ನು ಮಕ್ಕಳು ಬೆಳೆದು ದೊಡ್ಡವರಾಗಿ ಒಳ್ಳೆಯವರಾಗಿದ್ದರೆ ಸರಿ. ಇಲ್ಲವೆಂದರೆ ಇನ್ನಷ್ಟು ನರಕ. ಇಂತಹ ಪರಿಸ್ಥಿತಿಯಲ್ಲಿ ಎಷ್ಟೋ ಹೆಣ್ಣು ಮಕ್ಕಳು ಬದುಕಿ, ಬಾಳಿ, ತಮ್ಮ ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಅಂತಹ ಹೆಣ್ಣು ಮಕ್ಕಳಲ್ಲಿ ಜೀವನದಲ್ಲಿ ಕಹಿಯನ್ನೇ ಉಂಡರೂ ಇನ್ನೊಬ್ಬರಿಗೆ ಸಿಹಿಯನ್ನು ಹಂಚಿದ ನಮ್ಮ ಅಮ್ಮ “ಶ್ರೀಮತಿ ನೋನಮ್ಮ” ಕೂಡ ಒಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಆಗಿನ ಕುಗ್ರಾಮವೊಂದರಲ್ಲಿ ಮಾಂಕು ಮೂಲ್ಯ ಮತ್ತು ಕಾವೇರಿ ದಂಪತಿಗಳ ಒಂಬತ್ತು ಜನ ಮಕ್ಕಳಲ್ಲಿ (ಇಬ್ಬರು ಅಕ್ಕಂದಿರು, ಇಬ್ಬರು ಅಣ್ಣಂದಿರು, ಇಬ್ಬರು ತಂಗಿಯಂದಿರು ಮತ್ತು ಇಬ್ಬರು ತಮ್ಮಂದಿರು) 5ನೆಯವರಾಗಿ ತುಂಬು ಕುಟುಂಬದಲ್ಲಿ ಹುಟ್ಟಿದ ನಮ್ಮಮ್ಮನಿಗೆ ವಿದ್ಯಾಬ್ಯಾಸ ಮರಿಚಿಕೆಯಾಗಿತ್ತು. ಕಾರಣ ಮನೆಯಲ್ಲಿದ್ದ ಪುಟ್ಟ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ಧಾರಿ ಆ ಮನೆಯ ಚಿಕ್ಕ ಹೆಣ್ಣು ಮಕ್ಕಳದ್ದಾಗಿತ್ತು. ಮುಂದೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ರಾಮಣ್ಣನವರನ್ನು ಮದುವೆಯಾಗಿ ಜೀವನದ ಹೊಸ ಕನಸುಗಳೊಂದಿಗೆ ತುಂಬು ಕುಟುಂಬದ ಹಿರಿಯ ಸೊಸೆಯಾಗಿ ಬಲಗಾಲಿಟ್ಟು ಒಳ ಪ್ರವೇಶಿಸಿದರೂ, ನಮ್ಮಪ್ಪನ ಕಲ್ಯಾಣ ಗುಣಗಳಿಂದ ವರ್ಷದ ಒಳಗೆ ತುಂಬು ಗರ್ಭಿಣಿಯಾಗಿ, ತನ್ನ ಮುಂದಿನ ಬದುಕಿಗಾಗಿ ತವರನ್ನೇ ಆಶ್ರಯಿಸಬೇಕಾಯಿತು. ಕಾರಣ ಅಮ್ಮನನ್ನು ಗರ್ಭಿಣಿ ಮಾಡಿದ್ದ ನಮ್ಮಪ್ಪ ಕಾಣೆಯಾಗಿದ್ದರು. ಮುಂದೆ ಓಡಿ ಹೋಗಿದ್ದ ಪತಿರಾಯ ಮೂರು ಮಕ್ಕಳೊಂದಿಗೆ ಮತ್ತೊಂದು ಹೆಂಡತಿಯನ್ನು ಕರೆತಂದಾಗ ಆ ಹೆಣ್ಣಿನ ಮೇಲೆ ಕರುಣೆ ತೋರಿ ಪತಿಯನ್ನು ಕ್ಷಮಿಸಿದ ತ್ಯಾಗಮಯಿ ನಮ್ಮಮ್ಮ. ಹೌದು ನಮ್ಮಮ್ಮನಿಗೆ ನನ್ನ ಅಣ್ಣ ಎನ್ನಾರ್ ಕೆ ವಿಶ್ವನಾಥ್ ಮತ್ತು ನಾನು ಇಬ್ಬರು ಮಕ್ಕಳು. ಓಡಿ ಹೋಗಿದ್ದ ಅಪ್ಪ ತಿರುಗಿ ಬಂದ ಮೇಲೆ ಅಮ್ಮನಿಗೆ ನನ್ನನ್ನು ಕರುಣಿಸಿದ್ದರು. ಅಷ್ಟರಲ್ಲಾಗಲೇ ಜೀವನದ ಪಾಠ ಕಲಿತಿದ್ದ ನಮ್ಮಮ್ಮ ಗಟ್ಟಿಯಾಗಿದ್ದರು. ಅಮ್ಮನ ತಾಯಿಯ ಮರಣಾನಂತರ ತವರಿನಿಂದ ಹೊರಬರಬೇಕಾದ ಸಂದರ್ಭದಲ್ಲಿ ಸರಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿ ಅಲ್ಲೆ ತರಕಾರಿ ಬೆಳೆದು, ಬೀಡಿ ಕಟ್ಟಿ ಜೀವನ ಸಾಗಿಸಿದ ಸ್ವಾಭಿಮಾನಿ ನಮ್ಮಮ್ಮ. ಹೆಣ್ಣೊಬ್ಬಳು ಒಂಟಿಯಾಗಿ ಮಕ್ಕಳೊಂದಿಗೆ ಗುಡಿಸಲಿನಲ್ಲಿ ಜೀವನ ಸಾಗಿಸುವುದನ್ನು ನೋಡಿ ಹೊಂಚು ಹಾಕಿ ಮದ್ಯ ರಾತ್ರಿ ಗುಡಿಸಲಿಗೆ ನುಗ್ಗಿದ ಪಿಜಿನ ಎನ್ನುವ ವ್ಯಕ್ತಿಗೆ ತನ್ನ ಮಾನ ಉಳಿಸಿಕೊಳ್ಳಲು ಮಚ್ಚಿನಿಂದ ಇರಿದ ವೀರ ವನಿತೆ ನಮ್ಮಮ್ಮ. ಆಗಿನ ಕಾಲದಲ್ಲಿ ಇರಬಹುದು, ಅಥವಾ ಈಗಿನ ಕಾಲದಲ್ಲಿಯೇ ಇರಬಹುದು ಹೆಣ್ಣಿನ ಮೇಲೆ ದೌರ್ಜನ್ಯ ಮಾಡುವುದರಲ್ಲಿ ಮೇಲ್ವರ್ಗದ ಗಂಡಸರು ಮಾತ್ರ ಇರುತ್ತಿರಲಿಲ್ಲ. ಅವಕಾಶ ಸಿಕ್ಕರೆ ಕೆಲ ವರ್ಗದ ಗಂಡಸರೇನು ಹೆಣ್ಣಿನ ಮೇಲೆ ದೌರ್ಜನ್ಯ ಮಾಡದೇ ಬಿಟ್ಟಿಲ್ಲ. ಅಮ್ಮನೇನೋ ತನ್ನ ಮಾನ ಪ್ರಾಣ ಉಳಿಸಿಕೊಳ್ಳಲು ಆ ಕೆಟ್ಟ ಗಂಡಸಿಗೆ ಮಚ್ಚಿನಿಂದ ಇರಿದು ಮಾನ ಉಳಿಸಿಕೊಂಡರು. ಆಮೇಲೆ ಪೊಲೀಸರು (ಗಂಡಸರು) ಕೊಟ್ಟ ಹಿಂಸೆ ಅಮ್ಮ ಸಾಯುವವರೆಗೂ ನೆನೆಸಿಕೊಳ್ಳುತ್ತಿದ್ದರು. ಒಬ್ಬ ಹೆಣ್ಣು ತನ್ನ ಸ್ವರಕ್ಷಣೆಗಾಗಿ ಇಂತಹ ನಿರ್ದಾರ ತೆಗೆದುಕೊಂಡರೂ ಈ ಸಮಾಜದಲ್ಲಿ ಅವಳು ಮತ್ತೆ ಬದುಕುವುದು ಕಷ್ಟವೇ ಸರಿ. ನಮ್ಮಮ್ಮ ಕಷ್ಟದ ಕಾಲದಲ್ಲೂ ಹಸಿದು ಬಂದವರು ಬಿಕ್ಷುಕರೇ ಆಗಲಿ ಅಪರಿಚಿತರೇ ಆಗಲಿ, ಅವರಿಗೆ ಊಟ ಬಡಿಸಿ ತಾನು ನೀರು ಕುಡಿದು ಇರುತ್ತಿದ್ದನ್ನು ನಾವು ನೀಡಿದಾಗ ನಮ್ಮಮ್ಮ ಅನ್ನಪೂರ್ಣೇಶ್ವರಿಯ ಹಾಗೇ ಕಾಣುತ್ತಿದ್ದರು. ಹಗಲು ರಾತ್ರಿ ಎನ್ನದೆ ಗಂಡಸಿನಂತೆ ಕೆಲಸ ಮಾಡಿ ಸರಕಾರಿ ಜಾಗದಲ್ಲಿ ದುಡಿದು ಒಂದು ಸುಂದರವಾದ ತೋಟವಾಗಿ ಮಾಡಿ ರಾತ್ರಿ ನೆಮ್ಮದಿಯಿಂದ ಮಲಗುತ್ತಿದ್ದ ರೈತೆ ಮಹಿಳೆ ನಮ್ಮಮ್ಮ. ನಮ್ಮಮ್ಮನ ಹಾಗೇ ತೋಟ, ಗದ್ದೆಯ ಕೆಲಸ ಎಂದರೆ ನನಗೂ ಅದೇನೋ ನೆಮ್ಮದಿ. ತನ್ನ ತಮ್ಮ ಅಂದರೆ ನನ್ನ ಮಾವ ಕುಡಿದ ಮತ್ತಿನಲ್ಲಿ ಬಂದು ಮನೆಯ ದೈವಗಳ ಮೂರ್ತಿಯನ್ನು ಸುಟ್ಟು ಮನೆಯ ಹೊರಗೆ ಬಿಸಾಕಿದಾಗ, ದೈವಗಳೇ ನೀರು ಇಲ್ಲದೆ ಹೊರಗೆ ಇರುವಾಗ ನಾನೇಗೆ ಊಟ ಸೇವಿಸಲಿ ಅಂತ ಮೂರು ದಿನ ನಿರಾಹಾರಳಾಗಿ ಕುಳಿತ ಧೈವಭಕ್ತೆ ನಮ್ಮಮ್ಮ. ಮಕ್ಕಳು ತಪ್ಪು ಮಾಡಿದಾಗ ಬೆತ್ತ ಪುಡಿ ಮಾಡಿ(ಅಣ್ಣನಿಗೆ ಜಾಸ್ತಿ) ಆಮೇಲೆ ನಮ್ಮೊಂದಿಗೆ ಅವರೂ ಕೂಡ ಅತ್ತು, ನಮಗೆ ಬುಧ್ಧಿ ಕಲಿಸಿದ ಗುರುವು ನಮ್ಮಮ್ಮ. ನದಿಯಲ್ಲಿ ಎಂತಹ ನೆರೆ ಬಂದರೂ ಈಜಿ ದಡ ಸೇರುತ್ತಿದ್ದ ಈಜು ಪಟು ನಮ್ಮಮ್ಮ. ಈಗಿನ ಕಾಲಕ್ಕಾಗಿದ್ದರೆ ಅಂತರಾಷ್ಟ್ರೀಯ(international) ಮಟ್ಟದ ಈಜುಗಾರ್ತಿ ಆಗಿರುತ್ತಿದ್ದರು. ನೇಗಿಲು ಹಿಡಿದು ಊಳುವ ಕೆಲಸದಿಂದ ಹಿಡಿದು ಅಕ್ಕಿ ಮುಡಿ ಕಟ್ಟುವವರೆಗೆ ಗಂಡಸರಿಗೆ ಸರಿ ಸಮಾನಾಗಿ ಕೆಲಸ ಮಾಡುತ್ತಿದ್ದ ಗಟ್ಟಿಗಿತ್ತಿ ನಮ್ಮಮ್ಮ. ಪಾರ್ದನದಂತಹ ಜನಪದ ಹಾಡು, ಕಥೆಗಳನ್ನು ಎಷ್ಟು ಚೆನ್ನಾಗಿ ಹೇಳುತ್ತಿದ್ದರು ನಮ್ಮಮ್ಮ. ತುಳು ಭಾಷೆ ಬಿಟ್ಟರೆ ಬೇರೆ ಭಾಷೆಯ ಗಂಧಗಾಳಿಯು ಗೊತ್ತಿಲ್ಲದವರು(ನಾವು ನನ್ನ ಅಣ್ಣನೊಂದಿಗೆ ಬೆಂಗಳೂರಿನಲ್ಲಿ ಜೀವನ ಮಾಡಬೇಕಾದ ಸಂದರ್ಭ ಬಂತು) ಒಂದೇ ವರ್ಷದಲ್ಲಿ ಕನ್ನಡವನ್ನು ನಿರರ್ಗಳವಾಗಿ ಮಾತಾಡಲು ಕಲಿತಿದ್ದ ಒಳ್ಳೆ ವಿಧ್ಯಾರ್ಥಿನಿ ನಮ್ಮಮ್ಮ. ಗಂಡ ಮಾಡಿದ ಮೋಸ, ಕೊಟ್ಟ ನೋವು ಎಲ್ಲವನ್ನು ಮರೆತು ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಒಬ್ಬ ನಿಸ್ವಾರ್ಥ ಪ್ರೇಮಿ ನಮ್ಮಮ್ಮ. ಎಷ್ಟೇ ನೋವು, ಕಷ್ಟ ಕಾರ್ಪಣ್ಯ ಇದ್ದರು ಸದಾ ನಗು ಮುಖದಲ್ಲೆ ಇದ್ದ ಹಸನ್ಮುಖಿ ನಮ್ಮಮ್ಮ. ಯಾವುದೇ ಜಾತಿ, ಧರ್ಮ, ವಯಸ್ಸು, ಅಂತಸ್ತನ್ನು ನೋಡದೆ ಎಲ್ಲರನ್ನೂ ಪ್ರೀತಿಯಿಂದ ಆಧರಿಸುತ್ತಿದ್ದ ಸ್ನೇಹಮಯಿ ನಮ್ಮಮ್ಮ. ಕಟೀಲು ದುರ್ಗಾಪರಮೇಶ್ವರಿಯನ್ನು ಸದಾ ಪೂಜಿಸುತ್ತಿದ್ದ ನಮ್ಮಮ್ಮ ಬೆಳಗಿನ ಮನೆಯ ಕೆಲಸ ಮುಗಿಸಿ ದೇವರ ಪೂಜೆ ಮಾಡಿ ಮತ್ತೆ ದೇವಸ್ಥಾನಕ್ಕೆ ಹೋಗಿ ಬರುವವರೆಗೂ ನಿರಾಹಾರರಾಗಿ ಇರುತ್ತಿದ್ದ ದೈವ ಭಕ್ತೆ ನಮ್ಮಮ್ಮ. ಬೆಳಿಗ್ಗೆ ಎದ್ದು ಟಿವಿಯಲ್ಲಿ ನ್ಯೂಸ್ ನೋಡುವ (ಅನಕ್ಷರಸ್ಥೆ ಅಗಿದ್ದರಿಂದ ಪೇಪರ್ ಓದಲು ಬರುತ್ತಿರಲಿಲ್ಲ) ಅಭ್ಯಾಸ ಇದ್ದ ನನ್ನಮ್ಮ, ಬೇರೆ ಊರುಗಳಿಗೆ ಶೂಟಿಂಗ್ ನಿಮಿತ್ತ ಹೋದ ಮಗನಿಗೆ (ನನ್ನಣ್ಣ) ತಾನೆ ವಾರ್ತಾವಾಚಕಿಯೂ ಕೂಡ ಆಗಿದ್ದರು ನಮ್ಮಮ್ಮ. ಅಣ್ಣನ ಮತ್ತು ನನ್ನ ಬರವಣಿಗೆ ಅಥವಾ ಹಾಡುಗಳಿಗೆ ಸಾಂಸ್ಕೃತಿಕ ರಾಯಭಾರಿ ನಮ್ಮಮ್ಮ. ಮೊಬೈಲ್ ನಲ್ಲಿ ಕರೆ ಬಂದಾಗ ಮಾತು ಕೇಳಿಸದೇ ಇದ್ದರೆ ಅದಕ್ಕೆ ಕಾರಣ ಕಮ್ಮಿಯಾಗಿರುವ ಕರೆನ್ಸಿಯೇ (ನಿಜವಾದ ಕಾರಣ ನೆಟ್ವರ್ಕ್) ಎಂದು ಬಲವಾಗಿ ನಂಬಿದ್ದ ಮುಗ್ದೆ ನಮ್ಮಮ್ಮ. ಪ್ರತಿ ಹಬ್ಬ ಹರಿದಿನಗಳಲ್ಲೂ ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ನಮ್ಮೊಂದಿಗೆ ಅಣ್ಣನ ಗೆಳೆಯರ ಸಮೂಹಕ್ಕೂ ಉಣಬಡಿಸುತ್ತಿದ್ದ ಪಾಕ ಪ್ರವೀಣೆ ನಮ್ಮಮ್ಮ. ನಮ್ಮಮ್ಮನ ಕೈಯಲ್ಲಿ ಉಂಡವರಲ್ಲಿ ಕೆಲವರು ಇಂದಿಗೂ ನಮ್ಮಮ್ಮನನ್ನು ನೆನೆಸಿಕೊಳ್ಳತ್ತಾರೆ. ಇಂದು ನಾನು ಮತ್ತು ನನ್ನ ಅಣ್ಣ ಎನ್ನಾರ್ ಕೆ ವಿಶ್ವನಾಥ್ ಈ ಮಟ್ಟಕ್ಕೆ ಬರಬೇಕಾದರೆ ತನ್ನ ದೇಹದ ರಕ್ತವನ್ನೇ ಬಸಿದಿದ್ದಾರೆ ನಮ್ಮಮ್ಮ. ನಮ್ಮಮ್ಮನ ಬಗ್ಗೆ ಹೇಳುತ್ತಾ ಹೋದರೆ ಪೇಜುಗಟ್ಟಲೆ ಬರೆಯಬಹುದು. ಆದರೆ ಅಮ್ಮನ ಒಳ್ಳೇತನದ ಮೇಲೆ ಆ ದೇವರಿಗೂ ಕಣ್ಣು ಬಿತ್ತು ಅನ್ನಿಸುತ್ತದೆ, 2013 ರ ನವರಾತ್ರಿಯ ನಾಲ್ಕನೇ ದಿನ (08.10.2013) ನಮ್ಮಮ್ಮ ಸ್ವರ್ಗಸ್ಥರಾಗಿ, ಸಾವಿನಲ್ಲೂ ಕೂಡ ತಾನೊಬ್ಬ ಧೈವಭಕ್ತೆ ಅಂತ ತೋರಿಸಿಬಿಟ್ಟರು ನಮ್ಮಮ್ಮ. ಅಮ್ಮನಿಂದ ದೈಹಿಕವಾಗಿ ದೂರವಾಗಿ 11 ವರ್ಷಗಳು ಸರಿದಿದ್ದರೂ ಭಾವನಾತ್ಮಕವಾಗಿ ನಮ್ಮನ್ನು ನೆರಳಾಗಿ ಆವರಿಸಿದ್ದಾರೆ ಎನ್ನುವುದು ಸತ್ಯ. ನಮ್ಮಮ್ಮನೊಂದಿಗೆ ಜಗತ್ತಿನ ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು..
✍ಲಲಿತಶ್ರೀ ಪ್ರೀತಂ ರೈ