ಮನುಷ್ಯ ಒಂದಿಲ್ಲೊಂದು ಭ್ರಮೆಯಲ್ಲಿಯೇ ಜೀವನವನ್ನು ಕಳೆದು ಬಿಡುತ್ತಾನೆ. ಭ್ರಮೆಗಳಲ್ಲಿ ಹಲವಾರು ಪ್ರಭೇಧಗಳಿರುತ್ತದೆ. ಸೌಂದರ್ಯ, ದುಡ್ಡು, ಹೀಗೆ ಹಲವಾರು. ಸುಂದರವಾಗಿರುವವನು ನಾನು ಇವತ್ತು ಸುಂದರವಾಗಿದ್ದೇನೆ, ನಾಳೆಯೂ, ಎಂದೆಂದಿಗೂ ಸುಂದರನಾಗಿರುತ್ತೇನೆ ಎನ್ನುವ ಭ್ರಮೆಯಲ್ಲಿಯೇ ಜೀವನ ಸಾಗಿಸುತ್ತಿರುತ್ತಾನೆ. ನೀವು ಕೂಡ ಇದನ್ನು ಗಮನಿಸಿರವಹುದು. ಸುಂದರವಾಗಿದ್ದ ಮನುಷ್ಯ ಕಾರಣಾಂತರಗಳಿಂದ ಸೌಂದರ್ಯ ಕಳೆದುಕೊಂಡಾಗ ಎಷ್ಟೋ ಸಲ ಕಿನ್ನತೆಗೆ ಜಾರಿ ಬಿಡುತ್ತಾನೆ. ಆ ಕಿನ್ನತೆಯಿಂದ ಹೊರಬರಲು ಅದೆಷ್ಟೋ ವರ್ಷಗಳು ತೆಗೆದುಕೊಂಡ ಉದಾಹರಣೆಗಳಿವೆ. ಸೌಂದರ್ಯ ಬಗ್ಗೆ ಮಾತಾಡುವಾಗ ನಾನೊಂದು ಉದಾಹರಣೆ ಹೇಳಬೇಕೆನ್ನಿಸುತ್ತದೆ. ಆಗ ನಾನಿನ್ನು ಪಿ ಯು ಸಿ ಓದುವ ಸಮಯ. ಬೆಂಗಳೂರಿನ ಎಚ್ ಎಮ್ ಟಿ ಲೆ ಔಟ್‌ನಲ್ಲಿ ನಮ್ಮ ಮನೆ. ನಮ್ಮ ಪಕ್ಕದ ಕಟ್ಟಡದಲ್ಲಿ ಒಂದು ಸುಂದರ ಸಂಸಾರವಿತ್ತು. ಅಲ್ಲೆ ಪಕ್ಕದಲ್ಲಿ ಇಂದಿನ ರಾಜಕಾರಣಿ ಗೋಪಾಲಕೃಷ್ಣ ಬೇಲೂರು ಕೂಡ ಇದ್ದರು. ಅವರು ಆಗ ರಾಜಕಾರಣಿ ಆಗಿರಲಿಲ್ಲ. ಒಂದು ಪುಟಾಣಿ ಮಕ್ಕಳ ಶಾಲೆಯಲ್ಲಿ ಮಾಸ್ಟರ್ ಆಗಿದ್ದರು. ವಿಷಯಾಂತರ ಬೇಡ ಅಲ್ಲವೇ? ಆ ಸುಂದರ ಸಂಸಾರದಲ್ಲಿ ಎಲ್ಲ ಆಕರ್ಷಣೆಯ ಕೇಂದ್ರ ಬಿಂದು ಆ ಮನೆಯ ಆಂಟಿ. ಎರಡು ಮಕ್ಕಳ ತಾಯಿ ಆದರೂ ಯಾವ ಸಿನಿಮಾ ನಾಯಕಿಗಿಂತ ಕಡಿಮೆಯಿರಲಿಲ್ಲ. ಆಗಿನ್ನು ಯೌವನದ ಹೊಸ್ತಿಲಲ್ಲಿ ಇದ್ದ ನಮಗೆ ಆಂಟಿಯಷ್ಟು ಚೆನ್ನಾಗಿರಬೇಕಿತ್ತು ಎನ್ನುವುದು ಆಸೆ. ಆಂಟಿ ಯಾವ ಸೋಪು ಉಪಯೋಗಿಸಬಹುದು ಎನ್ನುವ ಕುತೂಹಲ. ಆಗಿನ್ನು ಆಧುನಿಕತೆ ಇಷ್ಟು ಮುಂದುವರೆದಿರಲಿಲ್ಲ. ಈಗ ಬಿಡಿ ಮೊಬೈಲ್ ಅನ್ನೋ ಮಾಂತ್ರಿಕ ಉಪಕರಣದಲ್ಲಿ ಜಗತ್ತೇ ಅಡಗಿದೆ. ಆಂಟಿಯ ಇಬ್ಬರು ಹೆಣ್ಣು ಮಕ್ಕಳು ನಮಗೆ ಆಗಾಗ ಆಟವಾಡಲು ಜೊತೆಯಾಗುತ್ತಿದ್ದರು. ಅಂಕಲ್ ನೋಡಿದರೆ ಡೊಳ್ಳೊಟ್ಟೆ ಇಟ್ಟುಕೊಂಡು, ನೋಡಲೂ ಸಾದಾರಣವಾಗದ್ದು ಈ ಆಂಟಿಯನ್ನು ಅವರ ಡಕೋಟಾ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರೆ ಎಲ್ಲರೂ ಅವರನ್ನೇ ನೋಡುತ್ತಿದ್ದರು. ಆಗ ಅದಕ್ಕೆ ಕಾರಣ ತಿಳಿದಿರಲಿಲ್ಲ. ತೆಲುಗು ಮೂಲದವರಾಗಿದ್ದ ಅಂಕಲ್ ಸರಕಾರಿ ಕೆಲಸದಲ್ಲಿದ್ದು, ಆಂಟಿಯ ಸೌಂದರ್ಯಕ್ಕೆ ಮಾರು ಹೋಗಿ ಯಾವುದೇ ಖರ್ಚು ಹೆಣ್ಣಿನ ಮನೆಯವರಲ್ಲಿ ಮಾಡಿಸದೇ ಮದುವೆ ಆಗಿದ್ದರಂತೆ. ಆಂಟಿ ಮನೆಯಿಂದ ಅಷ್ಟೇನೂ ಹೊರಗಡೆಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಆಗಲೋ ಈಗಲೋ ಒಮ್ಮೆ ಅಂಕಲ್ ಆಂಟಿ ಅವರ ಸ್ಕೂಟರ್‌ನಲ್ಲಿ ಹೊರಗೆ ಹೋಗುತ್ತಿದ್ದರು. ಒಂದು ದಿನ ಆಂಟಿಯ ಮರಣದ ಸುದ್ದಿ ಬಂದು ಬಿಟ್ಟಿತು. ನಮ್ಮ ಒಂದು ಲೇಔಟ್‌ನ ಜನರೆಲ್ಲರೂ ಅವರ ಮನೆ ಮುಂದೆ ಸೇರಿದ್ದರು. ನಾವು ಕೂಡ ಹೋದೆವು ಆಂಟಿಯ ಮುಖದರ್ಶನ ಪಡೆಯಲು. ಮುಖದ ತುಂಬಾ ಬ್ಯಾಂಡೇಜ್ ಸುತ್ತಿತ್ತು. ಆಗ ತಿಳಿಯಿತು ಆಂಟಿ, ಅಂಕಲ್ ಎಮ್ ಜಿ ರೋಡಿನಲ್ಲಿ ಸೂಟರ್‌ನಲ್ಲಿ ಹೋಗುತ್ತಿರಬೇಕಾದರೆ ಯಾವುದೋ ಗಾಡಿಯವನ್ನು ಹಿಂದಿನಿಂದ ಗುದ್ದಿದ ಪರಿಣಾಮ ಆಂಟಿ ರಸ್ತೆಗೆ ಬಿದ್ದಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಬಂದ ಬಸ್ಸಿನ ಚಕ್ರ ಇವರ ತಲೆಯ ಮೇಲೆ ಹೋಗಿ ಅಪ್ಪಚ್ಚಿಗೊಳಿಸಿತ್ತು. ಎಲ್ಲಿಯ ಸೌಂದರ್ಯ ಹೇಳಿ? ಎರಡು ಹೆಣ್ಣು ಮಕ್ಕಳು ಅಕ್ಷರಶಃ ಅನಾಥರಾಗಿದ್ದರು. ಸೌಂದರ್ಯ ನೋಡಿಯೇ ಮದುವೆಯಾಗಿದ್ದ ಅಂಕಲ್ ಹೆಂಡತಿ ಸತ್ತು ಐದಾರು ತಿಂಗಳಲ್ಲಿಯೇ ಮರು ಮದುವೆಯಾದರು. ಅಲ್ಲಿವರೆಗೂ ಅಕ್ಷರಶಃ ಅನಾಥರಾಗಿದ್ದ ಮಕ್ಕಳು ಅನಾಥರಾಗಿಯೇ ಬಿಟ್ಟರು ಎಂದರೆ ತಪ್ಪಾಗಲಾರದು. ಸೌಂದಯ, ಆಸ್ತಿ, ಅಂತಸ್ತು ಎಲ್ಲವೂ ನಶ್ವರ. ಇವೆಲ್ಲವೂ ನಮ್ಮದೇ ಅಂತ ಮೆರೆಯುವ ನಾವು, ಅದು ಇಂದು ನಮ್ಮದು ನಾಳೆ ನಮ್ಮದೇ ಆಗಿರಬಹುದು ಎನ್ನುವ ಭ್ರಮೆಯಲ್ಲಿಯೇ ಬದುಕುತ್ತಿರುತ್ತೇವೆ. ನಿಜವಾಗಿ ನೋಡಿದರೆ ನಾವು ತರಗೆಲೆಗಳಂತೆ. ಒಂದು ಜೋರಾದ ಗಾಳಿ ಬಂದರೆ ಹೇಗೆ ಮರದ ಎಲೆಗಳು ಉದುರಿ ಬಿಡುತ್ತವೋ ಹಾಗೆ, ಒಮ್ಮೆ ಭೂಮಿ ತಾಯಿ ಮೈ ಕೊಡವಿಕೊಂಡರೆ ಅಷ್ಟೇ ಅಲ್ಲಿಗೆ ಬದುಕೇನು ಆಸ್ತಿ, ಅಂತಸ್ತು ಎಲ್ಲವೂ ಮಣ್ಣು ಪಾಲು ಎನ್ನುವುದನ್ನು ಮಡಿಕೇರಿಯ ಘಟನೆಯಲ್ಲಿ ಕಣ್ಣಾರೆ ಕಂಡಿದ್ದೇವೆ. ಇನ್ನು ಅವರಿವರ ತಲೆಗೆ ಒಡೆದು ಬಚ್ಚಿಟ್ಟ ಆಸ್ತಿ ಉಳಿದುಬಿಡಬಹುದೇ. ಹಾಲು ಕುಡಿದ ಮಕ್ಕಳನ್ನೇ ಬದುಕಿಸಲು ಕೆಲವು ಸಮಯ ಕಷ್ಟ ಆಗುತ್ತದೆ. ಇನ್ನು ವಿಷವನ್ನೇ ನುಂಗಿರುವ ಮಗುವನ್ನು ಬದುಕಿಸಲು ಸಾಧ್ಯವೇ ಎನ್ನುವ ಹಾಗೆ. ಇನ್ನು ಎಲ್ಲಿಯ ಬಂಗಾರ, ಆಸ್ತಿ, ಅಂತಸ್ತು. ಇವೆಲ್ಲಾ ಬರೀ ಭ್ರಮೆಯಷ್ಟೇ. ಈ ಭ್ರಮೇಯನ್ನೇ ಬದುಕಾಗಿಸಿಕೊಂಡಿದ್ದೇವೆ ಎಂದರೆ ತಪ್ಪಾಗಲಾರದು. ಮನುಷ್ಯ ಈ ಭ್ರಮೆಯಿಂದ ಹೊರಗೆ ಬರಬೇಕು. ಆಗ ಮಾತ್ರ ಮನುಷ್ಯ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಬಲ್ಲ. ಇಲ್ಲ ಎಂದರೆ ತಲೆಯಲ್ಲಿ ತನ್ನಲ್ಲಿರುವ ಆಸ್ತಿ, ಅಂತಸ್ತಿನ ಅಮಲಿನಲ್ಲಿ ಇತರರನ್ನು ಅವಮಾನಿಸುತ್ತಾ, ಅಣಕಿಸುತ್ತಾ ಭ್ರಮೆಯಲ್ಲಿಯೇ ಬದುಕುತ್ತಿರುತ್ತಾನೆ. ಇಂತಹ ಭ್ರಮೆಯಿಂದ ಹೊರಬಂದು ಮುಂದಿನ ಪೀಳಿಗೆಗೆ ದಾರಿ ದೀಪವಾಗೋಣ...
✍ ಲಲಿತಶ್ರೀ ಪ್ರೀತಂ ರೈ