ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಎಷ್ಟು ಅರ್ಥಪೂರ್ಣವಾದ ಮಾತನ್ನು ನಮ್ಮ ಹಿರಿಯರು ಹೇಳಿದ್ದಾರೆ. ನೋಡಿ. ಅದಕ್ಕೆ ನಾನು ಯಾವಾಗಲೂ ಗಾದೆ ಮಾತುಗಳನ್ನು“ನಮ್ಮ ಹಿರಿಯರು ತಮ್ಮ ಅನುಭವಗಳಿಂದ ಪೋಣಿಸಿದ ಮಾಲೆ” ಎನ್ನುವುದು. ಅವರ ಪ್ರತಿ ಮಾತುಗಳಲ್ಲೂ ಅದೆಷ್ಟು ಜೀವನದ ಸಾರಗಳು ತುಂಬಿರುತ್ತದೆ. ಮನುಷ್ಯ ದೇಶ ಸುತ್ತಿದಷ್ಟು ಅನುಭವಗಳನ್ನು ಪಡೆಯುತ್ತಾನೆ. ಹಾಗೆ ಪುಸ್ತಕಗಳನ್ನು ಓದಿದಷ್ಟು ವಿಷಯಗಳು ನಮಗೆ ಮನದಟ್ಟಾಗುತ್ತಾ ಹೋಗುತ್ತದೆ. ದೇಶ ಸುತ್ತಿ ಕೋಶ ಓದುವ ಬಗ್ಗೆ ನಮ್ಮ ಹಿರಿಯರು ತಮ್ಮ ಅನುಭವದಿಂದಲೇ ಬರೆದಿದ್ದಾರೆ. ಕೋಶ ಓದಿ ಅಪಾರ ಜ್ಞಾನವನ್ನು ಸಂಪಾದಿಸಿದ ಶಂಕಾರಾಚಾರ್ಯರು ಭಾರತದ ನಾಲ್ಕೂ ಮೂಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಶಕ್ತಿ ಪೀಠಗಳನ್ನು ಸ್ಥಾಪಿಸಿದರು. ಹೀಗೆ ನಮ್ಮ ಪರಂಪರೆಯಲ್ಲಿ ದೇಶ ಸುತ್ತುವ ಮತ್ತು ಕೋಶ ಓದುವ ಕಾಯಕ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾವು ಪುಸ್ತಕ ಓದುವುದರೊಂದಿಗೆ ದೇಶ ಸುತ್ತುವ ಕೆಲಸಗಳನ್ನು ಯಾವಾಗಲೂ ಮಾಡುತ್ತಿರಬೇಕು. ಆಗ ಮಾತ್ರ ನಮ್ಮ ಬದುಕು ಸ್ವಾರಸ್ಯಮಯವಾಗಿರಲು ಸಾದ್ಯ. ಮನುಷ್ಯನಿಗೆ ಲೋಕಜ್ಞಾನ ಎಂಬುವುದು ಬಹಳ ಮುಖ್ಯ.
ದೇಶವನ್ನು ಸುತ್ತುತ್ತಾ ಹೋದಂತೆ ನಮಗೆ ಅಲ್ಲಿನ ಜನರ ಸಂಸ್ಕೃತಿ, ಭಾಷೆ, ಆಚಾರ ವಿಚಾರ, ಪದ್ಧತಿಗಳು, ಆಚರಣೆಗಳು, ನಂಬಿಕೆಗಳು ಮುಂತಾದವುಗಳ ಅರಿವು ಉಂಟಾಗುತ್ತದೆ. ದೇಶ ಸುತ್ತುವುದಕ್ಕೆ ನಮಗೆ ಸಮಯ, ತಾಳ್ಮೆ, ಗುರಿ, ಕೈಯಲ್ಲಿ ಹಣ ಹಾಗೂ ಎಲ್ಲಾ ಭಾಷೆಗಳ ಅರಿವು ಇರಬೇಕಾಗುತ್ತದೆ. ದೇಶ ಸುತ್ತಿ ನೋಡಿದಾಗ ಅದರ ಅನುಭವಗಳು ದೊಡ್ಡದಾಗಿರುತ್ತದೆ. ಇದು ಕೂಡ ಒಂದು ಬಗೆಯ ಜ್ಞಾನಾರ್ಜನೆ ಎಂದರೆ ತಪ್ಪಾಗಲಾರದು. ಇನ್ನು ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನ ಮಾಡುತ್ತಾ ಹೋದಂತೆ ನಮಗೆ ಅನೇಕ ವಿಷಯಗಳು ಹಾಗೂ ಮಾಹಿತಿಗಳು ದೊರಕುತ್ತದೆ. ದೇಶ ಸುತ್ತಿದಾಗ ಸಿಗುವ ಅನುಭವಗಳು ಕೋಶ ಓದಿದಾಗಲೂ ಸಿಗುತ್ತದೆಯಾದರೂ ನಮ್ಮ ಜ್ಙಾನ “ಪುಸ್ತಕದ ಬದನೆಕಾಯಿ” ಆಗಬಾರದು ಎನ್ನುವುದಕ್ಕೆ ಹಿರಿಯರು ದೇಶ ಸುತ್ತು, ಕೋಶ ಓದು ಎಂದಿರಬೇಕು. ದೇಶ ಸುತ್ತುವುದರಿಂದ ಕೋಶ ಓದುವುದರಿಂದ ನಮ್ಮ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿ ಹೆಚ್ಚಾಗಿ ದೇಹ ಮನಸ್ಸುಗಳಲ್ಲಿ ಚೈತನ್ಯ ಶಕ್ತಿ ರೂಪುಗೊಳ್ಳುತ್ತದೆ. ಹಾಗೆಯೇ ಕೋಶ ಎಂದರೆ ವಿಶ್ವಕೋಶವನ್ನೇ ಓದಬೇಕೆಂದಿಲ್ಲ. ನಮಗೆ ಆಸಕ್ತಿ ಇರುವ ಪುಸ್ತಕಗಳನ್ನು ಓದಿದರೆ ಸಾಕು. ಜಗತ್ತಿನಲ್ಲಿ ನಡೆಯುವ ಬೇರೆ ಬೇರೆ ವಿದ್ಯಮಾನಗಳ ಕುರಿತ ಹೊಸ ಪುಸ್ತಕ, ಪತ್ರಿಕೆ, ಕಾದಂಬರಿ, ಕಥಾಪುಸ್ತಕ ಇವುಗಳನ್ನೆಲ್ಲಾ ಓದಿದರೆ ನಾವು ಈ ಜಗತ್ತು ಹೇಗಿತ್ತು, ಈಗ ಹೇಗಿದೆ ಎಂಬುದನ್ನು ವಾಸ್ತವವಾಗಿ ತಿಳಿಯಲು ಸಹಕಾರಿಯಾಗುತ್ತದೆ. ಅದನ್ನು ಬಿಟ್ಟು ಪ್ರಪಂಚದ ವಿಸ್ತಾರ ಅರಿಯದವರನ್ನು ಕೂಪ ಮಂಡೂಕ ಎನ್ನುತ್ತಾರೆ. ಅಂದರೆ ಬಾವಿಯಲ್ಲಿರುವ ಕಪ್ಪೆಗೆ ಹೊರಗಿನ ಪ್ರಪಂಚದ ವಿಸ್ತಾರ ಗೊತ್ತಿರುವುದಿಲ್ಲ. ಆ ಬಾವಿಯೇ ಅದರ ಪ್ರಪಂಚವಾಗಿರುತ್ತದೆ. ಬಾವಿಗಿಂತ ದೊಡ್ಡ ಇನ್ನೊಂದು ಪ್ರಪಂಚ ಇದೆ ಎಂಬುದನ್ನು ಅದು ಒಪ್ಪುವುದಕ್ಕೆ ಸಿದ್ಧವೇ ಇರುವುದಿಲ್ಲ. ಅಲ್ಪ ಜ್ಞಾನಿಗಳಾದವರು ತಮ್ಮ ಜ್ಞಾನದ ಮಿತಿಗೆ ದಕ್ಕಿದ್ದೇ ಸತ್ಯವೆಂದುಕೊಳ್ಳುತ್ತಾರೆ. ಅದರ ಆಚೆಯ ಸಾಧ್ಯತೆಯ ಕುರಿತು ಚಿಂತಿಸುವುದಕ್ಕೂ ಅವರು ಹೋಗುವುದಿಲ್ಲ. ಕೆಲವರನ್ನು ನೀವು ಗಮನಿಸಬಹುದು ಆಸ್ತಿವಂತರಾಗಿರುತ್ತಾರೆ ಜೊತೆಗೆ ಚೆನ್ನಾಗಿ ಓದಿಕೊಂಡೂ ಇರುತ್ತಾರೆ ಆದರೆ ಅವರ ಬುದ್ದಿ ಮಾತ್ರ ಯಾವಾಗಲೂ ವಕ್ರವೇ. ಎಷ್ಟು ಓದಿದರೇನು ಆ ಕೂಪ ಮಂಡೂಕದಂತೆ ವರ್ತಿಸುವ ಇವರನ್ನು ಕಂಡಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ.
ಇಂತವರು ಜೀವನ ಪೂರ್ತಿ ಸಂಪಾದಿಸಿ ಕೂಡಿಡುವ ಕೆಲಸದ ಜೊತೆಗೆ ಊರವರ ವಿಷಯದಲ್ಲಿ ಮೂಗು ತೂರಿಸಿ ದೊಡ್ಡವರೆನಿಸಿಕೊಂಡಿದ್ದು ಮಾತ್ರ. ಇಂತವರು ಓದಿ ದೊಡ್ಡರೆನಿಸಿಕೊಂಡದ್ದಕ್ಕಿಂತ ನಾನು ನಾನೆಂದು ಸಣ್ಣವರಾಗಿದ್ದೇ ಹೆಚ್ಚು ಎನ್ನಬಹುದು. ಅದಕ್ಕೆ ಪ್ರಪಂಚ ಜ್ಙಾನ ಮನುಷ್ಯನಿಗೆ ಬಹು ಮುಖ್ಯ ಎನ್ನುವುದು. ಇನ್ನು ಈಗಿನ ಪೀಳಿಗೆಯ ಪ್ರಕಾರ ದೇಶ ಸುತ್ತುವುದು ಎಂದರೆ ಇನ್ನೊಂದು ದೇಶಕ್ಕೆ ಹೋಗಿ ಶೋಕಿ ಮಾಡುವುದಷ್ಟೆ. ಉದಾಹರಣೆಗೆ ಮಾಲ್ಡೀವ್ಸ್ ನಂತಹ ಸುಂದರವಾದ ದ್ವೀಪರಾಷ್ಟ್ರಕ್ಕೆ ಹೋಗುತ್ತೇವೆ. ಆದರೆ ಅಲ್ಲಿ ಹೋಗಿ ಮಾಡುವುದೇನು. ಮಜಾ ಮಾಡುವುದಷ್ಟೆ ಬಿಟ್ಟರೆ ಇನ್ನೇನಿದೆ. ಆದರೆ ಅಲ್ಲಿಯ ಇತಿಹಾಸ, ಸಂಸ್ಕೃತಿಗಳು ಎಷ್ಟು ವಿಬಿನ್ನವಾಗಿದೆ. ಅಂತಹ ರಾಷ್ಟ್ರಗಳಿಗೆ ಹೋಗಿ ನಾವು ಪಡೆದಿದ್ದೇನು. ಅಲ್ಲಿಯ ಆಚಾರ ವಿಚಾರಗಳ ಬಗ್ಗೆ ನಾವೆಷ್ಟು ಅರಿತಿದ್ದೇವೆ ಎನ್ನುವುದು ಬಹು ಮುಖ್ಯ. ಮಜಾ ಮಾಡುವ ಸಲುವಾಗಿಯೇ ಪ್ರವಾಸ ಮಾಡುವುದು ಎನ್ನುವ ನಮ್ಮ ನಿಲುವು ಬದಲಾಗಿ ಅಲ್ಲಿನ ಜನರ ಅಚಾರ ವಿಚಾರಗಳನ್ನು ನಾವು ತಿಳಿದುಕೊಳ್ಳಬೇಕು. ಆಗ ಮಾತ್ರ ನಮ್ಮ ಹಿರಿಯರು ಹೇಳಿರುವ ದೇಶ ಸುತ್ತಿ ನೋಡು ಎನ್ನುವ ನಮ್ಮ ಹಿರಿಯರ ಮಾತಿಗೆ ಅರ್ಥ ಬರಲು ಸಾದ್ಯ. ಇಲ್ಲವಾದಲ್ಲಿ ನಾವು ಬಾವಿಯೊಳಗಿನ ಕಪ್ಪೆಯಂತಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಹಿರಿಯರು ಹೇಳಿರುವ ನಾಲ್ನುಡಿಗಳನ್ನು ಅರ್ಥಮಾಡಿಕೊಂಡು, ನಾವೂ ಅದನ್ನು ಪಾಲಿಸುತ್ತಾ ಮುಂದಿನ ಪೀಳಿಗೆಗೆ ದಾರಿ ದೀಪವಾಗೋಣ...
✍ ಲಲಿತಶ್ರೀ ಪ್ರೀತಂ ರೈ