ಹೌದು ನಮ್ಮ ಹಿರಿಯರು ಇದನ್ನೇ ಎಷ್ಟು ಚೆನ್ನಾಗಿ ಜನ ಸಾಮಾನ್ಯರಿಗೆ ಅರ್ಥ ಆಗುವ ರೀತಿಯಲ್ಲಿ “ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಅಂತ ಹೇಳಿದ್ದಾರೆ. ಈ ಜಗತ್ತಿನ ಸೃಷ್ಟಿಯ ಎಲ್ಲದರಲ್ಲೂ ಆ ಪರಮಾತ್ಮನ ಹಿಡಿತವಿರುತ್ತದೆ ಎನ್ನುವುದು ನಮ್ಮ ನಂಬಿಕೆ. ಹೊಟ್ಟೆ ತುಂಬಿದಾಗ ಆತ್ಮ ತೃಪ್ತಿಯಾಗುತ್ತದೆ ಎನ್ನುವುದು ಲೋಕರೂಡಿಯ ಮಾತು. "ವೈಶ್ವಾನರ ರೂಪದಲ್ಲಿ ನಾನು ಜೀವಿಗಳ ಜಠರದಲ್ಲಿ ಇದ್ದೇನೆ" ಎಂದು ಶ್ರೀ ಕೃಷ್ಣ ‘ಭಗವದ್ಗೇತೆ’ಯಲ್ಲಿ ನುಡಿದಿರುವುದನ್ನು ನಾವು ನೆನೆಯಬಹುದು. ಹೌದು ಹೊಟ್ಟೆ ತುಂಬಿದರೆ ವೇದಾಂತ ತಾನೇ ತಾನಾಗಿ ಹೊರಬರುತ್ತದೆ. ಪುರಂದರ ದಾಸರು "ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ" ಎಂದಿದ್ದಾರೆ. ಆದರೆ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಎನ್ನುವುದು ಸರಿಯಾದರೂ ತನ್ನ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳಿಗಾಗಿ ಸೇರಿಸಿ ಇಡುವುದು ಎಷ್ಟು ಸರಿ. ಇದ್ದವರು ಮನೆಯ ಮೇಲೆ ಮನೆ ಕಟ್ಟಿ ಮೆರೆಯುತ್ತಿದ್ದಾರೆ. ಬಡವರು ಈ ಜಗದಲ್ಲಿ ಒಂದೊತ್ತಿನ ತುತ್ತಿಗೂ ಕಷ್ಟ ಬೀಳುತ್ತಿದ್ದಾರೆ. ಎಂತಹ ವಿಪರ್ಯಾಸ ನೋಡಿ. “ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಜನ ಏನೆನೋ ಮಾಡುತ್ತಾರೆ. ಎಂತೆಂತಹ ವೇಷವನ್ನು ಮಾಡಿಸುತ್ತದೆ ಈ ಹೊಟ್ಟೆ. ಈ ಬದುಕಿನ ನಾಟಕ ಶಾಲೆಯಲ್ಲಿ ನಾವು ಒಂದಿಲ್ಲೊಂದು ರೀತಿಯ ಪಾತ್ರದಾರಿಗಳು. ಇಂದು ನಮ್ಮ ಮತ್ತು ನಮ್ಮವರ ಹೊಟ್ಟೆ ತುಂಬಿಸಲು ಪ್ರಯತ್ನಿಸುವ ಮನುಷ್ಯ ಹೊಟ್ಟೆ ತುಂಬುತ್ತಿದ್ದಂತೆ ನಾಳೆಯ ಯೋಚನೆ ಶುರು ಮಾಡಿ ಬಿಡುತ್ತಾನೆ. ಹೀಗೆ ನಾಳೆ, ನಾಡಿದ್ದು, ಮಕ್ಕಳು ಮೊಮ್ಮಕ್ಕಳು ಮರಿ ಮೊಮ್ಮಕ್ಕಳವರೆಗೂ ಕರಗದಷ್ಟು ಆಸ್ತಿ ಮಾಡಿ ಕೊನೆಗಾಲದಲ್ಲಿ ತಾನು ಒಂದೊತ್ತು ಅನ್ನ ತಿನ್ನಲೂ ಸಾದ್ಯವಾಗದೇ ಸಾಯುವವರನ್ನು ನಾವು ನೋಡಿದ್ದೇವೆ. ತಿಂದುಂಡು ಅನುಭವಿಸಬೇಕಾದ ವಯಸ್ಸಿನಲ್ಲಿ ಗಂಟು ಕಟ್ಟುವುದರಲ್ಲೇ ತನ್ನ ಜೀವವನ್ನು ಸವೆದು ಕೊನೆಗೆ ಇನ್ನಾರೋ ಅನುಭವಿಸುವ ಹಾಗಾಗುತ್ತದೆ. ನಾನು ಹೊಟ್ಟೆಯ ಬಗ್ಗೆ ಮಾತಾಡಲು ಒಂದು ಕಾರಣವಿದೆ. ಅಂದೊಂದು ಮದ್ಯಾಹ್ನ ಮಂಗಳೂರಿನ ಸರ್ಕಲ್ ವೊಂದರ ಕಡೆಯಿಂದ ಪಾಸಾಗುವಾಗ ಒಂದು ಹದಿಹರೆಯದ ಹುಡುಗಿ ಕೈಯಲ್ಲಿ ಮಾರುವುದಕ್ಕೆ ಕರ್ಚಿಫ್‌ಗಳನ್ನು ಹಿಡಿದು ರಸ್ತೆಯ ತುಂಬಾ ವಾಹನ ನಿಂತಿದ್ದರೂ, ಪಕ್ಕದಲ್ಲೇ ಇದ್ದ ಡಿವೈಡರ್‌ನಲ್ಲಿ ಬೇಜಾರಿನಿಂದ ಏನನ್ನೋ ಯೋಚಿಸುತ್ತಾ ಕುಳಿತಿದ್ದದ್ದನ್ನು ನೋಡಿದಾಗ ನನ್ನ ಕರುಳು ಚುರುಕ್ ಎಂದಿತ್ತು. ಸುತ್ತಲೂ ಕಣ್ಣಾಡಿಸಿದಾಗ ಒಂದಷ್ಟು ದೂರದಲ್ಲಿ ಅವಳ ಜೊತೆಗಾರರು ಕಾಣಿಸಿದರು. ಒಂದು ದೊಡ್ಡ ಅಲೆಮಾರಿ ಕುಟುಂಬವೇ ಅಲ್ಲಿತ್ತು. ಅವರನ್ನೆಲ್ಲಾ ನೋಡಿದಾಗ ನನಗೆ ಅವಳ ಬಳಿ ಕರ್ಚಿಫ್ ತೆಗೆದುಕೊಂಡು ಮಾತ್ರ ಅವಳಿಗೆ ನಾನು ಸಹಾಯ ಮಾಡಬಲ್ಲೆ ಎನಿಸಿತು. ಈಗ ತಾನೇ ಯೌವನಕ್ಕೆ ಕಾಲಿಡುತ್ತಿರುವ ಹುಡುಗಿ. ಅವಳ ಕಣ್ಣಿನಲ್ಲಿ ಅದೆಷ್ಟು ಕನಸು ಚಿಗುರೊಡೆದಿರಲಾರದು ನೀವೇ ಹೇಳಿ. ಅಂತಹ ಯೌವನಕ್ಕೆ ಕಾಲಿಡುತ್ತಿರುವ ಹುಡುಗಿಯೊಬ್ಬಳು ನಡು ರಸ್ತೆಯಲ್ಲಿ ಇದ್ದರೆ, ಅಂದರೆ ಅದು ವ್ಯಾಪಾರ ಮಾಡುವ ಸಲುವಾಗಿ ಇರಲಿ ಅಥವಾ ಇನ್ನಾವುದೇ ರೀತಿಯಲ್ಲಾಗಲಿ ಅವಳ ಸುತ್ತಲಿರುವ ಹದ್ದುಗಳು ಕುಕ್ಕಿ ತಿನ್ನಲು ಹೊಂಚು ಹಾಕದಿರಬಹುದೇ?. ಹೌದು ಒಬ್ಬ ಹೆಣ್ಣು ಮಗಳಾಗಿ ನನಗೆ ಅದರ ಅರಿವಿದೆ ಬಿಡಿ. ಹೆಣ್ಣು ಮಕ್ಕಳಲ್ಲಿ ನಾವು ತಾಯಿಯನ್ನು ನೋಡುತ್ತೇವೆ ಎಂದು ಗಂಡು ಎಷ್ಟೇ ಭಾಷಣ ಬಿಗಿದರೂ, ಒಂಟಿ ಹೆಣ್ಣು, ಅದರಲ್ಲೂ ಅಸಹಾಯಕಳಾಗಿ ಎದುರು ನಿಂತರೆ ಅದೆಷ್ಟು ಗಂಡಸರಿಗೆ ಅವಳಲ್ಲಿ ತನ್ನ ತಾಯಿ ಕಾಣಿಸುತ್ತಾರೆ ಎನ್ನುವುದನ್ನು ಗಂಡು ಒಮ್ಮೆ ಎದೆ ಮುಟ್ಟಿ ಕೇಳಿಕೊಳ್ಳಬೇಕಾಗುತ್ತದೆ. ಬಿಡಿ ನಮ್ಮ ಸಮಾಜದಲ್ಲಿ ಇನ್ನೂ ಕೂಡ ಹೆಣ್ಣು ಎಂದರೆ ಕಾಮ, ಮನರಂಜನೆಗೆ ದೊರಕುವ ವಸ್ತು ಎನ್ನುವ ಭಾವನೆ ಉಳಿದಿದೆ. ಬಿಡಿ ಅದರ ಬಗ್ಗೆ ಹೇಳುತ್ತಾ ಹೋದರೆ ಇಂದು ಮುಗಿಯದು. ಅಲ್ಲಿಂದ ಹೊರಟ ನನ್ನ ಮನಸಿನಲ್ಲಿ ಅದೇನು ಮಸುಕು ಮನೆ ಮಾಡಿದಂತಾಗಿತ್ತು. ಈ ದೇವರಿಗೇಕೆ ಕರುಣೆ ಇಲ್ಲ. ಕೆಲವರಿಗೆ ಬೇಡ ಎನ್ನುವಷ್ಟು ಆಸ್ತಿ ಅಂತಸ್ತು. ಇನ್ನು ಕೆಲವರಿಗೆ ಹೊಟ್ಟೆಗೂ ಇಲ್ಲದೆ ಸಾಯುವ ಪರಿಸ್ಥಿತಿ. ಒಂದು ತಕ್ಕಡಿ ಮೇಲೆ ಇನ್ನೊಂದು ತಕ್ಕಡಿ ಕೆಳಗೆ. ಅದನ್ನು ಸರಿ ಸಮಾನಾಗಿ ತೂಗಿದ್ದರೆ ಅದೆಷ್ಟು ಚೆನ್ನಾಗಿತ್ತು ಅನಿಸಿತು. ನಾನಿನ್ನೂ ಚಿಕ್ಕವಳಿದ್ದಾಗ ಅಮ್ಮನ ಬಳಿ ಒಂದು ಸಲ ಕೇಳಿದ್ದೆ “ಅಮ್ಮ ನಮಗೇಕೆ ಯವಾಗಲೂ ಕಷ್ಟ, ಬೇರೆಯವರೇಕೆ ಅಷ್ಟು ಚೆನ್ನಾಗಿದ್ದಾರೆ” ಅಂತ. ಆಗ ದೈವಭಕ್ತೆಯಾದ ನಮ್ಮಮ್ಮ ಒಂದೇ ಮಾತಿನಲ್ಲಿ “ನಮ್ಮ ಪೂರ್ವ ಜನ್ಮದ ಕರ್ಮದ ಫಲವನ್ನು ನಾವು ಅನುಭವಿಸುತ್ತದ್ದೇವೆ” ಎಂದಿದ್ದರು. ಅದು ನಿಜ ಇರಬಹುದೇನೋ ಅನಿಸಿತ್ತು ಆ ಸಮಯಕ್ಕೆ. ಆದರೆ ಅಮ್ಮನ ಮಾತಿನಲ್ಲಿ ಮಗಳು ಕೂಡ ಇನ್ನೊಬ್ಬರಿಗೆ ನೋವು, ತೊಂದರೆ ಕೊಡದೇ ಬದುಕಲಿ ಎನ್ನುವುದು ಇತ್ತು ಎನ್ನಿಸುತ್ತದೆ. ಎಷ್ಟೋ ಸಲ ಇಂತಹ ಜನರು ತಮ್ಮ ಹೊಟ್ಟೆ ಪಾಡಿಗಾಗಿ ಕಷ್ಟ ಬೀಳುವುದನ್ನು ನೋಡಿದಾಗ ಇಂತಹ ಆದುನಿಕ ಯುಗದಲ್ಲೇ ಇಂತಹ ಬಡತನ ಜಗತ್ತನ್ನು ಕಾಡುತ್ತಿದೆ ಎಂದರೆ ಇನ್ನೂ ನಮ್ಮ ಅಜ್ಜ, ಮುತ್ತಜ್ಜರ ಕಾಲದಲ್ಲಿ ಅದೆಂತಹ ಬಡತನದ ಬೇಗೆಯಲ್ಲಿ ಬೆಂದಿರಬಹುದು ಎನಿಸದೇ ಇರುವುದಿಲ್ಲ. ಇನ್ನೂ ಶಾಲೆಗೆ ಸೇರಿ ಆಟ-ಪಾಠ ಕಲಿತು ತನ್ಮೂಲಕ ದೇಶದ ಸತ್ಪ್ರಜೆಯಾಗಬೇಕಾದ ಮಕ್ಕಳು ತನ್ನ ತಂದೆ ತಾಯಿಯ ಜೊತೆ ಬಿಸಿಲು, ಗಾಳಿ, ಮಳೆ ಲೆಕ್ಕಿಸದೆ ರಸ್ತೆ ಬದಿಯಲ್ಲಿ ಬದುಕಿನ ಬಂಡಿ ತಳ್ಳಲು ಪಡುತ್ತಿರುವ ಪಾಡನ್ನು ಗಮನಿಸಿದರೆ ಸರ್ಕಾರಗಳು ಜಾರಿಗೆ ತರುವ ಯೋಜನೆಗಳು ಈ ಜನರಿಗೆ ಏಕೆ ತಲುಪಲು ಸಾಧ್ಯವಾಗುತ್ತಿಲ್ಲವೆಂಬುದು ಅರ್ಥವಾಗುತ್ತಿಲ್ಲ. ಪ್ರತಿ ವರ್ಷ ಕೋಟಿಗಟ್ಟಲೆ ಹಣವನ್ನು ಇಂತವರಿಗಾಗಿಯೇ ಸರಕಾರಗಳು ಮೀಸಲಿಡುತ್ತಿದೆ. ಆದರೆ ಈ ಸವಲತ್ತುಗಳು ಯಾವ ಹೊಟ್ಟೆ ಬಾಕರ ಪಾಲಾಗುತ್ತಿದೆಯೋ ಅಂತವರಿಗೆ ಈ ಕರ್ಮದ ಫಲಗಳು ಕಾಡದಿರುವುದೇ? ಎನ್ನುವ ಪ್ರಶ್ನೆಯೂ ಕಾಡುವುದುಂಟು. ಏನೇ ಆಗಲಿ ಈ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕುವುದುಂಟು. ಮಾನವೀಯ ಮೌಲ್ಯಗಳನ್ನು ನಮ್ಮ ಮುಂದಿನ ಪೀಳಿಗೆಗೆ ಮುಟ್ಟಿಸುವ ಮೂಲಕ ಅವರಿಗೆ ದಾರಿದೀಪವಾಗೋಣ...
✍ಲಲಿತಶ್ರೀ ಪ್ರೀತಂ ರೈ