image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭರವಸೆಯೇ ಬದುಕಿನ ಬಂಡವಾಳವಾಗಬೇಕು...

ಭರವಸೆಯೇ ಬದುಕಿನ ಬಂಡವಾಳವಾಗಬೇಕು...

ನಮ್ಮ ಜೀವನದಲ್ಲಿ ನಾಳೆ ಏನು ಎನ್ನುವದಾಗಲಿ ಅಥವಾ ನಾಳೆ ಹೀಗೆಯೇ ಆಗುತ್ತದೆ ಎಂದು ಹೇಳುವುದಕ್ಕೆ ಯಾರಿಂದಲೂ ಸಾದ್ಯವಿಲ್ಲ. ಆದರೂ ಇಲ್ಲಿ ನಾವೆಲ್ಲರೂ ಗಾಳಿಯಲ್ಲಿ ಗೋಪುರ ಕಟ್ಟುವವರೇ. ನಾಳೆ ಒಳ್ಳೆಯದಾಗುತ್ತದೆ, ಯಶಸ್ಸು ಸಿಗುತ್ತದೆ ಎಂಬ ಭರವಸೆಯೇ ಬದುಕಿನ ಬಂಡವಾಳವಾಗಬೇಕು. ತನ್ನ ಪ್ರಯತ್ನಕ್ಕೆ ಯಶಸ್ಸು ಸಿಗಬೇಕೆಂಬ ಆಸೆ, ಅಪೇಕ್ಷೆಯಂತೂ ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ. ಆದರೆ ಸೋಲು ಗೆಲುವಿನ ಗುಟ್ಟನ್ನು ಸ್ವಷ್ಟವಾಗಿ ತಿಳಿಯ ಬಲ್ಲವನು ಆ ದೇವರು ಒಬ್ಬ ಮಾತ್ರ. ನಾವು ಮಾಡುವ ಪ್ರಯತ್ನದಲ್ಲಿ ನಿಷ್ಟೆ ಇರಬೇಕಷ್ಟೇ. ’ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ’ ನಾವು ಮಾಡುವ ಕಾರ್ಯದ ಫಲಾಫಲ ದೇವರಿಗೆ ಬಿಟ್ಟಿದ್ದು. ಆದರೆ ನಿನಗೆ ಸಿಗಬೇಕಾಗಿರುವುದು ಇಂದಲ್ಲ ನಾಳೆ ನಿನಗೆ ಸಿಕ್ಕೇ ಸಿಗುತ್ತದೆ ಎನ್ನುವುದನ್ನು ಶ್ರೀ ಕೃಷ್ಣ ಹೇಳುತ್ತಾನೆ. ಇಂದಲ್ಲ ನಾಳೆ ಸಾಧಿಸಿಯೇ ಸಾಧಿಸುತ್ತೇನೆ ಎನ್ನು ಛಲದೊಂದಿಗೆ ಮುಂದುವರಿಯಬೇಕು. ಇನ್ಕಾನೊಂದು ವಿಷಯ ತಿಳಿದುಕೊಳ್ಳಲೇ ಬೇಕು. ಕಾಲ ಎಲ್ಲವನ್ನೂ ಬದಲಾಯಿಸಿ ಬಿಡುತ್ತದೆ. ಒಂದು ಕಾಲದಲ್ಲಿದ್ದ ಅಭಿರುಚಿ ಮತ್ತೊಂದು ಕಾಲಕ್ಕೆ ಹಾಗೇ ಇರಲು ಸಾದ್ಯವಿಲ್ಲ. ಅದು ಯಾವ ಸಮಯದಲ್ಲಿ ಬೇಕಾದರೂ ಬದಲಾಗಬಹುದು.ಹಾಗೇ ದೇಹ ಸೌಷ್ಠವ, ಸೌಂದರ್ಯ, ಅಧಿಕಾರ, ಜನಪ್ರಿಯತೆ ಇವೆಲ್ಲವೂ ಕಾಲಕ್ಕೆ ತಕ್ಕಂತೆ ಪ್ರಭಾವವನ್ನು ಕಳೆದುಕೊಳ್ಳಲೇಬೇಕು. ಸೂರ್ಯನ ಮುಂಜಾನೆಯ ಪ್ರಖರತೆಗೂ ಮದ್ಯಾಹ್ನದ ಪ್ರಖರತೆಗೂ ಅಜಗಜಾಂತರ ವ್ಯತ್ಯಾಸ. ಮದ್ಯಾಹ್ನ ನಮ್ಮನ್ನು ಸುಟ್ಟೇ ಬಿಡುತ್ತಾನೆ ಎನಿಸುವ ಸೂರ್ಯ ಮತ್ತೆ ಸಂಜೆಯಾಗುತ್ತಿದ್ದಂತೆ ಸೌಮ್ಯನಾಗಲು ಶುರುವಾಗಿ ಬಿಡುತ್ತಾನೆ. ಹಾಗೇಯೆ ಮನುಷ್ಯನ ಜೀವನ. ಮುದ್ದು ಮುದ್ಧಾಗಿ, ಸೌಮ್ಯವಾಗಿ ಓಡಾಡುವ ಮಗು ನಾಳೆ ಬೆಳೆದು ಯಾವ ರೀತಿ ಸಮಾಜಕ್ಕೆ ಕೊಡುಗೆ ಕೊಡಬಹುದೋ ಅಥವಾ ಮಾರಕವಾಗಬಹುದೋ, ಆದರೆ ಅವನ ಹದಿ ಹರೆಯ ಮುಗಿಯುತ್ತಿದ್ದಂತೆ ಮತ್ತೆ ಪ್ರಖರತೆ ಕಡಿಮೆಯಾಗುತ್ತಾ ಸೌಮ್ಯನಾಗುತ್ತಾನೆ. ನಮ್ಮಮ್ಮ ಯಾವಾಗಲೂ ಹೇಳುವ ಮಾತು “ಮರಕ್ಕಿಂತ ದೊಡ್ಡ ಮರ ಇದ್ದೇ ಇರುತ್ತದೆ” ಎನ್ನುವಂತೆ ಇಂದು ನಾವೆಷ್ಟು ಮೆರೆದರೂ ನಾಳೆ ನಮ್ಮನ್ನೂ ಮೀರಿಸುವ ಸಾಧಕ, ಭಾದಕರು ಕಾಣಿಸಿಕೊಳ್ಳುತ್ತಾರೆ. ಇಂದು ಚಿರುರಿದ ಚಿಗುರೆಲೆ ನಾಳೆ ಹಣ್ಣೆಲೆ ಆಗಿ ಉದುರಲೇ ಬೇಕು. ಇಂದಿಗೂ ನಾಳೆಗೂ ಮದ್ಯದಲ್ಲಿರುವ ಸಮಯವೇ ನಮ್ಮಲ್ಲಿ ಬದಲಾವಣೆ ತಂದು ಬಿಡುತ್ತದೆ. ವಾಸ್ತವದಲ್ಲಿ ನಾವು ಹೇಗಿರಬೇಕೋ ಹಾಗಿದ್ದಾಗ ಮಾತ್ರ ಬದುಕಿಗೊಂದು ಅರ್ಥ. ನಮ್ಮ ಪ್ರಯತ್ನಗಳಲ್ಲಿ ಯಾವುದಾದರೊಂದು ಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಂತೂ ನಮ್ಮೊಳಗೆ ಜೀವಂತ ಇರಬೇಕು. ಎಸೆವ ಹತ್ತು ಕಲ್ಲುಗಳಲ್ಲಿ ಒಂದಾದರೂ ಮಾವಿನಕಾಯಿಯನ್ನು ಉದುರಿಸಬಹುದು ಎಂಬ ಭರವಸೆ ಇರಬೇಕು. ಭರವಸೆಯೇ ಬದುಕಿಗೆ ಬೆಳಕು. ಒಬ್ಬೊಬ್ಬರ ದೃಷ್ಟಿಯಲ್ಲಿ ಸಾದನೆ ಎನ್ನುವುದು ವಿಭಿನ್ನವಾಗಿರುತ್ತದೆ. ಎಷ್ಟೋ ವ್ಯಕ್ತಿಗಳು ತಮ್ಮ ವಯಸ್ಸು 60 ಮುಗಿದೇ ಹೋಯಿತು ಎನ್ನುವವರಿದ್ದಾರೆ. ಅರವತ್ತರ ನಂತರ ಅರಳೋ ಮರಳೋ ಎನ್ನುವುದು ಗಾದೆಯಷ್ಟೇ ಆಗಿ ಉಳಿದಿದೆ.  ಆದರೆ  64 ದಾಟಿದ ನಂತರ ಸಾಧನೆ ಮಾಡಿದವರ ಉದಾಃರಣೆಗಳು ನಮಗೆ ಸಿಗುತ್ತದೆ. ಇಂದು ಜಗತ್ತಿನ ಬ್ರಾಂಡ್ ಕೆ ಎಫ್ ಸಿ ಚಿಕನ್ ನ ಸಂಸ್ಥಾಪಕ  Colonel Harland Sanders ಅರವತ್ತರ ನಂತರ ಪ್ರಖ್ಯಾತನಾದ. ಸಾಧನೆಗೆ ವಯಸ್ಸಿನ ಹಂಗಾಗಲಿ, ಕ್ಷೇತ್ರದ ಹಂಗಾಗಲಿ ಇರುವುದಿಲ್ಲ. ಒಬ್ಬನಿಗೆ ನಾವು ಮಾಡುವ ಕೆಲಸ ದೊಡ್ಡದೆನಿಸಿದರೆ, ಇನ್ನೊಬ್ಬನಿಗೆ ಅದು ಲೆಕ್ಕಕ್ಕೆ ಇಲ್ಲದ್ದೆನಿಸಿದರೆ ಅದಕ್ಕೆ ಆಶ್ಚರ್ಯ ಪಡುವ ಅಗತ್ಯವಿಲ್ಲ. ಬೇರೆಯವರ ದೃಷ್ಟಿಯಲ್ಲಿ ನಮ್ಮ ಸಾಧನೆಗಳನ್ನು ನೋಡಲು ಹೊರಟರೆ ಕೊನೆಗೆ ನಾವು ಮೂರ್ಖರೆನಿಸಿಕೊಳ್ಳಬಹುದು. ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ನಿರೀಕ್ಷಿತ ಉತ್ತೇಜನ, ಪ್ರಶಂಸೆ, ಪ್ರೋತ್ಸಾಹ ಇತರರಿಂದ ಸಿಗದೇ ಹೋಗಬಹುದು. ಟೀಕೆಗೂ ಗುರಿಯಾಗಬೇಕಾಗಬಹುದು. ನಮಗಿಷ್ಟವಾಗಿರುವುದನ್ನು ಬೇರೆಯವರೂ ಇಷ್ಟಪಡಬೇಕೆನ್ನುವುದು ಮತ್ತೊಮ್ಮೆ ಮೂರ್ಖತನವೇ. ಅವರಿಗೂ ಅವರದೇ ಆದ ಆಯ್ಕೆಗಳಿರುತ್ತದೆ. ಪ್ರತಿಯೊಬ್ಬನ ದೃಷ್ಟಿಕೋನವೂ ಭಿನ್ನವಾಗಿರುತ್ತದೆ. ಒಬ್ಬರು ಬಿಳಿಯ ಬಣ್ಣ ಇಷ್ಟ ಪಟ್ಟರೆ ಕೆಲವರು ಕಪ್ಪು ಇಷ್ಟ ಪಡಬಹುದು. ಹಾಗಂತ ಅವರ ಆಯ್ಕೆ ತಪ್ಪು ಎನ್ನಲು ನಿಮಗೆ ಅಧಿಕಾರವಿಲ್ಲ. ಅವರಿಗೆ ಆ ಕಪ್ಪಿನಲ್ಲಿ ಸೌಂದರ್ಯ ಕಾಣಿಸಿದೆ ಅಷ್ಟೆ. ’ಲೋಕೋ ಭಿನ್ನ ರುಚಿಃ’ ಅವರವರ ಆಯ್ಕೆ ಅವವರವರದು. ಒಬ್ಬರಿಗೆ ಖಾರ ಇಷ್ಟವಾದರೆ ಮತ್ತೆ ಕೆಲವರಿಗೆ ಸಿಹಿ ಇಷ್ಟ ಆಗಬಹುದು. ಅವರವರ ರುಚಿ ಅವರವರಿಗೆ. ಸಾಧನೆಯೂ ಅಷ್ಟೆ, ಅವರವರ ಯೋಗ್ಯತಾನುಸಾರ ಎಲ್ಲರೂ ಸಾಧನೆಯನ್ನು ಮಾಡಿರುತ್ತಾರೆ. ಅದು ಎಲ್ಲರೂ ಒಂದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದಿಲ್ಲ. ಆದರೆ ಈಗಿನ ಅಪ್ಪ ಅಮ್ಮಂದಿರನ್ನು ನೋಡಿದಾಗ ಇಂತಹ ಮೂರ್ಖತನ ಕಾಣ ಸಿಗುತ್ತದೆ. ಬೇರೆಯವರ ಮಕ್ಕಳು ಇಂಜಿನೀಯರಿಂಗೋ ಅಥವಾ ಡಾಕ್ಟರ್ ಓದಲು ಹೋದರೆ ತಮ್ಮ ಮಗುವೂ ಅದನ್ನೇ ಓದಬೇಕು ಎನ್ನುವಂತಹ ಹುಚ್ಚು ಇರುತ್ತದೆ. ತನ್ನ ಮಕ್ಕಳಿಗೆ ಆ ಓದಿನಲ್ಲಿ ಆಸಕ್ತಿ ಇದೆಯೋ ಇಲ್ಲವೋ ಅದನ್ನು ನೋಡುವುದೇ ಇಲ್ಲ. ಮಕ್ಕಳಿಗೂ ವಿದಿ ಇಲ್ಲದೇ ಅಪ್ಪ ಹಾಕಿದ ಆಳದ ಮರ ಎನ್ನುವ ಸಲುವಾಗಿ ಅಲ್ಲೇ ನೇಣು ಹಾಕಬೇಕಾದ ಪರಿಸ್ಥಿತಿ. ಎಲ್ಲವನ್ನೂ ಒಂದೇ ದೃಷ್ಟಿಕೋನದಿಂದ ಅಳೆಯಲೂ ಬರುವುದಿಲ್ಲ. ನಮಗೆ ಸಂತೃಪ್ತಿ ತಂದು ಕೊಡುವ ಸಾಧನೆ ಇನ್ನೊಬ್ಬನಿಗೆ ಸಾರವಿಲ್ಲದಿರಬಹುದು. ಜಗತ್ತಿನಲ್ಲಿ ಮನ್ನಣೆಯೆನ್ನುವುದು ಅಗತ್ಯ ಮತ್ತು ಸಂದರ್ಭಕ್ಕೆ ಅನುಗುಣವಾಗಿರುತ್ತದೆ. ಆದರೆ ಗೌರವನ್ನು ಬಯಸಿ, ಬೆನ್ನುಹತ್ತಿ, ಒತ್ತಾಯಿಸಿ ಗಳಿಸಿಕೊಂಡರೆ ಅದಕ್ಕೆ ಮರ್ಯಾದೆ ಕಡಿಮೆ. ಬೇರೆಯವರಿಂದ ಬಿಡಿ ನಮ್ಮ ಮನಸ್ಸು ಕೂಡ ಅಂತಹ ಗೌರವವನ್ನು ಒಪ್ಪಿಕೊಳ್ಳುವುದಿಲ್ಲ. ಮನುಷ್ಯರಾಗಿ ಹುಟ್ಟಿದ ಮೇಲೆ ಎಲ್ಲರಲ್ಲಿಯೂ ಒಂದಲ್ಲ ಒಂದು ದೋಷ ಇದ್ದೇ ಇರುತ್ತದೆ. ಕೆಲವರಿಗೆ ನೆಮ್ಮದಿ ಇದ್ದರೆ ಸಂಪತ್ತು ಇರುವುದಿಲ್ಲ, ಸಂಪತ್ತಿದ್ದರೆ ನೆಮ್ಮದಿಯಿಲ್ಲ. ಇವೆರಡೂ ಇದ್ದರೆ ಆಯುಷ್ಯವೇ ಇರುವುದಿಲ್ಲ. ಯಾರಿಗೆ ಯಾರ ಜೀವನವೂ ಹೋಲಿಕೆಯಾಗಲು ಸಾಧ್ಯವಿಲ್ಲ. ಅವರವರ ಬದುಕು ಅವರವರಿಗೆ ದೊಡ್ಡದು ಎನ್ನುವುದನ್ನು ಮನಗಂಡು ನಮ್ಮ ಮುಂದಿನ ಪೀಳಿಗೆಗೆ ದಾರಿದೀಪವಾಗೋಣ...

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ