image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಚಾರ್ಯ ದೇವೋ ಭವ....

ಆಚಾರ್ಯ ದೇವೋ ಭವ....

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ಎಂದು ಗುರುವನ್ನು ಪೂಜಿಸುವ ಸಂಸ್ಕೃತಿ ನಮ್ಮದು. ವೇದ, ಉಪನಿಷತ್‌ಗಳಲ್ಲಿಯೂ ಗುರುವಿಗೆ ವಿಶೇಷ ಸ್ಥಾನವಿದೆ. ಮಾತೃದೇವೋ, ಪಿತೃದೇವೋ, ಆಚಾರ್ಯ ದೇವೋ ಭವ ಎಂದು ತಂದೆ ತಾಯಿಯ ನಂತರದ ಸ್ಥಾನ ಗುರುವಿನದು ಎಂದು ನಂಬಿಕೊಂಡು, ಪೂಜಿಸುತ್ತಾ ಬಂದ ದೇಶ ನಮ್ಮದು. ಸರಿಯಾದ ದಾರಿ ತೋರುವ, ಬುದ್ದಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವಂತೆ ಮಾರ್ಗದರ್ಶನ ಮಾಡುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ. ಪುರಾಣದ ಕತೆಗಳನ್ನು ನೋಡಿದರೆ ನಮ್ಮ ಹಿರಿಯರು ಗುರುಗಳಿಗೆ ಎಂತಹ ಮಹತ್ವವನ್ನು ನೀಡಿದ್ದರು ಎಂದು ತಿಳಿಯುತ್ತದೆ.

ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳಲು ಅವನಿಗೆ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳೇ ಕಾರಣ ಎನ್ನಬಹುದು. ಅವರ ಮಾರ್ಗದರ್ಶನವೇ ಆತನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು. ಮಹಾಭಾರತದಲ್ಲಿ ಅರ್ಜುನ ಒಬ್ಬ ಉತ್ತಮ ಬಿಲ್ವಿದ್ಯಾ ಪ್ರವೀಣನಾಗಲೂ ಕೂಡ ದ್ರೋಣಾಚಾರ್ಯರಂತಹ ಗುರುಗಳೇ ಕಾರಣ. ನಮ್ಮ ಇತಿಹಾಸದ ಪ್ರಸಿದ್ದ ದೊರೆಗಳಾದ ಹಕ್ಕ ಬುಕ್ಕರು, ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ವಿದ್ಯಾರಣ್ಯರಂತಹ ಗುರುಗಳ ಮಾರ್ಗದರ್ಶನವೇ ಕಾರಣ. ಶಿವಾಜಿ ಮಹಾರಾಜ ಸೋತು ಬಸವಳಿದು ಕಂಗೆಟ್ಟು ಕುಳಿತಿದ್ದಾಗ, ಸಮರ್ಥ ರಾಮದಾಸರಂತಹ ಗುರುಗಳು ಆತನಿಗೆ ಅನೇಕ ಉಪದೇಶಗಳ ಮೂಲಕ ಆತ್ಮವಿಶ್ವಾಸ ತುಂಬಿದ್ದನ್ನು ನಾವು ಓದಿದ್ದೇವೆ. ಇದರ ನಂತರ ಶಿವಾಜಿ ಮಹಾರಾಜರು ಪುನ: ತನ್ನ ಸಾಮ್ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಚಂದ್ರಗುಪ್ತ ಮೌರ್ಯನ ಗುರು ಚಾಣಾಕ್ಯರ ಕತೆ... ಹೀಗೆ ಮುಂದುವರಿಯುತ್ತದೆ ನಮ್ಮ ಪುರಾಣ, ಇತಿಹಾಸಗಳಲ್ಲಿ ದೊರಕುವ ಮಹಾನ್ ಪುರುಷರುಗಳ ಹಿಂದೆ ಇದ್ದ ಗುರುಗಳ ಪಟ್ಟಿ.

ಹಾಗೇ ಕೆಟ್ಟ ದಾರಿಯಲ್ಲಿ ನಡೆಸುವುದು ಕೂಡ ಗುರುವಿನ ಕೈಯಲ್ಲಿರುತ್ತದೆ. ಅಂತಹ ಉದಾಹರಣೆಗಳನ್ನು ಕೂಡ ನಾವು ಪುರಾಣಗಳಲ್ಲಿ ಕೇಳಿದ್ದೇವೆ. ಇನ್ನೂ ವಚನಗಳಲ್ಲೂ ಗುರುಗಳ ಬಗ್ಗೆ ಹೇಳಿದ್ದಾರೆ, ವಚನಗಳ ಪ್ರಕಾರ ಅರಿವನ್ನು ಪಡೆದವನು, ತನ್ನನ್ನು ತಾನು ಅರಿತವನು ಗುರು ಆಗುತ್ತಾನೆ. ಅವನು ಯಾವ ಜಾತಿಗೆ ಬೇಕಾದರೂ ಸೇರಿದವನಾಗಿರಬಹುದು. ಅವನಿಗೆ ಮಾತ್ರ ಇತರರಿಗೆ ಬೋಧಿಸುವ ಅಧಿಕಾರವಿದೆ. ಬಸವೇಶ್ವರರು ಅರಿವನ್ನು ಪಡೆದವರಿಗೆ ಮಾತ್ರ ಗುರು ಆಗುವ ಅರ್ಹತೆ ಇದೆ ಎಂದರು. ಈ ಅರಿವು ಮಾದಾರ ಚೆನ್ನಯ್ಯ, ಕಿನ್ನರಿ ಬೊಮ್ಮಯ್ಯ, ಮುಂತಾದವರಿಗೆ ಇದ್ದುದರಿಂದ ಬಸವೇಶ್ವರರು ಅವರನ್ನೆಲ್ಲ ತಮ್ಮ ಗುರು ಎಂದು ಧೈರ್ಯವಾಗಿ ಒಪ್ಪಿಕೊಂಡರು. ಅಂಬಿಗರ ಚೌಡಯ್ಯನವರು ‘ಅರ್ಹತೆಯಿಲ್ಲದೆ, ಕೇವಲ ಜಾತಿಯಿಂದ ಗುರುವಾದವನು ಮತ್ತೊಬ್ಬನಿಗೆ ಮಾರ್ಗದರ್ಶನ ಮಾಡುವುದು, "ಅಂಧಕನ ಕೈಯ ಅಂಧಕ ಹಿಡಿದು ನಡೆಸಿದಂತೆ" ಅಂದರೆ ಕುರುಡನೊಬ್ಬ ಇನ್ನೊಬ್ಬ ಕುರುಡನನ್ನು ನಡೆಸಿದಂತೆ ಎಂದಿದ್ದಾರೆ. ಶಿಷ್ಯರು ಹೇಗೋ ಇದ್ದರೂ ನಡೆದೀತು. ಆದರೆ ಯೋಗ್ಯ ಗುರುಗಳಂತೂ ಇರಲೇಬೇಕು. ಏಕೆಂದರೆ ಗುರುಗಳೇ ಶಿಷ್ಯರನ್ನು ರೂಪಿಸುತ್ತಾರೆ ಎಂಬುದನ್ನು ಚೌಡಯ್ಯನವರು ಹೇಳುತ್ತಾರೆ. ನಮ್ಮ ಹಿರಿಯರು "ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು" ಎಂದಿದ್ದಾರೆ. ಹಿಂದಿನ ಕಾಲದಲ್ಲಿ ಮನೆಯೇ ಮೊದಲ ಪಾಠ ಶಾಲೆಯಾಗಿತ್ತು. ಯಾಕೆಂದರೆ ಆಗ ಕೂಡು ಕುಟುಂಬವಿತ್ತು.

ಅಲ್ಲಿ ಹುಟ್ಟಿದ ಮಗುವಿಗೆ ಅಪ್ಪ, ಅಮ್ಮನ ಜೊತೆಗೆ ಅಜ್ಜ, ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, ಅತ್ತೆ ಮಾವ, ಅಣ್ಣ, ತಮ್ಮಂದಿರು ಮುಂತಾದ ಸಂಬಂಧಗಳಿರುತ್ತಿತ್ತು. ಎಲ್ಲರೊಡನೆ ಬೆರೆತು ಬದುಕುವುವ ಪಾಠ ಮನೆಯಿಂದಲೇ ಪ್ರಾರಂಭವಾಗುವುದರ ಜೊತೆಗೆ ಹಿರಿಯರನ್ನು ಹೇಗೆ ಗೌರವಿಸಬೇಕೆನ್ನುವ ಬಗ್ಗೆಯೂ ಮಗುವಿಗೆ ಚಿಕ್ಕ ವಯಸ್ಸಿನಲ್ಲಿಯೇ ಮನವರಿಕೆಯಾಗುತ್ತಿತ್ತು. ಹಾಗೆ ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆಯೂ ತನಗೆ ಅರಿವಿಲ್ಲದಂತೆ ಆ ಮಗುವಿನಲ್ಲಿ ಮೈಗೂಡಿ ಬಿಡುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ, ಅಪ್ಪ ಅಮ್ಮ ಒಂದು ಮಗು ಇರುವ ಸಂಸಾರದಲ್ಲಿ ಅಪ್ಪ ಅಮ್ಮ ಇಬ್ಬರೂ ಹೊರಗೆ ದುಡಿದು ಸಂಸಾರ ನೊಗವನ್ನು ಹೊರುವುದು ಅನಿವಾರ್ಯವಾಗಿದೆ. ಇದರ ಮದ್ಯೆ ಮಗುವನ್ನು ಕೆಲಸದವರ ಕೈಯಲ್ಲಿ ಕೊಟ್ಟು ತನ್ನ ಭಾದ್ಯತೆಯನ್ನು ಮರೆತಿರುವಾಗ ಆ ಮಗುವಿಗೆ ಮನೆಯು ಯಾವ ರೀತಿಯಲ್ಲಿ ಪಾಠ ಶಾಲೆಯಾದೀತು. ಇನ್ನು ಹೆತ್ತ ತಾಯಿ ನೌಕರಿಯಲ್ಲಿದ್ದರೆ ಅಬ್ಬಬ್ಬಾ ಎಂದರೆ ಆರು ತಿಂಗಳ ಹೆರಿಗೆ ರಜ. ಇನ್ನು ಬೆಳಗ್ಗಿನಿಂದ ಸಂಜೆಯವರೆಗೆ ಹೊರಗಡೆ ದುಡಿದು ಸುಸ್ತಾಗಿ ಬರುವ ಇಂತಹ ಸಂದರ್ಭದಲ್ಲಿ ತಾಯಿ ಹೇಗೆ ಮೊದಲ ಗುರು ಆಗಲು ಸಾದ್ಯ ನೀವೇ ಹೇಳಿ. ಹಿಂದಿನ ಕಾಲದಲ್ಲಿ ಮನೆಯ ವಾತಾವರಣದ ಜೊತೆಗೆ ಆಗಿನ ಕಾಲದಲ್ಲಿ ಇದ್ದಂತಹ ಗುರುಕುಲ ಪದ್ದತಿ, ಮಗುವಿಗೆ ಸನ್ನಡತೆಯ ದಾರಿಯಲ್ಲಿ ಕೊಂಡೊಯ್ಯುತ್ತಿತ್ತು. ಆದರೆ ಈಗ ಎಲ್ಲವೂ ವ್ಯವಹಾರಿಕವಾಗಿದೆ ಅದರಲ್ಲೂ ಈಗಿನ ಶಿಕ್ಷಣ ಪದ್ಧತಿಯಲ್ಲಿ ದುಡ್ಡಿಗಿರುವ ಬೆಲೆ ಶಿಕ್ಷಣದ ಮೌಲ್ಯಕ್ಕಿಲ್ಲ. ಇದು ನಮ್ಮ ಮುಂದುವರಿಯುತ್ತಿರುವ ಸಮಾಜದ ಕೈಗನ್ನಡಿಯಾಗಿ ತೋರುತ್ತಿದೆ. ಹೌದು ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಗುರುಗಳ ಮೇಲಿನ ಗೌರವ ಮೊದಲಿಂತಿಲ್ಲ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಅವರ ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ, ಅಲ್ಲದೆ ಗುರುಗಳು ಹಲವೆಡೆ ಹಾದಿ ತಪ್ಪುತ್ತಿರುವುದು ಕೂಡ ಇದಕ್ಕೆ ಕಾರಣ ಎನ್ನಬಹುದು.

ಈ ಸಮಾಜದಲ್ಲಿ ಮೋಸ, ವಂಚನೆ ಭ್ರಷ್ಟಾಚಾರದಂತ ಘಟನೆಗಳು ಹೆಚ್ಚಾಗಲು ಸರಿಯಾದ ಗುರುವಿನ ಮಾರ್ಗದರ್ಶನವಿಲ್ಲದಿರುವುದೇ ಕಾರಣ. ಇದೆಲ್ಲದ ನಡುವೆ ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಯಾಗಿರುತ್ತಾನೆ, ಆಗಿರಲೇಬೇಕು. ನಾವು ಅನುಭವದ ಶಾಲೆಯಲ್ಲಿ ವಿದ್ಯಾರ್ಥಿಗಳಾಗಿರುತ್ತೇವೆ. ನಮ್ಮ ಜೀವನದಲ್ಲಿ ಬಂದು ಹೋಗುವ ಪಾತ್ರಗಳು ಕೂಡ ನಮಗೆ ಗುರುಗಳಾಗಿರುತ್ತದೆ. ಕೆಲವು ಸಲ ಒಳ್ಳೆಯ ಪಾಠ ಕಲಿಸಿದರೆ, ಇನ್ನು ಕೆಲವು ಸಲ ಜೀವನಪೂರ್ತಿ ಮರೆಯಲಾಗದ ಪಾಠ. ಹಾಗೆ ನಾವು ಕೂಡ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಇನ್ನೊಬ್ಬರ ಅನುಭವ ಶಾಲೆಯಲ್ಲಿ ಕೆಟ್ಟ ಅಥವಾ ಒಳ್ಳೆಯ ಗುರುಗಳಾಗಿರುತ್ತವೆ. ಗುರು ಪೂರ್ಣಿಮೆ, ಶಿಕ್ಷಕರ ದಿನಗಳಲ್ಲಿ ಗುರುಗಳನ್ನು ನೆನೆಸಿಕೊಳ್ಳುವ ನಾವು ಎಲ್ಲಾ ಸಮಯದಲ್ಲೂ ಗುರುಗಳನ್ನು ಗೌರವಿಸುವುದರೊಂದಿಗೆ ನಾವು ಕೂಡ ಒಳ್ಳೆಯ ಗುರುವಾಗಿ ಮುಂದಿನ ಪೀಳಿಗೆಗೆ ದಾರಿದೀಪವಾಗೋಣ....

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ