ಹಿಂದೂ ಹಬ್ಬಗಳು ಕೇವಲ ನಂಬಿಕೆ ಅಥವಾ ಆಚರಣೆಗಳಷ್ಟೇ ಅಲ್ಲ. ಅವು ನಮ್ಮ ಬದುಕಿನ ಚಕ್ರವನ್ನು ತಿರುಗಿಸುವ ಆರ್ಥಿಕ ಸ್ಪಂದನೆಗಳು ಮತ್ತು ಸಾಮಾಜಿಕ ಒಗ್ಗಟ್ಟಿನ ಜೀವನಾಡಿಗಳು. ಹಬ್ಬಗಳು ಸಮೃದ್ಧಿಯ ಸಂಕೇತವಾಗಿ ನಾಡಿನುದ್ದಕ್ಕೂ ಸಂಚಲನ ಮೂಡಿಸುತ್ತವೆ.
ಭಾರತೀಯ ಸಮಾಜದಲ್ಲಿ ಹಬ್ಬಗಳು ಬಂದರೆ ಸಾಕು, ಮನೆಗಳಲ್ಲಿ ಮಾತ್ರವಲ್ಲದೆ ಇಡೀ ಊರಿನಲ್ಲಿ ಒಂದು ಹೊಸ ಚೈತನ್ಯ ಮೂಡುತ್ತದೆ. ಗಣೇಶ ಹಬ್ಬ, ದೀಪಾವಳಿ, ಯುಗಾದಿ ಅಥವಾ ಸಂಕ್ರಾಂತಿಯಂತಹ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವುದರ ಜೊತೆಗೆ, ಲಕ್ಷಾಂತರ ಜನರ ಬದುಕಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ದೊಡ್ಡ ವಾಣಿಜ್ಯ ಉತ್ಸವಗಳೂ ಹೌದು.
ಉದಾಹರಣೆಗೆ ಗಣೇಶ ಹಬ್ಬ ಬಂತೆಂದರೆ ಮಣ್ಣಿನಿಂದ ಕಲಾಪೂರ್ಣ ಮೂರ್ತಿಗಳನ್ನು ಸಿದ್ಧಪಡಿಸುವ ಕುಶಲಕರ್ಮಿ, ಅದನ್ನು ಮಾರುಕಟ್ಟೆಗೆ ಸಾಗಿಸುವ ವಾಹನ ಚಾಲಕ, ಬೆವರು ಹರಿಸಿ ಹೂವು-ಹಣ್ಣು ಬೆಳೆದ ರೈತ, ಪೂಜಾ ಸಾಮಗ್ರಿ ಮಾರುವ ಸಣ್ಣ ವ್ಯಾಪಾರಿ ಹಾಗೂ ಬಟ್ಟೆ ಅಂಗಡಿಯವನ ತನಕ ಎಲ್ಲರಿಗೂ ಹಬ್ಬಗಳೇ ಆಸರೆ.
ಒಂದು ಸಣ್ಣ ಗಣೇಶನ ಮೂರ್ತಿಯ ತಯಾರಿಕೆಯಿಂದ ಹಿಡಿದು ಪಟಾಕಿ, ಕಚ್ಚಾ ವಸ್ತುಗಳು, ಹಸಿರು ತರಕಾರಿಗಳು, ಕಾಯಿ, ಕರ್ಪೂರ, ಊದುಬತ್ತಿ ಮತ್ತು ಬಟ್ಟೆಗಳವರೆಗೆ ನಡೆಯುವ ಕೋಟ್ಯಂತರ ರೂಪಾಯಿಗಳ ವಹಿವಾಟು ಸಮಾಜದ ಎಲ್ಲಾ ವರ್ಗದ ಜನರಿಗೆ ಉದ್ಯೋಗ ಮತ್ತು ಆದಾಯವನ್ನು ಸೃಷ್ಟಿಸುತ್ತದೆ. ಈ ಆರ್ಥಿಕ ಚಕ್ರದಲ್ಲಿ ಜಾತಿ, ಮತ ಅಥವಾ ಧರ್ಮದ ಯಾವುದೇ ಭೇದವಿರುವುದಿಲ್ಲ. ಇಲ್ಲಿ ಮುಖ್ಯವಾಗುವುದು ಕೇವಲ ಶ್ರಮ, ವ್ಯಾಪಾರ ಮತ್ತು ಮಾನವೀಯ ಸಂಬಂಧಗಳು. ಇಂತಹ ವ್ಯಾಪಾರ ವಹಿವಾಟುಗಳಿಂದ ಸರ್ಕಾರಕ್ಕೆ ಬರುವ ತೆರಿಗೆಯೂ ದೇಶದ ಅಭಿವೃದ್ಧಿಗೆ ಪರೋಕ್ಷವಾಗಿ ನೆರವಾಗುತ್ತದೆ.
ಹಾಗಾಗಿ, ಹಬ್ಬಗಳನ್ನು ಕೇವಲ ಮೂಢನಂಬಿಕೆಯ ಚೌಕಟ್ಟಿನಲ್ಲಿ ನೋಡುವುದು ತಪ್ಪು. ಅದು ನಮ್ಮ ಪರಂಪರೆಯ ನಿರಂತರತೆ ಮತ್ತು ಕೋಟ್ಯಂತರ ಜನಸಾಮಾನ್ಯರ ಹೊಟ್ಟೆಗೆ ಹಿಟ್ಟನ್ನು ನೀಡುವ ಆರ್ಥಿಕ ಪರ್ವ. ಅದನ್ನು ಬಿಟ್ಟು ನಾಗನಿಗೆ ಹಾಲೆರೆಯುವ ಬದಲು ಬಡ ಮಕ್ಕಳಿಗೆ ಹಾಲುನಿಸಿ ಎನ್ನುವ ಮಹಾ ಮೇದಾವಿಗಳು ಯಾಕೆ ಈ ದಿನ ವ್ಯಾಪಾರ ಮಾಡುವವರ ಮಕ್ಕಳು ಕೂಡ ಹೊಟ್ಟೆ ತುಂಬಾ ಊಟ ಮಾಡುವಂತಾಗಲಿ ಎಂದು ಯೋಚಿಸುವುದಿಲ್ಲ.
ಮೌಡ್ಯ ಹಿಂದೂಗಳ ಹಬ್ಬದಲ್ಲಿ ಇಲ್ಲ, ಅದು ಕೆಲವು ಮನಸುಗಳ ಆಳದಲ್ಲಿ ಹೊಕ್ಕಿದೆ. ಅದನ್ನು ಶುದ್ದೀಕರಿಸಿ, ಹಬ್ಬಗಳ ಅಂತರಾಳದಲ್ಲಿರುವ ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ, ನಮ್ಮ ಸಂಸ್ಕೃತಿಯನ್ನು ಪ್ರೀತಿಸುವುದೇ ನಿಜವಾದ ಸಾರ್ಥಕತೆ.
✍ಲಲಿತಶ್ರೀ ಪ್ರೀತಂ ರೈ