image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹುಳಿ ಮರದ ಕಪ್ಪು ಚಿನ್ನ: 'ಹುಣಸೆ ಬೀಜ'ದ ಅಚ್ಚರಿಯ ಆರೋಗ್ಯ ಭಾಗ್ಯಗಳು

ಹುಳಿ ಮರದ ಕಪ್ಪು ಚಿನ್ನ: 'ಹುಣಸೆ ಬೀಜ'ದ ಅಚ್ಚರಿಯ ಆರೋಗ್ಯ ಭಾಗ್ಯಗಳು

ನಮ್ಮ ಅಡುಗೆಮನೆಯಲ್ಲಿ ಹುಣಸೆ ಹಣ್ಣಿಗೆ ಇರುವ ಸ್ಥಾನ ಅತಿ ದೊಡ್ಡದು. ಸಾಂಬಾರ್, ರಸಂ ಅಥವಾ ಚಟ್ನಿ ಏನೇ ಇರಲಿ, ಹುಣಸೆಯ ಹುಳಿ ಇಲ್ಲದಿದ್ದರೆ ರುಚಿಯೇ ಅಪೂರ್ಣ. ಆದರೆ ನಾವು ಸಾಮಾನ್ಯವಾಗಿ ಈಗ ಹುಣಸೆ ಹಣ್ಣನ್ನು ಬಳಸಿ ಅದರ ಬೀಜಗಳನ್ನು ಕಸಕ್ಕೆ ಎಸೆಯುತ್ತೇವೆ. 

ಆದರೆ 80 -90 ರ ದಶಕದವರೆಗೆ ಹುಟ್ಟಿದವರಿಗೆ ಖಂತವಾಗಿಯೂ ಈ ಹುಣಸೆ ಬೀಜದ ಮಹತ್ವ ತಿಳಿದಿರುತ್ತದೆ. ಆ ಸಮಯದ ಅದರಲ್ಲೂ ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೆ ಇಂತಹ ಕಾಟುಕೋಟೆ ಮೇಲೆ ತುಂಬಾ ಪ್ರೀತಿ. ಹುರಿದ ಹುಣಸೇ ಬೀಜವನ್ನು ಕಟು ಕುಟು ಎಂದು ಜಗಿಯುವ ಸುಖವೇ ಬೇರೆ. ನಾವು ತಿನ್ನುವಾಗ ಅಮ್ಮ "ಜಾಸ್ತಿ ತಿನ್ಬೇಡಿ ಪಿತ್ತ ಅದು" ಎನ್ನುತ್ತಿದ್ದರು. ಪಿತ್ತವೋ ವಾತವೋ ನಮಗೆ ಬಾಯಿರುಚಿ ಬೇಕಿತ್ತು ಅಷ್ಟೆ. ಕೇವಲ ಮಕ್ಕಳ ಆಟದ ವಸ್ತುವಾಗಿಯೋ ಅಥವಾ ನಿಷ್ಪ್ರಯೋಜಕ ವಸ್ತುವಾಗಿಯೋ ಕಾಣುವ ಈ ಕಪ್ಪು ಬಣ್ಣದ ಹೊಳೆಯುವ ಬೀಜಗಳು ವಾಸ್ತವದಲ್ಲಿ ಪ್ರಕೃತಿ ನಮಗೆ ನೀಡಿದ ಅದ್ಭುತ ಔಷಧೀಯ ಗಣಿಯಾಗಿದೆ. ಆಯುರ್ವೇದ ಮತ್ತು ಸಿದ್ಧ ವೈದ್ಯ ಪದ್ಧತಿಗಳಲ್ಲಿ ಹುಣಸೆ ಬೀಜಕ್ಕೆ ವಿಶೇಷ ಗೌರವವಿದ್ದು, ಇದನ್ನು 'ಕಪ್ಪು ಚಿನ್ನ' ಎಂದು ಕರೆದರೂ ತಪ್ಪಾಗಲಾರದು.

ಹುಣಸೆ ಬೀಜಗಳು ಕೇವಲ ಗಟ್ಟಿಯಾದ ಕಾಳುಗಳಲ್ಲ, ಇವುಗಳಲ್ಲಿ ಪ್ರೋಟೀನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ರಂಜಕದಂತಹ ಅತ್ಯಗತ್ಯ ಪೋಷಕಾಂಶಗಳು ಅಡಗಿವೆ. ಇತ್ತೀಚಿನ ದಿನಗಳಲ್ಲಿ ಮೊಣಕಾಲು ನೋವು ಮತ್ತು ಕೀಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹುಣಸೆ ಬೀಜ ಒಂದು ರಾಮಬಾಣದಂತೆ ಕೆಲಸ ಮಾಡುತ್ತದೆ. ಈ ಬೀಜಗಳನ್ನು ಚೆನ್ನಾಗಿ ಹುರಿದು, ಅದರ ಮೇಲಿನ ಕಪ್ಪು ಸಿಪ್ಪೆಯನ್ನು ತೆಗೆದು, ಒಳಗಿನ ಬಿಳಿ ಭಾಗವನ್ನು ಪುಡಿ ಮಾಡಿ ಹಾಲಿನೊಂದಿಗೆ ಸೇವಿಸುವುದರಿಂದ ಕೀಲುಗಳ ನಡುವಿನ ಲೂಬ್ರಿಕೆಂಟ್ ವೃದ್ಧಿಯಾಗಿ ನೋವು ಕಡಿಮೆಯಾಗುತ್ತದೆ. ಇದು ನೈಸರ್ಗಿಕವಾಗಿ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.

ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಹುಣಸೆ ಬೀಜವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ 'ಕ್ಸೈಲೋಗ್ಲುಕನ್' ಎಂಬ ಅಂಶವು ವಿವಿಧ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ವಿಶೇಷವಾಗಿ ಅತಿಸಾರ ಅಥವಾ ಭೇದಿ ಕಾಣಿಸಿಕೊಂಡಾಗ, ಹುಣಸೆ ಬೀಜದ ಪುಡಿಯು ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೊಟ್ಟೆಯ ಉರಿಯನ್ನು ಕಡಿಮೆ ಮಾಡಿ ಜೀರ್ಣಾಂಗವ್ಯೂಹವನ್ನು ಶಾಂತಗೊಳಿಸುತ್ತದೆ. ಮಧುಮೇಹಿಗಳಿಗೂ ಸಹ ಇದು ವರದಾನವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ, ಸೌಂದರ್ಯ ವರ್ಧನೆಯಲ್ಲೂ ಹುಣಸೆ ಬೀಜದ ಪಾತ್ರ ಹಿರಿದು. ಇದರ ಪುಡಿಯನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗಿ ಚರ್ಮವು ಕಾಂತಿಯುತವಾಗುತ್ತದೆ. ಇಂದಿನ ದುಬಾರಿ ಸೌಂದರ್ಯ ವರ್ಧಕಗಳಿಗಿಂತ ಈ ನೈಸರ್ಗಿಕ ವಿಧಾನವು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿ. ಅಲ್ಲದೆ, ದಂತದ ಆರೋಗ್ಯಕ್ಕೂ ಹುಣಸೆ ಬೀಜದ ಪುಡಿ ಹಳೆಯ ಕಾಲದಿಂದಲೂ ಬಳಕೆಯಲ್ಲಿದೆ. ಇದು ಹಲ್ಲುಗಳ ಮೇಲಿನ ಹಳದಿ ಕರೆಯನ್ನು ಹೋಗಲಾಡಿಸಿ, ಒಸಡುಗಳನ್ನು ಗಟ್ಟಿಗೊಳಿಸುವ ಗುಣವನ್ನು ಹೊಂದಿದೆ.

ನಮ್ಮ ಹಿರಿಯರು ಹುಣಸೆ ಬೀಜಗಳನ್ನು ಹುರಿದು ಉಪ್ಪಿನ ನೀರಿನಲ್ಲಿ ನೆನೆಸಿ ತಿನ್ನುತ್ತಿದ್ದರು. ಅದೊಂದು ಕೇವಲ ಕಾಲಹರಣದ ತಿನಿಸಾಗಿರದೆ, ಹಲ್ಲು ಮತ್ತು ಮೂಳೆಗಳ ಬಲವರ್ಧನೆಗೆ ಅವರು ಕಂಡುಕೊಂಡ ಸುಲಭ ಮಾರ್ಗವಾಗಿತ್ತು. ಆಧುನಿಕ ಯುಗದಲ್ಲಿ ನಾವು ಇಂತಹ ನೈಸರ್ಗಿಕ ಸಂಪತ್ತನ್ನು ಮರೆಯುತ್ತಿದ್ದೇವೆ. ಒಂದು ಸಣ್ಣ ಹುಣಸೆ ಬೀಜದಲ್ಲಿ ಇಷ್ಟೊಂದು ಅದ್ಭುತ ಗುಣಗಳಿವೆ ಎಂದರೆ ಪ್ರಕೃತಿಯ ಚಮತ್ಕಾರವೇ ಸರಿ. ಇಂದಿನಿಂದಲಾದರೂ ಹುಣಸೆ ಬೀಜಗಳನ್ನು ಕಸವೆಂದು ಎಸೆಯದೆ, ಅವುಗಳನ್ನು ಸಂಗ್ರಹಿಸಿ ಅದರ ಪ್ರಯೋಜನಗಳನ್ನು ಪಡೆದುಕೊಳ್ಳುವತ್ತ ಗಮನ ಹರಿಸೋಣ. ಆರೋಗ್ಯದ ದೃಷ್ಟಿಯಿಂದಲೂ, ಆರ್ಥಿಕವಾಗಿಯೂ ಇದು ನಮ್ಮ ಕೈಹಿಡಿಯುವ ಸಂಜೀವಿನಿಯಾಗಿದೆ.
ಅತಿಯಾದರೆ ಅಮೃತವೂ ವಿಷವೇ ಎನ್ನುವ ಗಾದೆಯನ್ನು ಮರೆಯಬೇಡಿ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ