image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿಯ ಗತಕಾಲದ ಸಿರಿ, ಪೋಷಕಾಂಶಗಳ ಗಣಿ: ನಮ್ಮ ಹೆಮ್ಮೆಯ 'ಸಾಂತನಿ'

ಕರಾವಳಿಯ ಗತಕಾಲದ ಸಿರಿ, ಪೋಷಕಾಂಶಗಳ ಗಣಿ: ನಮ್ಮ ಹೆಮ್ಮೆಯ 'ಸಾಂತನಿ'

ಪ್ರಕೃತಿ ನಮಗೆ ನೀಡಿದ ಅದ್ಭುತ ಕೊಡುಗೆಗಳಲ್ಲಿ ಹಲಸಿನ ಹಣ್ಣು ವಿಶಿಷ್ಟವಾದುದು. ಅದರಲ್ಲೂ ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಹಲಸಿನ ಹಣ್ಣಿನಷ್ಟೇ ಪ್ರಿಯವಾದುದು ಅದರ ಬೀಜಗಳು. ಹಂಗಾಮಿನ ಸಮಯದಲ್ಲಿ ಹೇರಳವಾಗಿ ದೊರೆಯುವ ಹಲಸಿನ ಬೀಜಗಳನ್ನು ವ್ಯರ್ಥ ಮಾಡದೆ, ಅವುಗಳನ್ನು ಬೇಯಿಸಿ, ಬಿಸಿಲಿನಲ್ಲಿ ಹದವಾಗಿ ಒಣಗಿಸಿ ಸಂಗ್ರಹಿಸಿಡುವ 'ಸಾಂತನಿ'' ಅಥವಾ 'ಸಲಾಂಟೆ' ಮಾಡುವ ಪದ್ಧತಿ ನಮ್ಮ ಗ್ರಾಮೀಣ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ಸಾಂತನಿ ತಿನ್ನುತ್ತಿದ್ದರು.  ಅದರಲ್ಲೂ ನಾವು ಶಾಲೆಗೆ ಹೋಗುವಾಗ ಕ್ಲಾಸಿನಲ್ಲಿ ಕುಳಿತು ಸಾಂತನಿಯನ್ನು ಕಟ ಕಟ ಜಗಿದು ತಿನ್ನುವಾಗ ಟೀಚರ್ ಕೈಯಲ್ಲಿ ಸಿಕ್ಕಿಬಿದ್ದು ತಿಂದ ಪೆಟ್ಟನ್ನು ಮರೆತಿಲ್ಲ.

ಇದು ಕೇವಲ ಮಳೆಗಾಲದ ಅಡುಗೆಗೆ ರುಚಿ ನೀಡುವ ಪದಾರ್ಥ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಒಂದು ಪರಿಪೂರ್ಣ ಪೌಷ್ಟಿಕ ಆಹಾರವಾಗಿದೆ.
ಸಾಂತಣಿ ಬೀಜಗಳು ಪ್ರೋಟೀನ್ ಮತ್ತು ಶಕ್ತಿಯ ಅಕ್ಷಯ ಪಾತ್ರೆಯಾಗಿವೆ. ದಿನವಿಡೀ ಚಟುವಟಿಕೆಯಿಂದ ಇರಲು ಬೇಕಾದ ಕಾರ್ಬೋಹೈಡ್ರೇಟ್‌ಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಪೂರಕವಾದ ಸಸ್ಯಜನ್ಯ ಪ್ರೋಟೀನ್ ಇದರಲ್ಲಿ ಸಮೃದ್ಧವಾಗಿದೆ.

ವಿಶೇಷವಾಗಿ ಇದರಲ್ಲಿರುವ 'ರೆಸಿಸ್ಟೆಂಟ್ ಸ್ಟಾರ್ಚ್' ಎಂಬ ಅಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಅತಿಯಾದ ಹಸಿವು ಕಡಿಮೆಯಾಗಿ ತೂಕ ನಿರ್ವಹಣೆಯೂ ಸುಲಭವಾಗುತ್ತದೆ.

ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ಸಾಂತನಿ ಬೀಜಗಳು ರಾಮಬಾಣವಿದ್ದಂತೆ. ಇದರಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ದೂರ ಮಾಡಿ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ, ಕಬ್ಬಿಣದ ಅಂಶವು ಹೇರಳವಾಗಿರುವುದರಿಂದ ರಕ್ತಹೀನತೆಯಿಂದ ಬಳಲುವವರಿಗೆ ಇದು ನೈಸರ್ಗಿಕ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಾಂಶಗಳು ಮೂಳೆಗಳನ್ನು ಬಲಪಡಿಸುವುದಲ್ಲದೆ, ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ.

ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಬೇಕಾದ ಸೂಕ್ಷ್ಮ ಪೋಷಕಾಂಶಗಳು ಈ ಪುಟ್ಟ ಬೀಜಗಳಲ್ಲಿ ಅಡಗಿದೆ. ಒಟ್ಟಾರೆಯಾಗಿ, ಹಿರಿಯರು ಕಲಿಸಿಕೊಟ್ಟ ಈ ಸಾಂತನಿ ಮಾಡುವ ಪದ್ಧತಿಯು ಕೇವಲ ಆಹಾರದ ಸಂರಕ್ಷಣೆಯಲ್ಲ, ಅದು ಆರೋಗ್ಯದ ಸಂರಕ್ಷಣೆಯೂ ಹೌದು. ಆಧುನಿಕ ಆಹಾರ ಪದ್ಧತಿಯ ನಡುವೆ ಇಂತಹ ನೈಸರ್ಗಿಕ ಸೂಪರ್‌ಫುಡ್‌ಗಳನ್ನು ನಮ್ಮ ದೈನಂದಿನ ಅಡುಗೆಯಲ್ಲಿ ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ವಿಶೇಷ ಸೂಚನೆ: ಈ ಮಾಹಿತಿ   ಹಿರಿಯರು ಹೇಳಿರುವುದನ್ನು  ಆದರಿಸಿ ಬರೆಯಲಾಗಿದೆ.   ತೀವ್ರ ಆರೋಗ್ಯ ಸಮಸ್ಯೆ ಇರುವವರು ತಜ್ಞರ ಸಲಹೆ ಪಡೆದು ನಂತರ ಸೇವಿಸಿ.

ಸಾಂತನಿ ಮಾಡುವಾಗ ಸರಿಯಾಗಿ ಬಿಸಿಲಿನಲ್ಲಿ ಒಣಗಿಸುವುದು ಮುಖ್ಯ, ಇಲ್ಲದಿದ್ದರೆ ಶಿಲೀಂಧ್ರ (Fungus) ಹಿಡಿಯುವ ಸಾಧ್ಯತೆ ಇರುತ್ತದೆ. ಪೂರ್ಣ ಒಣಗಿದ ಬೀಜಗಳನ್ನು ಗಾಳಿಯಾಡದ ಡಬ್ಬದಲ್ಲಿಟ್ಟರೆ ದೀರ್ಘಕಾಲ ಬಾಳಿಕೆ ಬರುತ್ತದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ