ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ, ತಿನ್ನುವಾಗ ನಾಲಿಗೆಯನ್ನು ನೇರಳೆ ಬಣ್ಣಕ್ಕೆ ತಿರುಗಿಸುವ ನೇರಳೆ ಹಣ್ಣು ಕೇವಲ ಒಂದು ರುಚಿಕರವಾದ ಹಣ್ಣಲ್ಲ, ಇದೊಂದು ಅದ್ಭುತ ಔಷಧೀಯ ಗಣಿ ಎಂದರೆ ತಪ್ಪಾಗಲಾರದು. ಆಯುರ್ವೇದದಲ್ಲಿ ಇದನ್ನು 'ಜಂಬೂ ಫಲ' ಎಂದು ಕರೆಯಲಾಗಿದ್ದು, ಪ್ರಾಚೀನ ಕಾಲದಿಂದಲೂ ಇದನ್ನು ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತಿದೆ. ಆಯುರ್ವೇದದ ಪ್ರಕಾರ, ನೇರಳೆ ಹಣ್ಣು 'ಕಷಾಯ' (ಒಗರು) ಮತ್ತು 'ಮಧುರ' (ಸಿಹಿ) ರಸವನ್ನು ಹೊಂದಿದೆ. ಇದು ಶರೀರದಲ್ಲಿನ ಪಿತ್ತ ಮತ್ತು ಕಫ ದೋಷಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಇದು 'ಶೀತ ವೀರ್ಯ' ಅಂದರೆ ದೇಹಕ್ಕೆ ತಂಪು ನೀಡುವ ಗುಣ ಹೊಂದಿದೆ. ಅಲ್ಲದೆ, ಇದರಲ್ಲಿರುವ 'ಗ್ರಾಹಿ ಗುಣ'ವು ಅತಿಸಾರ ಅಥವಾ ಭೇದಿಯಂತಹ ಸಮಸ್ಯೆಗಳನ್ನು ಗುಣಪಡಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ.
ನೇರಳೆ ಹಣ್ಣು ಮಧುಮೇಹಿಗಳಿಗೆ ಒಂದು ವರದಾನ. ಇದರಲ್ಲಿರುವ 'ಜಂಬೋಲಿನ್' (Jamboline) ಎಂಬ ಅಂಶವು ಪಿಷ್ಟವನ್ನು ಸಕ್ಕರೆಯಾಗಿ ಬದಲಾಗದಂತೆ ತಡೆಯುತ್ತದೆ. ಕೇವಲ ಹಣ್ಣಷ್ಟೇ ಅಲ್ಲ, ನೇರಳೆ ಬೀಜದ ಪುಡಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ.
ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಅಂಶವು ಅಧಿಕ ರಕ್ತದೊತ್ತಡವನ್ನು (BP) ನಿಯಂತ್ರಣದಲ್ಲಿಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಕಬ್ಬಿಣದ ಅಂಶ (Iron) ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಈ ಹಣ್ಣು, ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತಹೀನತೆಯನ್ನು ತಡೆಯುವುದಲ್ಲದೆ ರಕ್ತವನ್ನು ಶುದ್ಧೀಕರಿಸುತ್ತದೆ.
ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಸುಕ್ಕುಗಳನ್ನು ತಡೆದು ಕಾಂತಿ ನೀಡುತ್ತವೆ. ಹಾಗೆಯೇ, ಇದರಲ್ಲಿರುವ ವಿಟಮಿನ್ ಎ ಕಣ್ಣಿನ ದೃಷ್ಟಿಯನ್ನು ಚುರುಕುಗೊಳಿಸಲು ಸಹಕಾರಿ.
ಆಯುರ್ವೇದದಲ್ಲಿ ಹಣ್ಣಿನ ಜೊತೆಗೆ ಮರದ ಎಲೆ, ತೊಗಟೆ ಮತ್ತು ಬೀಜಗಳನ್ನು ಸಹ ಬಳಸಲಾಗುತ್ತದೆ.
ಎಲೆಗಳನ್ನು ಅಗಿಯುವುದರಿಂದ ಹಲ್ಲು ಮತ್ತು ಒಸಡುಗಳ ಸಮಸ್ಯೆ ನೀಗುತ್ತದೆ ಹಾಗೂ ಬಾಯಿ ವಾಸನೆ ಕಡಿಮೆಯಾಗುತ್ತದೆ.
ಇದರ ತೊಗಟೆಯ ಕಷಾಯವು ಸ್ತ್ರೀಯರ ಬಿಳಿ ಸೆರಗು (White discharge) ಸಮಸ್ಯೆಗೆ ಮತ್ತು ಗಂಟಲು ನೋವಿಗೆ ಉತ್ತಮ ಮದ್ದು.
ಬೀಜದ ಪುಡಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕಿಡ್ನಿ ಕಲ್ಲು (Kidney Stones) ಕರಗಲು ಸಹಾಯವಾಗುತ್ತದೆ.
ಸೇವಿಸುವ ಮುನ್ನ ತಿಳಿದಿರಬೇಕಾದ ಅಂಶ
ನೇರಳೆ ಹಣ್ಣನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ಸೇವಿಸಬೇಡಿ.
ಹಣ್ಣು ತಿಂದ ತಕ್ಷಣ ಹಾಲು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಅತಿಯಾದ ಸೇವನೆಯು ದೇಹದಲ್ಲಿ ವಾತವನ್ನು ಹೆಚ್ಚಿಸಬಹುದು, ಆದ್ದರಿಂದ ಮಿತವಾಗಿ ಸೇವಿಸುವುದು ಉತ್ತಮ.
ನೀವು ಮಧುಮೇಹಕ್ಕೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದರೆ, ನೇರಳೆ ಬೀಜದ ಪುಡಿಯನ್ನು ಬಳಸುವ ಮುನ್ನ ಒಮ್ಮೆ ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಸೂಕ್ತ.
✍ ಲಲಿತಶ್ರೀ ಪ್ರೀತಂ ರೈ