ತುಳುವಿನಲ್ಲಿ ಪೂ ಕುರಂಡೆಲ್ ಎಂದು ಕರೆಯಲ್ಪಡುವ ಸಹದೇವಿ ಅಥವಾ ಕಾರೆ ಹಿಂಡಿ ಸೊಪ್ಪು ಗಿಡವನ್ನು ಸಂಸ್ಕೃತದಲ್ಲಿ ದೇವಿಕಾ ಎನ್ನಲಾಗುತ್ತದೆ. ಈ ಗಿಡವು ಸಾಮಾನ್ಯವಾಗಿ ಹೊಲ ಗದ್ದೆಗಳಲ್ಲಿ ಮಾತ್ರವಲ್ಲದೆ ನಮ್ಮ ಮನೆ ಅಂಗಳದಲ್ಲಿಯೂ ಕಾಣಸಿಗುತ್ತದೆ. ಕೇರಳದ ಧಾರ್ಮಿಕ ಆಚರಣೆಗಳಲ್ಲಿ ಬಳಸಲ್ಪಡುವ "ದಶಪುಷ್ಪಂ" ಎಂಬ ಹತ್ತು ಬಗೆಯ ಹೂಗಳಲ್ಲಿ ಈ ಸಹದೇವಿ ಸಹ ಒಂದು. ಇದಕ್ಕೆ ದೈವಿಕ ಶಕ್ತಿಯನ್ನು ಆಕರ್ಷಿಸುವ ಗುಣವಿದೆ ಎನ್ನುವುದು ಕೆಲವರ ನಂಬಿಕೆ. ಆದ್ದರಿಂದ ಸಹದೇವಿಯ ಹೂವನ್ನು ತಾಂತ್ರಿಕ ಆಚರಣೆಗಳಲ್ಲಿ ಮತ್ತು ದೇವಸ್ಥಾನಗಳ ಬ್ರಹ್ಮಕಲಶಗಳಲ್ಲಿ ಉಪಯೋಗಿಸುವ ಪರಿಪಾಠವಿದೆ. ಸಹದೇವಿಯ ಬೇರುಗಳಿಗೆ ಹುಳ, ಹುಪ್ಪಟೆಗಳನ್ನು ಹತ್ತಿರ ಬರದಂತೆ ತಡೆಯುವ ಕೀಟನಾಶಕ ಗುಣವಿರುವುದರಿಂದ ಹಿಂದೆ ಬಟ್ಟೆಗಳ ನಡುವೆ ಸಹದೇವಿಯ ಬೇರುಗಳನ್ನು ಇಡುತ್ತಿದ್ದರು. ಹಿಂದಿನ ಕಾಲದಲ್ಲಿ ಸಹದೇವಿಯ ಗಿಡದಿಂದ ಕಣ್ಣಿಗೆ ಅಂಜನ ಮಾಡಿ ಹಚ್ಚುತ್ತಿದ್ದರೆಂದು ಹೇಳಲಾಗುತ್ತದೆ. ಹಿಂದಿನ ನಾಟಿ ವೈದ್ಯರು ಕಣ್ಣಿನ ಪೊರೆ ಹೋಗಲಾಡಿಸಲು ಸಹದೇವಿಯನ್ನು ಉಪಯೋಗಿಸುತ್ತಿದ್ದರಂತೆ. ಬಿಳಿ ಹೂವಿನ ಸಹದೇವಿ ಔಷಧವಾಗಿ ಹಾಗೂ ನೀಲಿ ಹೂವಿನ ಸಹದೇವಿ ಧಾರ್ಮಿಕ ಕಾರ್ಯಗಳಿಗೆ ಉತ್ತಮ ಎನ್ನಲಾಗುತ್ತದೆ.
ಸಹದೇವಿಯ ಬೇರಿನ ಕಷಾಯ ರಕ್ತ ಶುದ್ಧಿಕಾರಕವಾಗಿ ಕೆಲಸ ಮಾಡುವ ಶಕ್ತಿಯನ್ನು ಹೊಂದಿರುವುದರಿಂದ ಇದರ ಕಷಾಯವನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.
ಸಹದೇವಿಯ ಸಮೂಲ ಕಷಾಯ ಜ್ವರ ನಿವಾರಕವಾಗಿ ಕೆಲಸ ಮಾಡಬಲ್ಲದು.
ಕಣ್ಣಿನ ಸೋಂಕು ಮತ್ತು ಕಣ್ಣಿನ ತೊಂದರೆಗಳಿಗೆ ಈ ಗಿಡದ ರಸ ತೆಗೆದು ಸೋಸಿ ಕಣ್ಣಿಗೆ ಬಿಡುವ ಪದ್ಧತಿ ಜನಪದರಲ್ಲಿ ಇದೆ.
ಸಹದೇವಿಯ ಬೀಜಗಳನ್ನು ಲಿಂಬೆ ರಸದೊಂದಿಗೆ ಅರೆದು ತಲೆಗೆ ಹಚ್ಚಿದರೆ ಹೇನಿನ ತೊಂದರೆ ಕಡಿಮೆಯಾಗುತ್ತದೆ.
ಗಿಡದ ರಸವನ್ನು ಮುಖದಲ್ಲಿರುವ ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆ ಕಡಿಮೆಯಾಗುತ್ತದೆ.
ಚರ್ಮದ ತುರಿಕೆಗಳಿಗೆ ಸಹದೇವಿಯ ಸೊಪ್ಪಿನ ರಸ ಉತ್ತಮ ಔಷಧಿಯಾಗಬಲ್ಲದು.
ಸಹದೇವಿ ಗಿಡದ ರಸ ಸೇರಿಸಿ ಕಾಯಿಸಿದ ಎಣ್ಣೆ ಅತ್ಯಂತ ತಂಪುಕಾರಕ ಮತ್ತು ಕೂದಲಿನ ಬೆಳವಣಿಗೆ, ಕೂದಲಿನ ಬಣ್ಣಕ್ಕೆ ಹಾಗೂ ಕೂದಲು ಉದುರುವಿಕೆಗೆ ಉತ್ತಮ ಕೇಶ ತೈಲ.
ಕೆಲವು ಕಡೆಗಳಲ್ಲಿ ಸಹದೇವಿ ಗಿಡದ ಚಿಗುರಿನಿಂದ ತಂಬುಳಿ ಮಾಡಿ ಸೇವಿಸುತ್ತಾರೆ.
ಯಾವುದೇ ಗಿಡ ಮೂಲಿಕೆಗಳನ್ನು ಉಪಯೋಗಿಸುವ ಮೊದಲು ತಜ್ಜರ ಸಲಹೆ ಪಡೆಯಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ