ಇಂಗ್ಲೀಷ್‌ನಲ್ಲಿ ಜಂಗಲ್ ಫ್ಲೇಮ್ ಎಂದು ಕರೆಯುವ ಕೇಪುಳ ಗಿಡದ ಹೂವಿಗೆ ತುಳುನಾಡಿನಲ್ಲಿ ದೇವತಾರಾಧನೆ ಮತ್ತು ದೈವಾರಾಧನೆ ಎರಡರಲ್ಲೂ ಬಹಳ ಮಹತ್ವವಿದೆ. ಈಗ ವಿವಿಧ ಬಣ್ಣದ ಹೂ ಬಿಡುವ ಹೈಬ್ರಿಡ್ ಕೇಪುಳ ಸಸ್ಯಗಳು ನರ್ಸರಿಯಲ್ಲಿ ದೊರೆಯುತ್ತಾದರೂ ಕಾಡಿನಲ್ಲಿ ದೊರೆ ಯುವ ಕೇಪುಳಕ್ಕೆ ಮಹತ್ವ ಹೆಚ್ಚು. ಹೈಬ್ರೀಡ್ ಸಸ್ಯದ ಯಾವುದೇ ಭಾಗಗಳನ್ನು ಔಷಧಿಯಲ್ಲಿ ಬಳಸಲಾಗುವುದಿಲ್ಲ. ಹಳ್ಳಿಗಳಲ್ಲಿ ಗದ್ದೆ ಬದಿಗಳಲ್ಲಿ, ಮನೆಯ ಅಕ್ಕ ಪಕ್ಕದಲ್ಲಿಯೂ ಕೇಪುಳ ಕಾಣಸಿಗುತ್ತದೆ.
ಕೇಪುಳದ ಕಾಫಿ ಹಣ್ಣು ಗಳಂತಹ ಕೆಂಪು ಬಣ್ಣದ ಹಣ್ಣುಗಳು ಆಕರ್ಷಣೀವಾಗಿದ್ದು, ತಿನ್ನಲು ರುಚಿಯಾಗಿರುತ್ತದೆ. ಈ ಸಸ್ಯದ ಹೂ, ಎಲೆ, ಬೇರು ಮತ್ತು ಹಣ್ಣುಗಳನ್ನು ನಮ್ಮ ಹಿರಿಯರು ತಲೆ ತಲಾಂತರಗಳಿಂದ ಮನೆಮದ್ದಿನಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ.
ಕೇಪುಳ ಹೂಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಒಂದು ಚಮಚದಂತೆ ದಿನಕ್ಕೆ ಎರಡು ಭಾರಿ ನೀರು ಅಥವಾ ಹಾಲಿನಲ್ಲಿ ಬೆರೆಸಿ ಸೇವನೆ ಮಾಡುವುದರಿಂದ ಅತಿಸಾರ, ರಕ್ತಭೇದಿ ಕಡಿಮೆಯಾಗುತ್ತದೆ.
ಗಾಯ, ಕಜ್ಜಿ, ಹುಣ್ಣುಗಳು ಇದರ ಬೇರಿನ ಕಷಾಯ ಸೇವನೆಯಿಂದ ಬೇಗನೆ ವಾಸಿ ಯಾಗುತ್ತವೆ.
ಕೆಂಪಾಗಿ ಬಾವು, ಉರಿ ಇರುವಾಗಲೂ ಕೇಪುಳ ಹೂವನ್ನು ಅರೆದು ಲೇಪಿಸುವುದರಿಂದ ಗುಣವಾಗುವುದು.
ಮಕ್ಕಳ ಬೆಳವಣಿಗೆ ಕೇಸರ ತೆಗೆದ ಕೇಪುಳ ಹೂವನ್ನು ಅರೆದು ರಸ ತೆಗೆದು ಮಜ್ಜಿಗೆಯೊಂದಿಗೆ ಕುದಿಸಿ ಮಕ್ಕಳಿಗೆ ಕೊಟ್ಟರೆ ಉತ್ತಮ.
ಅಜೀರ್ಣದಿಂದಾದ ಭೇದಿಗೆ ಕೇಪುಳ ಎಲೆಯ ರಸ ಸ್ವಲ್ಪ ಸ್ವಲ್ಪವಾಗಿ 2-3 ಸಲ ಕುಡಿದರೆ ಕಡಿಮೆಯಾಗುವುದು.
ತುಂಬಾ ಸಮಯದಿಂದ ಗುಣವಾಗದ ಹುಣ್ಣುಗಳಿಗೆ ಕೇಪುಳ ಹೂ, ಬೇರು, ಕರಿಜೀರಿಗೆ ಸೇರಿಸಿ ತೆಂಗಿನೆಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚಿದರೆ ವ್ರಣಗಳು ಗುಣವಾಗುವುದು.
ಬೇರನ್ನು ಕುಚ್ಚಲಕ್ಕಿ ತೊಳೆದ ನೀರಿನಲ್ಲಿ ಅರೆದು ಗಾಯಕ್ಕೆ ಲೇಪ ಹಚ್ಚುವುದರಿಂದ ಆಂಟಿ ಸೆಪ್ಟಿಕ್‌ನಂತೆ ಕೆಲಸ ಮಾಡುತ್ತದೆ.
ಇದರ ಬೇರಿನ ಕಷಾಯ ಕುಡಿಯುವುದರಿಂದ ಮಾಸಿಕ ಋತುಸ್ರಾವದ ಏರುಪೇರಿಗೆ ಉತ್ತಮ ಔಷಧಿ.
ಎಲೆಗಳ ಕಷಾಯ ಡಯಾಬಿಟೀಸ್ ರೋಗಿಗಳಿಗೆ ಉತ್ತಮ ಔಷಧಿಯಾಗಬಲ್ಲದು.
ಕೇಪುಳದ ಮಾಗಿದ ಹಣ್ಣಿನ ರಸವನ್ನು ಕಣ್ಣಿನ ಉರಿ ಕಡಿಮೆಯಾಗಲು ಬಳಸಲಾಗುತ್ತದೆ.
ಕೇಪುಳದ ಬೇರಿನ ಗಂಜಿ ಮಾಡಿ ಕುಡಿದರೆ ಉಷ್ಣ ಕಡಿಮೆಯಾಗುತ್ತದೆ.
✍ ಲಲಿತಶ್ರೀ ಪ್ರೀತಂ ರೈ