ಆಡು ಭಾಷೆಯಲ್ಲಿ ಅರಶಿಣ, ಹಳದಿ, ಮಂಜಲ್ ಎಂಬ ಹಲವಾರು ಹೆಸರುಗಳಿಂದ ಕರೆಯುವ ಇದನ್ನು ಆರ್ಯುವೇದದಲ್ಲಿ ವರವರ್ಣಿಣಿ, ಗೌರಿ, ಯಶೋಪ್ರಿಯ ಮತ್ತು ಕ್ರಿಮಿ ಸಂಹಾರಿಣಿ, ಹರಿದ್ರಾ ಎಂದೆಲ್ಲ ಕರೆಯುತ್ತಾರೆ. ಹಾಗೆ ನಮ್ಮ ಸಂಸ್ಕೃತಿಯಲ್ಲಿ ಬೆರೆತಿದೆ ಈ ಅರಶಿಣ. ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಅರಶಿಣಕ್ಕೆ ವಿಶೇಷ ಮಹತ್ವ ಇದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಅರಶಿನಕ್ಕೆ ಅಗ್ರ ಸ್ಥಾನ. ಹೆಣ್ಣು ಮಕ್ಕಳಿಗೆ ಅರಶಿಣ ಎಂದರೆ ಪೂಜ್ಯ ಭಾವನೆ ಒಂದು ಕಡೆಯಾದರೆ, ಸೌಂದರ್ಯ ಸಾಧನವೂ ಕೂಡ ಆಗಿದೆ. ಅರಶಿಣ ಮಾನವರಿಗೆ ಪ್ರಕೃತಿ ನೀಡಿರುವ ಅದ್ಭುತವಾದ ಗಿಡಮೂಲಿಕೆ. ಅರಶಿನವನ್ನು ಭಾರತೀಯ ಅಡುಗೆ ಪದ್ಧತಿಯಲ್ಲಿ ಬಳಸುವುದು ಸರ್ವೆಸಾಮಾನ್ಯ. ನಮ್ಮ ಜನ ಮನದಲ್ಲಿ ಹಿತ್ತಲ ಮದ್ದಾಗಿ ನಮ್ಮ ಹಿರಿಯರು ಬಳಸಿಕೊಂಡು ಬಂದಿದ್ದಾರೆ. ಇದು ದೇಹದಲ್ಲಿನ ಸಣ್ಣ ಗಾಯದಿಂದ ಹಿಡಿದು ದೊಡ್ಡ ಕ್ಯಾನ್ಸರ್‌ನಂತಹ ಮಹಾಮಾರಿಗೂ ರೋಗ ನಿರೋಧಕ ಔಷಧಿಯಾಗಿ ಕೆಲಸ ಮಾಡುತ್ತದೆ. ಆರ್ಯುವೇದ ಅಲ್ಲದೆ ಪಾರಂಪರಿಕ ವೈದ್ಯ, ಸಿದ್ಧ, ಯುನಾನಿ ಔಷಧೀಯ ಪದ್ದತಿಯಲ್ಲಿ ಪುರಾತನ ಕಾಲದಿಂದಲೂ ಬಳಸುತ್ತ ಬಂದಿದ್ದಾರೆ.
ಭಾರತೀಯ ಆರ್ಯುವೇದದ ಸುಮಾರು 3000 ವರ್ಷಗಳ ಹಿಂದಿನಿಂದಲೂ ಋಷಿಮುನಿಗಳು ಬಳಸುತ್ತಿದ್ದರು ಎಂಬುದು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅರಶಿಣದಲ್ಲಿ ಹಲವು ಪ್ರಬೇಧಗಳಿವೆ, ಅದರಲ್ಲಿ ಕಾಡು ಅರಶಿಣ, ಕಪ್ಪು ಅರಶಿಣ, ಕಸ್ತೂರಿ ಅರಶಿಣ ಮುಖ್ಯವಾದವುಗಳು. ದೇಹದಲ್ಲಿ ಗಾಯವಾಗಿ ರಕ್ತಸ್ರಾವ ಆಗುತ್ತಿದ್ದರೆ ಅರಶಿಣ ಲೇಪಿಸುವುದರಿಂದ ತಕ್ಷಣ ರಕ್ತಸ್ರಾವ ನಿಂತು ಗಾಯ ಗುಣವಾಗುತ್ತದೆ, ಮೊಡವೆ ಸಮಸ್ಯೆಗೆ ಅರಶಿನವನ್ನು ತೇದು ಹಚ್ಚುವುದರಿಂದ ಮುಖದ ಕಲೆಗಳು ದೂರವಾಗಿ ಮುಖ ಕಾಂತಿಯುತವಾಗುತ್ತದೆ. ಬಿಸಿ ಹಾಲಿಗೆ ಒಂದು ಚಿಟಿಕೆ ಅರಶಿನ ಸೇರಿಸಿ ಸೇವಿಸಿದರೆ ಕಫ ನಿವಾರಣೆ ಆಗುತ್ತದೆ. ಅಡುಗೆಯಲ್ಲಿ ಅರಶಿನವನ್ನು ಉಪಯೋಗಿಸುವುದರಿಂದ ರಕ್ತ ಶುದ್ದಿಯಾಗುತ್ತದೆ ಹಾಗೂ ಕ್ಯಾನ್ಸರ್ ಕಣಗಳನ್ನು ನಾಶಮಾಡುತ್ತದೆ.
ಮಧುಮೇಹಕ್ಕೆ ಅರಶಿಣ ಉಪಕಾರಿ. ಇದು ದೇಹದಲ್ಲಿ ಇರುವ ಬೇಡವಾದ ಕೊಬ್ಬನ್ನು ನಿಯಂತ್ರಿಸುತ್ತದೆ. ಬೆಂಕಿ ಕೆಂಡದ ಮೇಲೆ ಅರಶಿಣ ಹಾಕಿಬರುವ ಧೂಮವನ್ನು ಮೂಗು ಬಾಯಲ್ಲಿ ಸ್ವಲ್ಪ ಸಮಯ ಎಳೆದುಕೊಳ್ಳುವುದರಿಂದ, ನೆಗಡಿ, ತಲೆನೋವು, ಕೆಮ್ಮು, ದಮ್ಮು, ತಲೆಸುತ್ತು ನಿವಾರಣೆಯಾಗುತ್ತದೆ. ಅರಶಿಣವನ್ನು ಗಂಧದೊಂದಿಗೆ ತೇದು ಪ್ರತಿದಿನ ಸೇವಿಸುವುದರಿಂದ ಮಹಿಳೆಯರ ಗರ್ಭಾಶಯ ಮತ್ತು ಋತುಸ್ರಾವ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಅರಶಿನವನ್ನು ತೇದು ಶುಧ್ಧ ಜೇನುತುಪ್ಪದಲ್ಲಿ ಕಲಸಿ ನೆಕ್ಕುವುದರಿಂದ ಗಂಟಲು ನೋವು, ಗಂಟಲು ಕೆರೆತ, ಜ್ವರ, ಶೀತ ಕಡಿಮೆಯಾಗುತ್ತದೆ. ಉಪ್ಪಿನೊಂದಿಗೆ ಅರಶಿನ ಸೇರಿಸಿ ಹಲ್ಲುಜ್ಜುವುದರಿಂದ ಹಲ್ಲು ಮತ್ತು ದವಡೆಯ ಸಮಸ್ಯೆ ಮತ್ತು ಬಾಯಿಯ ದುರ್ವಾಸನೆಗೆ ರಾಮಬಾಣ. ಹಸುವಿನ ಬೆಣ್ಣೆ ಅಥವ ಹರಳೆಣ್ಣೆಯ ಜೊತೆ ಅರಶಿಣ ತೇದು ಅದನ್ನು ಹಿಮ್ಮಡಿಗೆ ಹಚ್ಚುವುದರಿಂದ ಹಿಮ್ಮಡಿ ಬಿರುಕು ಮಾಯವಾಗಿ ಚರ್ಮ ಮೃದುವಾಗುತ್ತದೆ. ಉಗುರು ಸುತ್ತು ಆದಾಗ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಗೆ ಅರಶಿಣ ಹಾಕಿ ಲೇಪಿಸಿದರೆ ನೋವು ಕಡಿಮೆಯಾಗಿ ಬೇಗನೆ ಗುಣವಾಗುತ್ತದೆ.
ಅರಶಿನ ಬೇವಿನ ಚಿಗುರು ಉಪ್ಪು ಇವುಗಳನ್ನು ನುಣ್ಣಗೆ ಅರೆದು ಹುಳುಕಡ್ಡಿ, ಗಜಕರ್ಣ, ಕಜ್ಜಿ, ಗಾಯಕ್ಕೆ ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ. ಸ್ನಾನ ಮಾಡುವ ನೀರಿನಲ್ಲಿ ಅರಶೀನ ಬೆರೆಸಿ ಸ್ನಾನ ಮಾಡಿದರೆ ಚರ್ಮರೋಗ ಬರುವುದಿಲ್ಲ ಮತ್ತು ಚರ್ಮ ಕಾಂತಿಯುತಗೊಳ್ಳುತ್ತದೆ. ಹಾಗೆಯೆ ಅರಶಿಣವನ್ನು ಮಿತಿಯಾಗಿ ಉಪಯೋಗಿಸಬೇಕೆಂದು ನಮ್ಮ ಹಿರಿಯರು ಹೇಳಲು ಮರೆಯಲಿಲ್ಲ. ಅತಿಯಾಗಿ ಅರಶಿನ ಬಳಸುವುದರಿಂದ ಕಣ್ಣಿಗೆ ಅಪಾಯ ಎನ್ನಲಾಗುತ್ತದೆ. ಅರಶಿನವು ನಮ್ಮ ಆರೋಗ್ಯಯುತ ಜೀವನಕ್ಕೆ ಪೃಕೃತಿ ನೀಡಿದ ಅಧ್ಭುತ ಕೊಡುಗೆ ಎನ್ನುವುದರಲ್ಲಿ ತಪ್ಪಾಗಲಾರದು.
✍ ಲಲಿತಶ್ರೀ ಪ್ರೀತಂ ರೈ