ದೇವರ ಪೂಜೆಗೆ ವಿಶೇಷವೆಂದು ಹೇಳಲಾಗುವ ಬಿಳಿ, ಕೆಂಪು, ಕಡುನೀಲಿ, ತಿಳಿ ನೇರಳೆ ಮುಂತಾದ ಬಣ್ಣಗಳಲ್ಲಿರುವ ಶಂಖಪುಷ್ಪದಲ್ಲಿ ಏಕ ಮತ್ತು ದ್ವಿತೀಯ ಎಂಬ ಎರಡು ತಳಿಗಳಿದ್ದು, ಏಕ ತಳಿಯ ಹೂವಿನಲ್ಲಿ ದೊಡ್ಡದಾದ ಒಂದು ಎಸಳಿದ್ದು, ದ್ವಿತೀಯ ತಳಿಯಲ್ಲಿ ಒಂದಕ್ಕೊಂದು ಸುರುಳಿ ಸುತ್ತಿ ಕೊಂಡಿರುವ ಐದು ಎಸಳುಗಳಿವೆ. ಹೂವಿನ ದಳಗಳು ಶಂಖದ ಒಳಭಾಗದ ಆಕಾರವನ್ನು ಹೊಂದಿರುವ ಕಾರಣ ಶಂಖಪುಷ್ಪ ಎಂಬ ಹೆಸರು ಬಂದಿರಬಹುದು. ಆಯುರ್ವೇದದ ಪ್ರಕಾರ ಬಿಳಿವರ್ಣದ ಶಂಖಪುಷ್ಪ ಪ್ರಭಾವಶಾಲಿ. ಶಂಖಪುಷ್ಪವನ್ನು ಸಂಸ್ಕೃತದಲ್ಲಿ ಗವಾಕ್ಷ, ರೋಮವಲ್ಲಿ ಎಂದರೆ, ಕನ್ನಡದಲ್ಲಿ ಗಿರಿಕರ್ಣಿಕೆ ಬಳ್ಳಿ, ತಮಿಳಿನಲ್ಲಿ ಕಾಕ್ಕಣಮ್, ಕವಾಚ್ಚಿ, ತೆಲುಗಿನಲ್ಲಿ ದಿಂಟೆನ, ಮಲಯಾಳಂನಲ್ಲಿ ಆರಲ್, ಶಂಖಪುಷ್ಪಂ ಎಂದು ಕರೆಯುತ್ತಾರೆ.
ಹಿಂದಿನ ಕಾಲದಲ್ಲಿ ಅರೆತಲೆನೋವು ನಿವಾರಿಸಲು ಶಂಖಪುಷ್ಪದ ಬೇರನ್ನು ತೇದು ಅಂಜನದ ಹಾಗೆ ಕಣ್ಣಿಗೆ ಸವರುತ್ತಿದ್ದರಂತೆ.
ದೇಹದಲ್ಲಿ ಬಾವು ಬಂದಿದ್ದರೆ ಇದರ ಎಲೆಗಳ ರಸವನ್ನು ಬಿಸಿ ಮಾಡಿ ಲೇಪಿಸಿದರೆ ಬಾವು ನೋವು ಗುಣವಾಗುತ್ತದೆ.
ಬೇರಿನ ರಸವನ್ನು ಹಾಲಿನಲ್ಲಿ ಬೆರೆಸಿ ಸೇವಿಸಿದರೆ ಶ್ವಾಸನಾಳಗಳ ಸಮಸ್ಯೆಗೆ ನಾಟಿ ವೈದ್ಯದಲ್ಲಿ ಬಳಸಲಾಗುತ್ತಿತ್ತು.
ಮುಖದಲ್ಲಿ ಬಿಳಿಕಲೆಗಳಿದ್ದರೆ ಬೇರನ್ನು ತೇದು ಎಳ್ಳೆಣ್ಣೆಯಲ್ಲಿ ಕಲಸಿ ಲೇಪಿಸಿದರೆ ಗುಣಮುಖವಾಗುವುದು.
ಇದರ ಬೀಜವನ್ನು ಹುರಿದು ಹುಡಿ ಮಾಡಿ ಬೆಂಕಿ ಗುಳ್ಳೆಗಳ ನೋವು ಶಮನದ ಔಷಧಕ್ಕೆ ಬಳಸುತ್ತಾರೆ.
ಹೊಟ್ಟೆ ಸೆಳೆತ, ಪಚನದ ತೊಂದರೆ, ಮೂತ್ರಪಿಂಡ, ಅನ್ನನಾಳ, ಪಿತ್ತಜನಕಾಂಗ, ಪಿತ್ತಕೋಶಗಳ ಕಾಯಿಲೆ ಹಾಗೂ ಹೊಟ್ಟೆ ಉಬ್ಬರದ ತೊಂದರೆಗಳನ್ನು ಶಂಖಪುಷ್ಪದ ಬಳಕೆಯಿಂದ ನಿವಾರಿಸಬಹುದೆಂದು ಆಯುರ್ವೇದ ಹೇಳಿದೆ.
ಆಹಾರಕ್ಕೆ ನೈಸರ್ಗಿಕವಾಗಿ ಬಣ್ಣ ಬರಲು ಈ ಹೂವನ್ನು ಕೆಲವು ಕಡೆ ಬಳಸಲಾಗುತ್ತದೆ.
ಹಳ್ಳಿಗಳಲ್ಲಿ ತಲೆಗೆ ಹಚ್ಚುವ ತೈಲ ತಯಾರಿಕೆಯಲ್ಲಿ ನೀಲಿ ಶಂಖಪುಷ್ಪ ಹೂ ಮತ್ತು ಅದರ ಬೇರನ್ನು ಭೃಂಗರಾಜ ಸೊಪ್ಪಿನೊಂದಿಗೆ ಬಳಸುತ್ತಾರೆ. ಇದರಿಂದ ಕೂದಲು ಕಪ್ಪಾಗಿ ಬೆಳೆಯುತ್ತದೆ.
ಬೀಜವನ್ನು ಪುಡಿಮಾಡಿ ಸೇವಿಸುವುದರಿಂದ ಭೇದಿ ಶಮನವಾಗುತ್ತದೆ.
ಗಿಡದ ಬೇರನ್ನು ಅರೆದು ಚೇಳು ಕುಟುಕಿದ ಜಾಗದ ಮೇಲೆ ಲೇಪಿಸಿದರೆ ಉರಿ ಮತ್ತು ಊತ ಕಡಿಮೆಯಾಗುತ್ತದೆ.
ಶಂಖಪುಷ್ಪ ಟಾನಿಕ್ ಅನ್ನು ಹೆಚ್ಚಾಗಿ ಹೈಪೊಟೆನ್ಸಿವ್ ಸಿಂಡ್ರೋಮ್‌ಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಟಾನಿಕ್ ಕಫ-ವಾತ- ಪಿತ್ತ ದೋಷಗಳಲ್ಲಿ ಸಮತೋಲನ ಮತ್ತು ಚೈತನ್ಯವನ್ನು ಸುಧಾರಿಸುತ್ತದೆ.
✍ ಲಲಿತಶ್ರೀ ಪ್ರೀತಂ ರೈ