ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಅಮೃತಬಳ್ಳಿಯು ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದು ತ್ರಿದೋಷಗಳಿಂದ ಅಂದರೆ ವಾತ, ಪಿತ್ತ, ಕಫಗಳಿಂದ ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಆಯುರ್ವೇದದಲ್ಲೂ ಇದಕ್ಕೆ ವಿಶೇಷವಾದ ಸ್ಥಾನವಿದೆ.
ಅಮೃತಬಳ್ಳಿಯ ಅರ್ಧ ಚಮಚದಷ್ಟು ಚೂರ್ಣಕ್ಕೆ ಒಂದೆರಡು ಕಾಳು ಮೆಣಸಿನಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ವೇಳೆ ಸೇವಿಸುವುದರಿಂದ ಹೃದಯ ಸಂಬಂದಿ ಕಾಯಿಲೆಗಳು ವಾಸಿಯಾಗುತ್ತದೆ.
ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಂಡು ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಬಾಯಾರಿಕೆ, ವಾಂತಿ, ವಾಕರಿಕೆ ಕಡಿಮೆಯಾಗುತ್ತದೆ.
ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯ ಸಮತೂಕ ನಯವಾಗಿ ಚೂರ್ಣ ಮಾಡಿಟ್ಟುಕೊಂಡು, 10ಗ್ರಾಂ ನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ಕುಡಿಸುವುದರಿಂದ ಮೂತ್ರನಾಳದ ಕಲ್ಲು ಕರಗುತ್ತದೆ ಎನ್ನಲಾಗುತ್ತದೆ. ಅಮೃತಬಳ್ಳಿಯ ಎಲೆ ಮತ್ತು ಶ್ರೀಗಂಧದ ಚಕ್ಕೆಯನ್ನು ಸಮತೂಕದಲ್ಲಿ ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ ಹಚ್ಚುವುದರಿಂದ ಪಿತ್ತ ವಿಕಾರ ಕಡಿಮೆಯಾಗುತ್ತದೆ.
2 ಚಮಚ ಹಸಿಸೊಪ್ಪಿನ ರಸಕ್ಕೆ ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದರಿಂದ ಹೊಟ್ಟೆ ಉರಿ ಕಡಿಮೆಯಾಗುತ್ತದೆ.
ಹಸಿ ಅಮೃತಬಳ್ಳಿಯನ್ನು ತಂದು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಪಟ್ಟು ಹಾಕಿ, ಒಂದೆರಡು ತಾಸುಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಬುದ್ಧಿ ಭ್ರಮಣೆಗೆ ಔಷದಿಯಾಗಬಲ್ಲದು.
20ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಸಕ್ಕರೆ ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದರಿಂದ ಸ್ತ್ರೀಯರಿಗೆ ಒಳ್ಳೆಯದು.
ಅಮೃತಬಳ್ಳಿ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿವಸಕ್ಕೆ ಎರಡು ಬಾರಿ ಸೇವಿಸುವುದು ಅಥವಾ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದರಿಂದ ಉರಿ ಮೂತ್ರಕ್ಕೆ ಔಷದಿಯಾಗಬಲ್ಲದು.
ಯಾವುದೇ ಮನೆ ಮದ್ದನ್ನು ಉಪಯೋಗಿಸುವ ಮೊದಲು ತಜ್ಞರ ಸಲಹೆ ಪಡೆಯಲು ಮರೆಯದಿರಿ.
✍ ಲಲಿತಶ್ರೀ ಪ್ರೀತಂ ರೈ