ಸಂಸ್ಕೃತದಲ್ಲಿ ಮಾರ್ಕಂಡಿಕ ಎನ್ನಲಾಗುವ ಇದರ ಹೂವು ಹಳದಿಯಾಗಿದ್ದು, ಕಾಯಿ ಚಪ್ಪಟೆಯಾಗಿ ತುದಿಯಲ್ಲಿ ಬಾಗಿರುತ್ತದೆ. ಅಕ್ಟೋಬರ್, ಡಿಸೆಂಬರ್ ತಿಂಗಳಲ್ಲಿ ಹೂ ಕಾಯಿ ಬಿಡುತ್ತದೆ. ಹೂವಿನಲ್ಲಿ ಸಾಮಾನ್ಯವಾಗಿ ಐದು ದಳಗಳಿರುತ್ತವೆ. ಇದರ ಎಲೆ,ಬೇರು, ಹೂ ಮತ್ತು ಕಾಯಿಯನ್ನು ಮನೆಮದ್ದಿನಲ್ಲಿ ಬಳಸಲಾಗುತ್ತದೆ.
ಸೋನಾಮುಖಿ, ಸೋಂಪು, ಗುಲಾಬಿ ದಳ, ಒಣಗಿದ ದ್ರಾಕ್ಷಿ ಮತ್ತು ಅಂಜೂರದ ಹಣ್ಣ ನ್ನು ಸೇರಿಸಿ ನುಣ್ಣಗೆ ಅರೆಯುವುದು ನೀರಿನೊಂದಿಗೆ ಕಷಾಯಮಾಡಿ, ತಣ್ಣಗಾದಮೇಲೆ ಶೋಧಿಸಿ, ರಾತ್ರಿ ವೇಳೆ ನಾಲ್ಕು ಟೀ ಚಮಚ ಸೇವಿಸುವುದರಿಂದ ಮಲಬದ್ಧತೆ ಮತ್ತು ನೆಗಡಿ ಪರಿಹಾರವಾಗುವುದು.
ಅರ್ಧ ಟೀ ಚಮಚ ಸೋನಾಮುಖಿ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಸುವುದರಿಂದ ಜ್ವರದಲ್ಲಿ ಬರುವ ಅತೀ ಬೆವರು ಕಡಿಮೆಯಾಗುತ್ತದೆ.
ಒಂದೆರಡು ಚಿಟಿಕೆ ಸೋನಾಮುಖಿಯ ನಯವಾದ ಚೂರ್ಣವನ್ನು ಜೇನಿನಲ್ಲಿ ಕಲಸಿ ನಾಲಿಗೆಯ ಮೇಲೆ ಸವರುವುದರಿಂದ ಜ್ವರದಿಂದ ನಾಲಿಗೆ ರುಚಿ ಕಳೆದುಕೊಂಡಿದ್ದರೆ ಸರಿಯಾಗುತ್ತದೆ.
ಸಮ ಪ್ರಮಾಣದ ಸೋನಾಮುಖಿ, ಅಳಲೆಕಾಯಿ ಮತ್ತು ಶುಂಠಿಯನ್ನು ಚೆನ್ನಾಗಿ ಜಜ್ಜಿ, ನೀರಿಗೆ ಹಾಕಿ ಕಾಯಿಸಿ, ಕಷಾಯ ಮಾಡಿ, ನಾಲ್ಕು ಟೀ ಚಮಚ ಕಷಾಯಕ್ಕೆ ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿ ದಿವಸಕ್ಕೆ ಒಂದೇ ವೇಳೆ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ.
ಸಮ ಪ್ರಮಾಣದ ಸೋನಾಮುಖಿ, ಆಡು ಸೋಗೆ ಎಲೆ, ಮುತ್ತಗದ ಬೇರು, ಕರೀ ಲಕ್ಕಿ ಬೇರು, ಗುಳ್ಳದ ಬೇರು, ಭೃಂಗರಾಜನ ಎಲೆ, ಇವೆಲ್ಲವನ್ನು ನುಣ್ಣಗೆ ಕುಟ್ಟಿ ಚೂರ್ಣ ಮಾಡಿ, ೨ ಗ್ರಾಂ ಚೂರ್ಣವನ್ನು ಜೇನು ತುಪ್ಪದಲ್ಲಿ ಕಲಸಿ ಸೇವಿಸುವುದರಿಂದ ಪುರುಷರಿಗೆ ಒಳ್ಳೆಯದು.
ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಹೊಟ್ಟೆಯಲ್ಲಿ ನುಲಿಯುವ ನೋವು, ಬಾಯಾರಿಕೆ ಮತ್ತು ವಾಂತಿ ಆಗಬಹುದು.
✍ ಲಲಿತಶ್ರೀ ಪ್ರೀತಂ ರೈ