ಸಾಮಾನ್ಯವಾಗಿ ಜೀರಿಗೆ ಎಲ್ಲರಿಗೂ ತಿಳಿದಿದೆ. ಆದರೆ ಕರಿ ಜೀರಿಗೆ ಬಗ್ಗೆ ತಿಳಿದಿರುವುದು ಕಡಿಮೆ. ಕಲೊಂಜಿ, ಕಾಲಾಜೀರಿಗೆ, ಕಹಿಜೀರಿಗೆ ಎಂದೆಲ್ಲಾ ಕರೆಸಿಕೊಳ್ಳುವ ಈ ಪುಟ್ಟ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನುಗಳು, ಪ್ರೋಟೀನುಗಳು, ಕರಗದ ನಾರು, ಕಬ್ಬಿಣ, ಸೋಡಿಯಂ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಇವೆ. ಆಯುರ್ವೇದದಲ್ಲಿ ಕಪ್ಪು ಜೀರಿಗೆಯನ್ನು ಔಷಧಿಯ ರೂಪದಲ್ಲಿ ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ.
ಅಸ್ತಮಾ ಹಾಗೂ ಇತರ ಶ್ವಾಸನಾಳಗಳಿಗೆ ಸಂಬಂಧಿಸಿದ ಅಲರ್ಜಿಗಳ ಹಾಗೂ ಇತರ ತೊಂದರೆಗಳಿಂದ ರಕ್ಷಿಸಲು ಕಪ್ಪು ಜೀರಿಗೆ ನೆರವಾಗುತ್ತದೆ. ಅಲ್ಲದೇ ಉಸಿರಾಟದ ತೊಂದರೆ ಹಾಗೂ ಕಟ್ಟಿಕೊಂಡಿರುವ ಎದೆಯನ್ನು ನಿರಾಳಗೊಳಿಸಲೂ ನೆರವಾಗುತ್ತದೆ.
ಕಪ್ಪು ಜೀರಿಗೆಯ ಸೇವನೆಯಿಂದ ವಿಶೇಷವಾಗಿ ಸ್ತನ ಕ್ಯಾನ್ಸರ್‌ನ ಜೀವಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತದೆ. ಅಲ್ಲದೇ ಬಾಯಿಯ ಕ್ಯಾನ್ಸರ್, ಕರುಳು ಹಾಗೂ ಗರ್ಭಕಂಠದ ಕ್ಯಾನ್ಸರ್ ಬರುವುದರಿಂದಲೂ ರಕ್ಷಿಸುತ್ತದೆ.
ಇದರ ಸೇವನೆಯಿಂದ ಯಕೃತ್‌ನ ಜೀವಕೋಶಗಳು ಮತ್ತೆ ತಮ್ಮ ಮೂಲ ಕ್ಷಮತೆಯನ್ನು ಪಡೆಯುತ್ತವೆ ಹಾಗೂ ಶೀಘ್ರವೇ ಯಕೃತ್ ತನ್ನ ಮೊದಲಿನ ಆರೋಗ್ಯ ಪಡೆಯಲು ನೆರವಾಗುತ್ತದೆ.
ಮೈಯಲ್ಲಿ ಅಲರ್ಜಿ ತುರಿಕೆಗಳಾದಾಗ, ಗಾಯಗಳು ಮಾಯದೆ ರಸಿಕೆಯಾದಾಗ, ಊತ ಬಾವುಗಳು ಕಡಿಮೆಯಾಗದಿದ್ದಾಗ ಬೆಳಗ್ಗೆ ಬರಿಹೊಟ್ಟೆಗೆ ಅರ್ಧ ಚಮಚ ಕಹಿಜೀರಿಗೆ ನುಂಗಿ ಉಗುರು ಬೆಚ್ಚಗಿನ ನೀರು ಕುಡಿದರೆ ನಂಜಿನ ಅಂಶ ಕಡಿಮೆಯಾಗುತ್ತದೆ.
ಕಹಿ ಜೀರಿಗೆಯ ಕಷಾಯ ಮಾಡಿ ಸೇವಿಸುವುದರಿಂದ ಹೊಟ್ಟೆನೋವು, ವಾತ, ಕೆಮ್ಮು, ಅಜೀರ್ಣ, ಅನಿದ್ರೆ ಗಳು ದೂರಾಗುತ್ತವೆ.
ಸ್ತ್ರೀಯರ ಬಿಳಿಸೆರಗು ಗುಣವಾಗಿ, ಗರ್ಭಾಶಯ ಶುದ್ಧಿಯಾಗುವುದು. ಬಾಣಂತಿಯರ ನಂಜು ತೆಗೆಯಲು ಇದರ ಬೀಜಗಳನ್ನು ಮೊದಲಿನಿಂದಲೂ ಬಳಸುತ್ತಾ ಬಂದಿದ್ದಾರೆ.
ಇದು ತಾಯಂದಿರ ಎದೆ ಹಾಲು ಹೆಚ್ಚಿಸುವುದಕ್ಕೆ ಸಹಕಾರಿ.
ಕಪ್ಪು ಜೀರಿಗೆಯ ಸೇವನೆಯಿಂದ ಟೈಪ್-1 ಹಾಗೂ ಟೈಪ್-2 ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಮಧುಮೇಹ ನಿಯಂತ್ರಿಸುವಲ್ಲಿ ಸಹಕಾರಿ.
ಬೀಜಗಳನ್ನು ಹಾಲಲ್ಲಿ ಅರೆದು ಮುಖಕ್ಕೆ ಹಚ್ಚಿ ಅರ್ದಗಂಟೆಯ ನಂತರ ಮುಖ ತೊಳೆಯುವುದರಿಂದ ಮುಖದ ಚರ್ಮ ಕಾಂತಿಯುತವಾಗುತ್ತದೆ.
ಗರ್ಭಪಾತವಾಗುವ ಸಾಧ್ಯತೆ ಇರುವುದರಿಂದ ಗರ್ಭಿಣಿಯರು ಕರಿ ಜೀರಿಗೆಯಿಂದ ದೂರವಿರುವುದು ಉತ್ತಮ.
✍ ಲಲಿತಶ್ರೀ ಪ್ರೀತಂ ರೈ