ನಮ್ಮ ಜನ ನುಗ್ಗೆ ಕಾಯಿಗೆ ಮಹತ್ವ ಕೊಟ್ಟಷ್ಟು ನುಗ್ಗೆ ಸೊಪ್ಪಿಗೆ ಕೊಡಲ್ಲ. ಆದರೆ ನುಗ್ಗೆ ಸೊಪ್ಪನ್ನು ಇತರ ಸೊಪ್ಪಿಗೆ ಹೋಲಿಸಿದರೆ ವಿಶೇಷ ಗುಣ ಹೊಂದಿರುವ ಸೊಪ್ಪು . ನುಗ್ಗೆ ಸೊಪ್ಪನ್ನು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಾಗಿ ಉಪಯೋಗಿಸಲಾಗುತ್ತಿತ್ತು. ನಂತರ ಇದರ ಮಹತ್ವ ವಿಶ್ವದ ಅನೇಕ ರಾಷ್ಟ್ರಗಳಿಗೂ ಹರಡಿತು ಎನ್ನಲಾಗುತ್ತದೆ.
ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ - ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀರ್ಯಾಡಿಕಲ್‌ಗಳ ವಿರುದ್ಧ ಹೋರಾಡಿ ದೇಹದ ಕೋಶಗಳ ಒಳಗೆ ಡಿ ಎನ್ ಎ ಗಳ ನಾಶಕ್ಕೆ ಕಾರಣವಾಗುವುದನ್ನು ತಪ್ಪಿಸುತ್ತದೆ.
ನುಗ್ಗೆ ಸೊಪ್ಪಿನ ಸೇವನೆಯಿಂದ ಮನುಷ್ಯನ ಲಿವರ್ ನ ಆರೋಗ್ಯ ಚೆನ್ನಾಗಿರುತ್ತದೆ. ಇದು ಲಿವರ್ ಪೂರೈಸುವ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಹಲವಾರು ಅಧ್ಯಯನಗಳು ನುಗ್ಗೆ ಸೊಪ್ಪು ಮನುಷ್ಯನ ಹೃದಯವನ್ನು ಮತ್ತು ಲಿವರ್ ಅನ್ನು ಹಾನಿಮಾಡುವ ವಿಷಕಾರಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳಿಂದ ರಕ್ಷಣೆ ಮಾಡುತ್ತದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ನುಗ್ಗೆ ಸೊಪ್ಪು ಮನುಷ್ಯನ ದೇಹದ ಯಕೃತ್, ವಿಪರೀತ ಕೊಬ್ಬಿನ ಅಂಶದ ಸೇವನೆಯಿಂದ ಮತ್ತು ಲಿವರ್ ಕಾಯಿಲೆಯಿಂದ ಬಹು ಬೇಗನೆ ಹಾನಿಯಾಗುವುದನ್ನು ತಪ್ಪಿಸುತ್ತದೆ.
ಸಂಶೋಧನೆಯ ಪ್ರಕಾರ 100 ಗ್ರಾಂ ನಷ್ಟು ನುಗ್ಗೆ ಸೊಪ್ಪಿನಲ್ಲಿ 70 ಮಿಲಿ ಗ್ರಾಂ ನಷ್ಟು ಲೂಟಿನ್ ಅಂಶ ಇದ್ದು, ಇದು ಕಣ್ಣುಗಳಿಗೆ ಒತ್ತಡದಿಂದ ಮತ್ತು ದ್ರವ ಶೇಖರಣೆಯಿಂದ ಕಣ್ಣಿನ ನರಗಳನ್ನು ಹಾನಿ ಮಾಡಿ ಕಣ್ಣುಗಳನ್ನು ಸಂಪೂರ್ಣವಾಗಿ ಕುರುಡಾಗಿಸುವ ಸಹಜವಾದ ಕಾಯಿಲೆಯಾದ ಗ್ಲೂಕೋಮವನ್ನು ಆರಂಭಿಕ ಹಂತದಲ್ಲಿಯೇ ತಡೆ ಹಾಕುತ್ತದೆ.
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ' ಡಿ ' ಅಂಶ ಇದ್ದು, ಮನುಷ್ಯನ ದೇಹದಲ್ಲಿ ಇನ್ಸುಲಿನ್‌ನ ಅಂಶವನ್ನು ಹೆಚ್ಚಿಸುವುದರಿಂದ ಮದುಮೇಹದಿಂದ ದೂರ ಇರಬಹುದು.
ಅಧಿಕ ರಕ್ತದ ಒತ್ತಡಕ್ಕೆ ನುಗ್ಗೆ ಸೊಪ್ಪು ಎಲ್ಲಾ ರೀತಿಯಿಂದಲೂ ಸಹಕಾರಿ. ಏಕೆಂದರೆ ಇದರಲ್ಲಿ ಅಧಿಕವಾದ ಪೊಟ್ಯಾಶಿಯಂ ಅಂಶ ಇದೆ. ಸಹಜವಾಗಿಯೇ ಪೊಟ್ಯಾಶಿಯಂ ಅಂಶ ರಕ್ತದ ಒತ್ತಡವನ್ನು ಕಡಿಮೆ ಮನುಷ್ಯನ ದೇಹದಲ್ಲಿ ರಕ್ತನಾಳಗಳ ಹಿಗ್ಗುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುವ ವಾಸೋಪ್ರೆಸ್ಸಿನ್ ಎಂಬ ಹಾರ್ಮೋನ್ ನ ಮೇಲೆಯೇ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ನುಗ್ಗೆ ಸೊಪ್ಪಿನ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಎಂದು ಗುರುತಿಸಲಾದ ಎಲ್ ಡಿ ಎಲ್ ನಿಂದ ಹೃದಯವನ್ನು ರಕ್ಷಿಸಿಕೊಳ್ಳಬಹುದು. ಇದಕ್ಕೆ ಕಾರಣ ನುಗ್ಗೆ ಸೊಪ್ಪಿನಲ್ಲಿರುವ ಒಮೆಗಾ - ೩ ಫ್ಯಾಟಿ ಆಮ್ಲದ ಅಂಶ ಕೊಲೆಸ್ಟ್ರಾಲ್ ಅಂಶವನ್ನು ದೇಹದಿಂದ ಹೀರಿಕೊಂಡು ಕೊಲೆಸ್ಟ್ರಾಲ್ ರಕ್ತನಾಳಗಳ ಒಳಗೆ ಹೋಗಿ ಪ್ಲೇಕ್ ರಚನೆ ಆಗುವುದನ್ನು ತಡೆಗಟ್ಟುತ್ತದೆ.
ನುಗ್ಗೆ ಸೊಪ್ಪಿನ ಸೇವನೆಯಿಂದ ಸಿಗುವ ಅಧಿಕ ಫೈಬರ್ ನ ಅಂಶ ನಿಮ್ಮ ಹೊಟ್ಟೆ ಹಸಿವನ್ನು ಕಡಿಮೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಐಸೋಥಿಯೋಸಿಯಾನೇಟ್ ಎಂಬ ಸಕ್ರಿಯ ವಸ್ತುವಿದ್ದು, ಇದು ದೇಹ ಪ್ರತಿದಿನ ಕೊಬ್ಬಿನಂಶ ಅಥವಾ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವುದನ್ನು ತಪ್ಪಿಸುತ್ತದೆ.
ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಕರಗುವ ಮತ್ತು ಕರಗದಿರುವ ನಾರಿನಂಶ ಇದ್ದು, ಮನುಷ್ಯನ ಜೀರ್ಣಾಂಗವನ್ನು ಉತ್ತಮಗೊಳಿಸಿ ಮಲಬದ್ಧತೆಯನ್ನು ತಡೆದು ಮಲಬದ್ಧತೆಯ ಸಮಸ್ಯೆಯನ್ನು ಗುಣ ಪಡಿಸುತ್ತದೆ.
ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಜ್ಯೂಸು ಮಾಡಿಕೊಂಡು ಕುಡಿಯುವುದರಿಂದ ಇದು ಮೂತ್ರದಲ್ಲಿನ ಕಲ್ಲು ನಿವಾರಣೆಗೆ ಸಹಾಯಕವಾಗುತ್ತದೆ.
ನುಗ್ಗೆ ಸೊಪ್ಪು ಪಾಲಕ್ ಸೊಪ್ಪಿಗಿಂತಲೂ 6 ರಷ್ಟು ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ ಇದು ರಕ್ತಹೀನತೆಯನ್ನು ನಿವಾರಣೆ ಮಾಡುತ್ತದೆ.
ನುಗ್ಗೆ ಸೊಪ್ಪಿನ ಎಲೆಗಳನ್ನ ನೀರಿನಲ್ಲಿ ಹಾಕಿ ಕಿವುಚಿ, ಆ ನೀರನ್ನು ತಲೆಗೆ ಹಾಕಿಕೊಂಡು 30 ನಿಮಿಷಗಳ ಬಳಿಕ ತಲೆ ಸ್ನಾನ ಮಾಡುವುದರಿಂದ, ಕೂದಲಿನ ಸಮಸ್ಯೆ ದೂರವಾಗಿ ಆರೋಗ್ಯಕರ ಕೊಡಲು ನಮ್ಮದಾಗುತ್ತದೆ.
ನುಗ್ಗೆ ಸೊಪ್ಪು ಹಾಲಿಗಿಂತ 4 ರಷ್ಟು ಅಧಿಕ ಕ್ಯಾಲ್ಸಿಯಂ ನ್ನು ಹೊಂದಿದ್ದು, ಇದು ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಅಂಶವುಳ್ಳ ನುಗ್ಗೆ ಸೊಪ್ಪನ್ನು ಕಡೆಗಣಿಸದೆ ಆಗಾಗ ಆಹಾರದಲ್ಲಿ ಉಪಯೋಗಿಸಬೇಕು.
✍ ಲಲಿತಶ್ರೀ ಪ್ರೀತಂ ರೈ