image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

"ಕುಕ್ಕು ಶುಂಠಿ" ಯನ್ನು ಕಾಡು ಗಿಡವೆಂದು ಕಡೆಗಣಿಸದೇ ಹೂ ಕುಂಡದಲ್ಲಾದರೂ ಬೆಳೆಸಿ, ಉಳಿಸೋಣ...

"ಕುಕ್ಕು ಶುಂಠಿ" ಯನ್ನು ಕಾಡು ಗಿಡವೆಂದು ಕಡೆಗಣಿಸದೇ ಹೂ ಕುಂಡದಲ್ಲಾದರೂ ಬೆಳೆಸಿ, ಉಳಿಸೋಣ...

ನೋಡಲು ಅರಸಿನದ ಗಿಡದಂತೆ, ಗೆಡ್ಡೆ ಶುಂಠಿಯಂತೆ ಇದ್ದು, ಕತ್ತರಿಸಿದಾಗ ತಾಜಾ ಮಾವಿನಕಾಯಿಯ ಸುಗಂಧ ಬಂದಿತೆಂದರೆ ಅದುವೇ ತುಳುವರ ಕುಕ್ಕು ಶುಂಠಿ. ಸಂಸ್ಕೃತದ ಮಾಂಙನ್ನಾರಿ. ಮಾವಿನ ಶುಂಠಿ,  ನೆಲಮಾವು,  ಅಂಬೆ ಅರಶಿಣ, ಅಂಬೆಕೊಂಬು, ತಮಿಳು ಹಾಗೂ ಮಲಯಾಳಂನಲ್ಲಿ ಮಾಂಙಯಿಂಜಿ.  ಸನಾತನ ವೈದ್ಯಕೀಯ ಪದ್ಧತಿಯಂತೆ ಮಾವಿನ ಶುಂಠಿಯ ಗೆಡ್ಡೆಗಳು ಅತಿ ಶ್ರೇಷ್ಠವಾದ ಔಷಧೀಯ ಗುಣಗಳನ್ನು ಹೊಂದಿವೆ.    ಆದರೆ ಇಂದು ಹೆಚ್ಚಿನವರಿಗೆ ಇದರ ಪರಿಚಯ ಮತ್ತು ಅದರ ವಿಶಿಷ್ಟತೆ ತಿಳಿದಿಲ್ಲ.  ಎಪ್ರಿಲ್, ಮೇ ತಿಂಗಳಲ್ಲಿ ಒಂದೆರಡು ಮಳೆ ಬಂದ ಮೇಲೆ ಇದರ ಗೆಡ್ಡೆಯನ್ನು ನಾಟಿ ಮಾಡಲು ಸಕಾಲ. ಇದಕ್ಕೆ ಹೆಚ್ಚಿನ ಆರೈಕೆಯ ಅಗತ್ಯ ಇಲ್ಲ, ಹಾಗೇ ರೋಗಬಾಧೆಯೂ ಇರುವುದಿಲ್ಲ.  ಆರು ತಿಂಗಳಲ್ಲಿ ಇಳುವರಿ ಪಡೆಯಬಹುದಾಗಿದೆ. ಕಾಡು ಗೆಡ್ಡೆಯಂತೆ ಶುಂಠಿ, ಅರಸಿನ ಹೋಲಿಕೆಯಲ್ಲಿ ಬೆಳೆಯುವ ಈ ಗೆಡ್ಡೆಯ ಉಪಯೋಗ ಹಲವು, ಚಟ್ನಿ, ತಂಬುಲಿ, ಚಿತ್ರಾನ್ನ, ಉಪ್ಪಿನಕಾಯಿಗಳಲ್ಲಿ ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದರ ಉಪಯೋಗ ಕಡಿಮೆಯಾಗುತ್ತಿದೆ. ಜಗತ್ತನ್ನು ಕಾಡುತ್ತಿರುವ ಹಲವಾರು ಕಾಯಿಲೆಗಳಿಗೆ ಇದು ರಾಮಬಾಣ ಆಗುವುದರಲ್ಲಿ ಸಂದೇಹವಿಲ್ಲ. 

ಜ್ವರದ ತಾಪದಿಂದ ಬಾಯಿರುಚಿ ಕೆಟ್ಟಾಗ ಜಡ್ಡುಗಟ್ಟಿದ ನಾಲಿಗೆಗೆ ಬಾಯಿರುಚಿ ಹೆಚ್ಚಿಸುವ ಶಕ್ತಿ ನೀಡುತ್ತದೆ.

ಇದನ್ನು ಆಹಾರದಲ್ಲಿ ಉಪಯೋಗಿಸುವುದರಿಂದ ಅಲರ್ಜಿ, ಚರ್ಮರೋಗ ಕಡಿಮೆ ಆಗುತ್ತದೆ. 

ಇದರ ಚಟ್ನಿ ಮಾಡಿ ತಿನ್ನುವುದರಿಂದ ಕಫ ನಿವಾರಣೆಯಾಗುತ್ತದೆ. 

ಇದರ ಸೇವನೆಯಿಂದ ದೇಹದಲ್ಲಿ ಆಗುವ ಕೆರತಗಳನ್ನು ಕಮ್ಮಿ ಮಾಡುತ್ತದೆ.

ಅಸ್ತಮಾ ಕಾಯಿಲೆಯಿಂದ ನರಲುವವರಿಗೆ  ದಿವ್ಯ ಔಷಧ.

ಇದರ ಉಪ್ಪಿನಕಾಯಿ ಅಥವಾ ಚಟ್ನಿ ಸೇವನೆಯಿಂದ ಪಿತ್ತ ಕಾಯಿಲೆಯು ಶಮನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಇದರ ಸೇವನೆಯಿಂದ ಜೀರ್ಣಾಂಗದ ಸಮಸ್ಯೆಗಳನ್ನು ಪರಿಹರಿಸುತ್ತದೆ. 

ಇದು ದೇಹವನ್ನು ತಂಪು ಮಾಡುತ್ತದೆ ಅಲ್ಲದೆ, ಬೇಸಗೆಯ ದಾಹ ಶಮನ ಮಾಡುವುದು.  

ಇದರ ಸೇವನೆಯಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. 

ಕಫ ಕೆಮ್ಮು ಶಮನಗೊಳಿಸುವ ಶಕ್ತಿ ಕುಕ್ಕು ಶುಂಠಿಗೆ ಇದೆ.

ಎಲ್ಲೊ ಅಲ್ಲೊಂದು ಇಲ್ಲೊಂದು ತರಕಾರಿ ಅಂಗಡಿಗಳಲ್ಲಿ ಸಿಕ್ಕಾಗ ,  ಮನೆ ಮುಂದೆ ಹೂಕುಂಡದಲ್ಲಿ ಯಾವುದೋ ಕ್ರೋಟನ್ ಗಳಂತಹ  ವಿಷಕಾರಿ  ಗಿಡ ಬೆಳೆಸುವ ಬದಲು ಇಂತಹ ಔಷಧಿಯ ಗಿಡಗಳನ್ನು ಬೆಳೆಸಿದರೆ, ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿದಂತಾಗುತ್ತದೆ.

 ✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ