ಇಂದಿನ ಪೀಳಿಗೆಗೆ ನಮ್ಮ ಸುತ್ತ ಮುತ್ತಲಿನಲ್ಲಿರುವ ಮನೆ ಮದ್ದಿನ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಇಂದು ಚಿಕ್ಕ ಪುಟ್ಟ ಖಾಯಿಲೆಗಳಿಗೂ ಆಸ್ಪತ್ರೆಗಳಿಗೆ ಹೋಗುವ ಪರಿಪಾಠವಾಗಿದೆ. ಆದರೆ ಹಿಂದಿನ ಕಾಲದಲ್ಲಿ ಮನೆ ಮದ್ದಿನಲ್ಲಿಯೇ ಸಾದಾರಣವಾದ ಖಾಯಿಲೆಗಳನ್ನು ಗುಣ ಪಡಿಸಿಕೊಳ್ಳುತ್ತಿದ್ದರು. ಅಂತಹ ಮನೆ ಮದ್ದಿನಲ್ಲಿ ವೀಳ್ಯದ ಎಲೆಯೂ ಒಂದು.
ಭಾರತೀಯರು ಹಿಂದಿನಿಂದಲೂ ವೀಳ್ಯದ ಎಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿರುವುದನ್ನು ನಾವು ನೋಡಿದ್ದೇವೆ ಹಾಗೂ ನೋಡುತ್ತಿದ್ದೇವೆ. ಹಿಂದುಗಳು ಅದರಲ್ಲೂ ದಕ್ಷಿಣ ಭಾರತೀಯರು ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಿಕೆ ಬಳಕೆ ಮಾಡುತ್ತಾರೆ. ನಮ್ಮ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಕೆ ಜಗಿಯುತ್ತಿದ್ದರು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವ ನಂಬಿಕೆ ಇತ್ತು. ಆಯುರ್ವೇದದಲ್ಲೂ ವೀಳ್ಯದೆಲೆಗೆ ವಿಶೇಷ ಸ್ಥಾನವಿದೆ. ಇನ್ನೂ ನಮ್ಮ ಹಿರಿಯರು ಮನೆಮದ್ದಿನಲ್ಲಿ ವೀಳ್ಯದ ಎಲೆ ಉಪಯೋಗವನ್ನು ಮರೆತಿಲ್ಲ.
ಮಕ್ಕಳಲ್ಲಿ ನೆಗಡಿ, ಕೆಮ್ಮು , ಕಫ ಇದ್ದಲ್ಲಿ ವೀಳ್ಯದೆಲೆಯ ರಸಕ್ಕೆ ಬಿಳಿ ಈರುಳ್ಳಿಯ ರಸ ಹಾಗೂ ಜೇನುತುಪ್ಪ ಬೆರೆಸಿ, ಅದರಲ್ಲಿ ಶುದ್ಧ ಇಂಗನ್ನು ಸೇರಿಸಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿದರೆ ತುಂಬಾ ಪರಿಣಾಮಕಾರಿ.
ವೀಳ್ಯದೆಲೆಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ, ಬಳಿಕ ಸೋಸಿ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು, ಊತ ಗುಣವಾಗುತ್ತದೆ.
ಗಾಯ ಉಂಟಾದಾಗ ತುರಿಕೆ ಕಜ್ಜಿಗಳಿಗೆ ವೀಳ್ಯದೆಲೆಯ ರಸದಲ್ಲಿ ನಾಲ್ಕರಿಂದ ಆರು ಹನಿಯಷ್ಟು ನಿಂಬೆರಸ ಬೆರೆಸಿ ಹಚ್ಚಿದರೆ ಬೇಗ ಗುಣವಾಗುತ್ತದೆ.
ವೀಳ್ಯದೆಲೆಯನ್ನು ಕಾವಲಿಯ ಮೇಲೆ ಬೆಚ್ಚಗೆ ಮಾಡಿ ಅದಕ್ಕೆ ಕರ್ಪೂರ ಬೆರೆಸಿ ತೆಂಗಿನಎಣ್ಣೆಯನ್ನು ಲೇಪಿಸಿ, ಹಣೆಗೆ ಶಾಖ ನೀಡಿದರೆ ತಲೆನೋವು ಕಡಿಮೆಯಾಗುತ್ತದೆ.
ವೀಳ್ಯದೆಲೆಯನ್ನು ಜಗಿಯುವುದರಿಂದ ಮದುಮೇಹ ಹತೋಟಿಗೆ ಬರುತ್ತದೆ.
ವೀಳ್ಯದೆಲೆಯ ನೀರನ್ನು ಕುಡಿಯುವುದು ಮಲಬದ್ಧತೆಗೆ ತುಂಬಾ ಪ್ರಯೋಜನಕಾರಿ.
ವೀಳ್ಯದ ಎಲೆ ಉರಿಯೂತದ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.
ವೀಳ್ಯದೆಲೆ ನೀರು ಕೆಮ್ಮು ಮತ್ತು ಪಿತ್ತ ದೋಷಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದು ಗಂಟಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವೀಳ್ಯದ ಎಲೆ ಜಗಿಯುವುದರಿಂದ ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ತೆಗೆದುಹಾಕುತ್ತದೆ.
ಮಿತಿಯಾಗಿ ಉಪಯೋಗಿಸಿದಾಗ ಮಾತ್ರ ಆರೋಗ್ಯದಾಯಕ, ಎಲೆ ಅಡಿಕೆ ತಿನ್ನುವುದು ಕೂಡ ಚಟವಾಗಿ ಬದಲಾಗಿ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.