ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆ ಇದೆ. ಅಂದರೆ ನಮ್ಮ ಪಕ್ಕದಲ್ಲಿರುವ ವಸ್ತುವಾಗಲಿ, ಗಿಡ ಮೂಲಿಕೆಗಳಾಗಲಿ ಕೊನೆಗೆ ಮನುಷ್ಯರೇ ಆಗಲಿ, ಅವುಗಳ ಬಗ್ಗೆ ಅಸಡ್ಡೆ ಹೆಚ್ಚು. ಹಿಂದಿನ ಕಾಲದಲ್ಲಿ ಗಿಡ ಮೂಲಿಕೆಗಳನ್ನು ಬಳಸುತ್ತಿದ್ದ ನಮ್ಮ ಹಿರಿಯರು ನೂರು ಕಾಲ ಆರೋಗ್ಯವಾಗಿ ಬದುಕುತ್ತಿದ್ದರು. ಇಂದಿ ಚಿಕ್ಕ ತಲೆ ನೋವಿಗೂ ವೈದ್ಯರನ್ನು ಹುಡುಕಿಕೊಂಡು ಹೋಗುವುದು ರೂಡಿಯಾಗಿದೆ. ನಮ್ಮ ಹಿತ್ತಲಲ್ಲಿ ಇರುವ ಅದೆಷ್ಟೋ ಗಿಡ ಮೂಲಿಕೆಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಾಗೆ ನಮ್ಮ ಅಂಗಳದಲ್ಲಿ ಸದಾ ಕಾಣಿಸಿಕೊಳ್ಳುವ ನೆಲನೆಲ್ಲಿಯ ಔಷಧೀಯ ಗುಣಗಳನ್ನು ಇಂದು ತಿಳಿದುಕೊಳ್ಳೋಣ.
ಕಿರುನೆಲ್ಲಿ, ಭೂನೆಲ್ಲಿ, ಜಾಂಡಿಸ್ ಸೊಪ್ಪು, ಎಂಬಿತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದರಲ್ಲಿ ಸಂಶಯವಿಲ್ಲ. ಪಾರಂಪರ‍್ಯ ವೈದ್ಯ ಪದ್ದತಿಯಲ್ಲಿ ಇದನ್ನು ಉಪಯೋಗಿಸುವುದಲ್ಲದೆ, ಮನೆ ಮದ್ದಿನಲ್ಲೂ ಮಹತ್ವದ ಸ್ಥಾನ ಪಡೆದಿದೆ. ಈ ಸಸ್ಯವು ತನ್ನ ಒಡಲಲ್ಲಿ ಔಷಧೀಯ ಕಣಜವನ್ನೇ ತುಂಬಿಕೊಂಡು, ಅನೇಕ ವ್ಯಾಧಿಗಳನ್ನು ಗುಣಪಡಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ನೆಲನೆಲ್ಲಿ ಗಿಡವು ಹೊಲ, ತೋಟ, ತೇವಾಂಶ ಇರುವ ಕಡೆ ಕಳೆಯಂತೆ ಒಂದರಿಂದ ಒಂದೂವರೆ ಅಡಿ ಬೆಳೆಯುತ್ತದೆ.
ನೆಲನೆಲ್ಲಿ ಗಿಡವನ್ನು ಬೇರು ಸಹಿತ ಚೆನ್ನಾಗಿ ತೊಳೆದು, ಅದಕ್ಕೆ ಎರಡು ಕಾಳು ಮೆಣಸು ಸೇರಿಸಿ ನುಣ್ಣಗೆ ಅರೆದು, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ, ಬೆಳಿಗ್ಗೆ-ಸಂಜೆ, ಎರಡು ವಾರಗಳ ಕಾಲ ಕುಡಿಯುತ್ತಾ ಬಂದರೆ ಹಳದಿಕಾಮಾಲೆ (ಜಾಂಡಿಸ್) ಗುಣವಾಗುತ್ತದೆ ಎನ್ನುತ್ತಾರೆ.
ನೆಲನೆಲ್ಲಿ ಗಿಡದ 1 ಚಮಚ ರಸಕ್ಕೆ ಚಿಟಿಕೆ ಬೆಲ್ಲ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಊಟಕ್ಕೆ ಮೊದಲು ಸೇವಿಸುತ್ತಾ ಬಂದರೆ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು.
ನೆಲನೆಲ್ಲಿ ಗಿಡದ ಚಿಗುರನ್ನು ದಿನವು ಬೆಳಿಗ್ಗೆ ಸಂಜೆ ಜಗಿದು ತಿನ್ನುತ್ತಾ ಬಂದಲ್ಲಿ ಮಧುಮೇಹ ಹತೋಟಿಗೆ ಬರುತ್ತದೆ.
ನೆಲನೆಲ್ಲಿ ಗಿಡಕ್ಕೆ ಚಿಟಿಕೆ ಅರಸಿಣ, ಚಿಟಿಕೆ ಉಪ್ಪು ಸೇರಿಸಿ ನುಣ್ಣಗೆ ಅರೆದು, ಗಾಯ, ಬಾವು, ಗಜ್ಜಿ, ಗಜಕರ್ಣದ ಮೇಲೆ ಲೇಪನ ಮಾಡುತ್ತಾ ಬಂದರೆ ಶೀಘ್ರ ಗುಣವಾಗುತ್ತದೆ.
ನೆಲನೆಲ್ಲಿಯ ರಸಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ, ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
ಇದೇ ರಸಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ಜ್ವರ, ನೆಗಡಿ, ಕೆಮ್ಮು ಶಮನವಾಗುವುದು.
ನೆಲನೆಲ್ಲಿ ಬೇರು ಸಮೇತ ಚೆನ್ನಾಗಿ ತೊಳೆದು, ಅದಕ್ಕೆ ಒಂದು ಚಮಚ ಜೀರಿಗೆ ಬೆರೆಸಿ ಕಷಾಯ ಮಾಡಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಯಾವುದೇ ಗಿಡ ಮೂಲಿಕೆ ಉಪಯೋಗಿಸುವ ಮೊದಲು ಗಿಡಮೂಲಿಕೆಗಳ ಪರಿಚಯ ಇರುವವರ ಬಳಿ ಸಲಹೆ ಪಡೆದುಕೊಳ್ಳುವುದು ಉತ್ತಮ.
✍ಲಲಿತಶ್ರೀ ಪ್ರೀತಂ ರೈ