ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ,ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣ ಮುಂತಾದ ಅಂಶಗಳನ್ನು ಹೇರ ಳವಾಗಿ ತುಂಬಿಕೊಂಡು ಮೇ ತಿಂಗಳಿ ನಿಂದ ಜುಲೈವರೆಗೆ ಹಣ್ಣು ಕೊಡುವ, ಸಾದಾರಣವಾಗಿ ಉಷ್ಣವಲಯದಲ್ಲಿ ಬೆಳೆಯುವ ಈ "ಮಣ್ಣಡಿಕೆ"ಯ ಪರಿಚಯ ಇಂದಿನ ಪೀಳಿಗೆಗೆ ಮರಿಚಿಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಇದನ್ನು ಹಿಂದಿಯಲ್ಲಿ ಲಸುರ ಎಂದರೆ ಇಂಗ್ಲೀಷ್‌ನಲ್ಲಿ ಬರ್ಡ್ ಲೈಮ್ ಎಂತಲೂ ಕರೆಯುತ್ತಾರೆ. ಸಂಸ್ಕೃತದಲ್ಲಿ ಬೌರವ ಎಂದರೆ, ತೆಲುಗಿನಲ್ಲಿ ಬಂಕನೆಕ್ಕರ ಎನ್ನುವುದುಂಟು. ಇನ್ನು ಕನ್ನಡದಲ್ಲಿ ಚಳ್ಳಂಟು, ಚೆಡ್ಲು, ಕೆಂದಲ್, ಚಳ್ಳೆ ಹಣ್ಣು ಎಂತಲೂ ಕರೆಯುತ್ತಾರೆ. ಗಾದೆ ಮಾತಿನಲ್ಲಿ ಬರುವ ಚಳ್ಳೆಹಣ್ಣು ಇದೇ. ಏಷ್ಯಾ ಮೂಲದ ಈ ಮರ 8-10 ಮೀ ಎತ್ತರಕ್ಕೆ ಬೆಳೆಯಬಲ್ಲದು. ತೆಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಚೂಪು ತುದಿಯ ದಟ್ಟ ಹಸಿರು ಎಲೆಗಳನ್ನು ಹೊಂದಿರುತ್ತದೆ. ತಿಳಿ ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಪಾರದರ್ಶಕ ಸಿಹಿ ಅಂಟಿನ ತಿರುಳು ತುಂಬಿರುತ್ತದೆ. ಈ ಮರದಲ್ಲಿ ಕಾಯಿ ಹಣ್ಣಾಗುತ್ತಿದ್ದಂತೆ ಸುತ್ತಮುತ್ತ ತನ್ನದೆ ಆದ ವಿಚಿತ್ರವಾದ ಪರಿಮಳ ಪಸರಿಸಿರುತ್ತದೆ. ಈ ಹಣ್ಣು ಹಕ್ಕಿ, ಕೋತಿಗಳ ಇಷ್ಟದ ಆಹಾರವೂ ಹೌದು. ಇದರ ಕಾಯಿಯನ್ನು ಉಪ್ಪಿನಕಾಯಿ ಮತ್ತು ಸಾರಿಗೆ ಉಪಯೋಗಿಸಿದರೆ ಹಣ್ಣನ್ನು ತಿನ್ನುವುದರ ಜೊತೆಗೆ ಮದ್ಯ ತಯಾರಿಕೆಯಲ್ಲಿಯೂ ಹಿರಿಯರು ಉಪಯೋಗಿಸುತ್ತಿದ್ದರು. ಅಷ್ಟೇ ಅಲ್ಲದೆ ಇದರ ಗಿಡ, ಕಾಯಿ, ಹಣ್ಣು, ಬೀಜಗಳನ್ನು ಮನೆ ಮದ್ದಿನಲ್ಲಿಯೂ ಉಪಯೋಗಿಸುತ್ತಿದ್ದರಂತೆ.
ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ ಗಿಡದ ತೊಗಟೆಗಳನ್ನು ಉಪಯೋಗಿಸಲಾಗುತ್ತದೆ.
ಇದು ತಲೆಗೂದಲು ಬೆಳೆಯಲು ಉತ್ತಮ ಔಷಧ.
ಗರ್ಭಕೋಶದ ಹಾಗೂ ಯಕೃತ್ತೊಂದರೆಗೆ ಹಣ್ಣಿನ್ನು ಔಷಧಿಯಾಗಿ ಉಪಯೋಗಿಸುತ್ತಾರೆ.
ಇದರ ಹಣ್ಣಿನ ಬೀಜದ ಪುಡಿಯಿಂದ ಹುಳಕಡ್ಡಿಗೆ ಔಷಧಿ ಮಾಡಲಾಗುತ್ತದೆ.
ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖವಾಗುತ್ತದೆ
ಗಾಯಕ್ಕೆ ತೊಗಟೆಯ ಗಂಧ ಲೇಪನದಿಂದ ಗಾಯ ವಾಸಿಯಾಗುತ್ತದೆ.
ಹಣ್ಣು ವಿರೇಚಕ ಇದನ್ನು ತಿನ್ನುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಎನ್ನಲಾಗಿತ್ತದೆ.
ಯಾವುದೇ ಮನೆ ಮದ್ದನ್ನು ಉಪಯೋಗಿಸುವ ಮೊದಲು ಅದರ ಬಗ್ಗೆ ಜ್ಜಾನ ಇರುವವರ ಜೊತೆ ಮಾಹಿತಿ ಪಡೆಯುವುದನ್ನು ಮರೆಯದಿರಿ.
✍ಲಲಿತಶ್ರೀ ಪ್ರೀತಂ ರೈ