ಇಂಗ್ಲೀಷ್‌ನಲ್ಲಿ ಹನಿ ಟ್ರೀ ಎಂದು ಕರೆಸಿಕೊಳ್ಳುವ ಹಿಪ್ಪೆ ಮರವನ್ನು ತುಳುವಿನಲ್ಲಿ ನಾನಿಲ್ ಎಂದು ಕರೆಯುತ್ತಾರೆ. ಹೊಳೆಯ ಬದಿದಲ್ಲಿ ಹೆಚ್ಚಾಗಿ ಬೆಳೆಯುವ ಆ ಮರವನ್ನು ಬಸ್ತಾರ್‌ನ ಆದಿವಾಸಿಗಳು ಮತ್ತು ಮಧ್ಯಪ್ರದೇಶದ ಗೊಂಡ ಆದಿವಾಸಿಗಳು ಪೂಜಿಸುತ್ತಾರೆ. ಹಿಂದೆ ಹಿಪ್ಪೆ ಹಣ್ಣಿನಿಂದ ಆದಿವಾಸಿಗಳು ಹೆಂಡವನ್ನು ತಯಾರಿಸುತ್ತಿದ್ದರಂತೆ. ಚಿಕ್ಕು ಹಣ್ಣಿನ ಬೀಜದಂತಿರುವ ಹಿಪ್ಪೆ ಬೀಜದಿಂದ ಎಣ್ಣೆ ತೆಗೆದು ಕೆಲವು ಕಡೆಗಳಲ್ಲಿ ಅಡುಗೆಗೆ ಉಪಯೋಗಿಸುತ್ತಾರೆ.
ಗೊಂಡ ಆದಿವಾಸಿಗಳಲ್ಲಿ ಚಳಿಗಾಲದಲ್ಲಿ ಮಗು ಜನಿಸಿದರೆ, ತಾಯ ಹಾಲಿಗೂ ಮೊದಲು ಹಿಪ್ಪೆ ಹಣ್ಣಿನ ರಸವನ್ನು ನೆಕ್ಕಿಸುತ್ತಾರೆ. ಹಿಪ್ಪೆ ಹೂ ಸಿಹಿಯಿಂದ ಕೂಡಿದ್ದು ಬಹಳ ರುಚಿಕರವಾಗಿರುತ್ತದೆ. ಮಕ್ಕಳು ಇದನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ನಾನಿಲ್ ಹೂ ಅರಳುವ ಸಮಯಕ್ಕೆ ಕೋಗಿಲೆಗಳಿಗೆ ಗಂಟಲು ನೋವು ಬಂದಿರುತ್ತದೆ ಎನ್ನುವ ಮಾತು ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಹಿಪ್ಪೆ ಬೀಜದ ಎಣ್ಣೆಯನ್ನು ಸಾಬೂನು ಉತ್ಪತ್ತಿ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಅಂಗಮರ್ದನ ಮಾಡುವ ಎಣ್ಣೆಯಾಗಿಯೂ ಬಳಸುತ್ತಾರೆ. ಅಷ್ಟೇ ಅಲ್ಲದೆ ಮನೆ ಮದ್ದಿನಲ್ಲೂ ಬಳಸಲಾಗುತ್ತದೆ.
ಹಿಪ್ಪೆ ಬೀಜದ ಎಣ್ಣೆಯು ನೋವು ಶಮನಕಾರಿ ಗುಣಗಳನ್ನು ಹೊಂದಿರುವುದರಿಂದ ಸಂಧಿವಾತ, ಕೀಲುನೋವಿಗೆ ಉತ್ತಮ ಔಷದಿ. ಚರ್ಮದ ಕಾಯಿಲೆ ಇದ್ದಾಗ ಹಿಪ್ಪೆ ಬೀಜದ ಎಣ್ಣೆಯನ್ನು ಉಪಯೋಗಿಸಿದರೆ ಚರ್ಮರೋಗ ವಾಸಿಯಾಗುತ್ತದೆ.
ಹಿಪ್ಪೆ ಮರದ ತೊಗಟೆಯ ಕಷಾಯವು ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ಹೊರ ಹಾಕುವಲ್ಲಿ ಸಹಕಾರಿ ಎನ್ನಲಾಗುತ್ತದೆ. ಕಷಾಯವು ಸಂಕುಚಿತಗೊಂಡ ಕರುಳಿನ ತೊಂದರೆ ನಿವಾರಣೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಿಪ್ಪೆ ಮರದ ತೊಗಟೆಯ ಕಷಾಯವನ್ನು ಮೂಳೆ ಮುರಿತದ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ. ಹಿಪ್ಪೆ ಹೂವುಗಳ ಕಷಾಯವು ಹೃದಯದ ತೊಂದರೆಗಳಿಗೆ ಉಪಯೋಗಿಸಲಾಗುತ್ತದೆ. ಕಿವಿಯ ತೊಂದರೆಗಳಲ್ಲೂ ಹಿಪ್ಪೆ ಉಪಯೋಗಕಾರಿ. ಶ್ವಾಸಕೋಶದಲ್ಲಿರುವ ಕಫವನ್ನು ನಿವಾರಿಸುವುದರಲ್ಲಿಯೂ ಸಹ ಹೂವಿನ ಕಷಾಯದ ಸೇವನೆಯು ಸಹಕಾರಿಯಾಗಿದೆ.ಹಿಪ್ಪೆ ಬೀಜಗಳ ಕಷಾಯ ಸೇವನೆಯು ತಾಯಂದಿರಯಲ್ಲಿ ಹಾಲು ವೃದ್ಧಿಗೆ ಸಹಾಯಕ ಎನ್ನಲಾಗುತ್ತದೆ.
ಹಿಪ್ಪೆ ಹೂವುಗಳನ್ನು ತುಪ್ಪದಲ್ಲಿ ಕಾಯಿಸಿ ಸೇವಿಸುವುದರಿಂದ ಮೂಲವ್ಯಾದಿ ಶಮನ ಆಗುತ್ತದೆ ಎಂದು ಹೇಳಲಾಗುತ್ತದೆ. ಹಿಪ್ಪೆ ಕಾಯಿಯ ಕಷಾಯ ಸೇವನೆಯು ಕ್ಷಯರೋಗಕ್ಕೆ ಉಪಯುಕ್ತವಾಗಿದೆ. ಇಸುಬಿನಿಂದ ಆಗುವ ಉರಿ ಮತ್ತು ನೋವಿಗೆ ಹೂವುಗಳನ್ನು ಹಾಲಿನೊಡನೆ ಅರೆದು ಲೇಪಿಸಿದರೆ ಶಮನವಾಗುತ್ತದೆ.
ಯಾವುದೇ ಮನೆ ಮದ್ದು ಮಾಡುವ ಮೊದಲು ಅಥವಾ ಕಾಡು ಹಣ್ಣುಗಳನ್ನು ಉಪಯೋಗಿಸುವ ಮೊದಲು ತಿಳಿದಿರುವವರಲ್ಲಿ ಮಾಹಿತಿ ಕೇಳಿ ನಂತರ ಉಪಯೋಗಿಸಲು ನಮ್ಮ ಸಲಹೆ
✍ ಲಲಿತಶ್ರೀ ಪ್ರೀತಂ ರೈ