ಸಂಸ್ಕೃತದಲ್ಲಿ ಮತ್ಸ್ಯಾಕ್ಷಿ ಎಂದು ಕರೆಯಲಾಗುವ ಹೊನಗೊನ್ನೆ ಸೊಪ್ಪು ಗದ್ದೆ ಬಯಲಿನಲ್ಲಿ ಮತ್ತು ಕೆರೆಯಂಗಳದಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಇದನ್ನು ಸೊಪ್ಪು ತರಕಾರಿಯಂತೆ ಆಹಾರದಲ್ಲಿ ಹೆಚ್ಚಿನ ಕಡೆ ಬಳಸುತ್ತಾರೆ. ಗಿಡವು ಕವಲೊಡೇದು ನೆಲದ ಮೇಲೆ ಹರಡಿ ಬೆಳಯುತ್ತದೆ. ನೆಲಕ್ಕೆ ತಾಗುವ ಗೆಣ್ಣೀನಲ್ಲಿ ಬೇರುಗಳು ಮೊಳೆತು ಕಾಂಡವನ್ನು ನೆಲಕ್ಕೆ ಭದ್ರಪಡಿಸುತ್ತದೆ. ಕಾಂಡದ ಮೇಲೆ ರಸಭರಿತವಾದ, ನೀಳಾವಾದ, ಸರಳವಾದ ಮತ್ತು ಹೊಳಪಾದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತದೆ. ಇದು ಒಂದು ಔಷಧೀಯ ಸಸ್ಯವಾಗಿದ್ದು, ಬಹಳ ರುಚಿಕರವಾ ಆಹಾರ. ಇದರಲ್ಲಿ ಮೂರು ವಿದಗಳಿದ್ದು, ಎಲೆಗಳ ಆಕಾರದ ಮತ್ತು ಕಾಂಡದ ಬಣ್ಣದಲ್ಲಿ ಅದನ್ನು ಗುರುತಿಸಬಹುದಾಗಿದೆ.
ಹೊನಗೊನ್ನೆ ಸೊಪ್ಪಿನ ಪಲ್ಯ ಮಾಡಿ ತಿನ್ನುವುದರಿಂದ, ಜ್ವರ ಬಿಟ್ಟ ನಂತರ ರುಚಿಕೆಟ್ಟ ಬಾಯಿಗೆ ರುಚಿಯುಂಟು ಮಾಡುತ್ತದೆ. ಹೊನಗೊನ್ನೆ ಸೊಪ್ಪಿನ ರಸ ಮತ್ತು ಮೂಲಂಗಿ ಸೊಪ್ಪಿನ ರಸ ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಸ್ವಲ್ಪ ಸೈಂಧವ ಲವಣ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. ಹೊನಗೊನ್ನೆ ಗಿಡದ ಎಲೆಗಳ ಜೊತೆ ಸ್ವಲ್ಪ ಆರತಿ ಕರ್ಪೂರ ಸೇರಿಸಿ ನಯವಾಗಿ ಅರೆದು ಮುಲಾಮಿನಂತೆ ಮಾಡಿಕೊಂಡು ಎಲ್ಲಾ ಬಗೆಯ ಗಾಯಗಳಿಗೆ ಲೇಪನವಾಗಿ ಬಳಸಬಹುದು. ಹೊನಗೊನ್ನೆ ಬೇರಿನ ರಸಕ್ಕೆ ಸ್ವಲ್ಪ ಬೆಲ್ಲ ತುಪ್ಪ ಸೇರಿಸಿ, ಸ್ತೀಯರು ಕುಡಿಯುವುದರಿಂದ ರಕ್ತಪ್ರದರ ಗುಣವಾಗುತ್ತದೆ. ಇದನ್ನು ದಿನಕ್ಕೆ ಒಂದು ಸಲದಂತೆ 3 ದಿವಸ ಕುಡಿಯಬೇಕು.
ಹೊನಗೊನ್ನೆ ಬೇರನ್ನು ಆಡಿನ ಹಾಲಿನಲ್ಲಿ ಅರೆದು ಕುಡಿಯುವುದರಿಂದ ಬಹುಮೂತ್ರರೋಗ ವಾಸಿಯಾಗುತ್ತದೆ. ಮಕ್ಕಳಲ್ಲಿ ಕಾಣಿಸುವ ಉರಿಮೂತ್ರಕ್ಕೂ ಇದು ಒಳ್ಳೆಯ ಔಷಧಿ. ಹೊನಗೂನ್ನೆ ಸೊಪ್ಪಿನ ಸಾರು ಅಥವಾ ಪಲ್ಯ ಮಾಡಿ ಸೇವಿಸುವುದರಿಂದ ಕಣ್ಣುಗಳ ವ್ಯಾಧಿಗಳು ಬರುವುದಿಲ್ಲ ಎನ್ನುತ್ತಾರೆ. ಹೊನಗೊನ್ನೆ ಬೇರನ್ನು ಆಡಿನ ಹಾಲಿನಲ್ಲಿ ಅರೆದು ಸೋಸಿ ದಿವಸಕ್ಕೂಮ್ಮೆ ಕುಡಿಸುವುದರಿಂದ ಮೂತ್ರವಿಸರ್ಜನೆ ಸಲೀಸಾಗುವುದು. ಹಿಂದಿನ ಕಾಲದಲ್ಲಿ ಹೊನಗೊನ್ನೆ ಸೊಪ್ಪಿನ ರಸದಲ್ಲಿ ಉತ್ತರಾಣಿ ಬೇರನ್ನು ತೇಯ್ದು ಕಣ್ಣಿನಪೊರೆ ನಿವಾರಣೆಗೆ ಕಣ್ಣುಗಳಿಗೆ ಹಚ್ಚಲಾಗುತ್ತಿದ್ದರಂತೆ. ಯಾವುದೇ ಮನೆ ಮದ್ದನ್ನು ಉಪಯೋಗಿಸುವ ಮೊದಲು ತಜ್ಜರ ಹತ್ತಿರ ಸಲಹೆ ಪಡೆಯುವುದು ಉತ್ತಮ
✍ಲಲಿತಶ್ರೀ ಪ್ರೀತಂ ರೈ