image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

2040ರ ವೇಳೆಗೆ ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲೇ ಕಡುಬಡವರ ಸಂಖ್ಯೆ ಕಡಿಮೆ: ವಿಶ್ವಬ್ಯಾಂಕ್ ವರದಿ

2040ರ ವೇಳೆಗೆ ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲೇ ಕಡುಬಡವರ ಸಂಖ್ಯೆ ಕಡಿಮೆ: ವಿಶ್ವಬ್ಯಾಂಕ್ ವರದಿ

ನ್ಯೂ ಯಾರ್ಕ್ : ಕಳೆದ ಕೆಲವು ದಶಕಗಳಿಂದ ಭಾರತದಲ್ಲಿ ಅತೀ ಬಡತನದ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ವಿಶ್ವಬ್ಯಾಂಕ್‌ನ ಇತ್ತೀಚಿನ ದತ್ತಾಂಶವು ಐತಿಹಾಸಿಕ ಬದಲಾವಣೆಯೊಂದನ್ನು ಸೂಚಿಸಿದೆ. ವರದಿಯ ಮುನ್ನೋಟದ ಪ್ರಕಾರ, 2040ರ ವೇಳೆಗೆ ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ಒಳಗೊಂಡ ದಕ್ಷಿಣ ಏಷ್ಯಾ ವಲಯದಲ್ಲಿ ಕಡುಬಡವರ (Extreme Poverty) ಸಂಖ್ಯೆಯು ಉತ್ತರ ಅಮೆರಿಕ ಹಾಗೂ ಯುರೋಪ್ ಖಂಡಗಳಲ್ಲಿರುವ ಕಡುಬಡವರಿಗಿಂತ ಕಡಿಮೆಯಾಗಲಿದೆ.

ವಿಶ್ವಬ್ಯಾಂಕ್ ಜಾಗತಿಕ ಮಟ್ಟದಲ್ಲಿ ಏಳು ಭೂಪ್ರದೇಶಗಳನ್ನು ವಿಂಗಡಿಸಿ ನೀಡಿರುವ ಅಂಕಿ-ಅಂಶಗಳ ಪ್ರಕಾರ, 1990ರಲ್ಲಿ ದಕ್ಷಿಣ ಏಷ್ಯಾದಲ್ಲಿ ಬರೋಬ್ಬರಿ 50.3 ಕೋಟಿ (503 ಮಿಲಿಯನ್) ಕಡುಬಡವರಿದ್ದರು. ಈ ಸಂಖ್ಯೆ 2025ರ ವೇಳೆಗೆ 5.22 ಕೋಟಿಗೆ (52.2 ಮಿಲಿಯನ್) ಇಳಿಕೆಯಾಗಿದ್ದು, 2040ರ ವೇಳೆಗೆ ಕೇವಲ 27.6 ಲಕ್ಷಕ್ಕೆ (2.76 ಮಿಲಿಯನ್) ತಗ್ಗಲಿದೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, 2040ರ ವೇಳೆಗೆ ಉತ್ತರ ಅಮೆರಿಕದಲ್ಲಿ 33.5 ಲಕ್ಷ (3.35 ಮಿಲಿಯನ್) ಹಾಗೂ ಯುರೋಪ್ ಮತ್ತು ಮಧ್ಯ ಏಷ್ಯಾದಲ್ಲಿ 28.9 ಲಕ್ಷ (2.89 ಮಿಲಿಯನ್) ಕಡುಬಡವರು ಇರಲಿದ್ದಾರೆ ಎಂದು ವರದಿ ಹೇಳಿದೆ.

1990ರ ದಶಕದ ಬಳಿಕ ಭಾರತದಲ್ಲಿ ಕಂಡುಬಂದ ಕ್ಷಿಪ್ರ ಆರ್ಥಿಕ ಪ್ರಗತಿ, ಬಡತನ ನಿರ್ಮೂಲನಾ ಯೋಜನೆಗಳು, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಈ ಸಕಾರಾತ್ಮಕ ಬದಲಾವಣೆಗೆ ಪ್ರಮುಖ ಕಾರಣವಾಗಿವೆ. ವಿಶೇಷವಾಗಿ 2014ರ ನಂತರ ಭಾರತದಲ್ಲಿ ಸಾಧಿಸಲಾದ ಶರವೇಗದ ಡಿಜಿಟಲೀಕರಣ ಮತ್ತು ಕಲ್ಯಾಣ ಯೋಜನೆಗಳು ಬಡತನ ರೇಖೆಗಿಂತ ಕೆಳಗಿದ್ದ ಜನರನ್ನು ಮೇಲಕ್ಕೆತ್ತುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ವಿಶ್ವಬ್ಯಾಂಕ್ ದತ್ತಾಂಶವು ಬೆಟ್ಟುಮಾಡಿದೆ.

Category
ಕರಾವಳಿ ತರಂಗಿಣಿ