ಮಾಸ್ಕೋ: ಬಾಸ್ಫರಸ್ ಮತ್ತು ಹಾರ್ಮುಜ್ ಜಲಸಂಧಿಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಸರಕು ಸಾಗಣೆಗೆ ಉಂಟಾಗಿರುವ ಅಡಚಣೆಯನ್ನು ಎದುರಿಸಲು, ರಷ್ಯಾದಿಂದ ಹಿಂದೂ ಮಹಾಸಾಗರಕ್ಕೆ ನೇರ ರೈಲು ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಮರಾತ್ ಖುಸ್ನುಲ್ಲಿನ್ ತಿಳಿಸಿದ್ದಾರೆ.
ಅಮೆರಿಕ-ಇಸ್ರೇಲ್ ಪಡೆಗಳು ಮತ್ತು ಇರಾನ್ ನಡುವಿನ ಜಂಟಿ ಮಿಲಿಟರಿ ಸಂಘರ್ಷದಿಂದಾಗಿ ಹಾರ್ಮುಜ್ ಜಲಮಾರ್ಗವು ನಿರ್ಬಂಧಕ್ಕೊಳಗಾಗಿದ್ದು, ಜಾಗತಿಕ ತೈಲ ಮತ್ತು ಸರಕು ರಫ್ತಿನ ಮೇಲೆ ಭಾರಿ ಪರಿಣಾಮ ಬೀರಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ತನ್ನ ವ್ಯಾಪಾರಕ್ಕಾಗಿ ಪರ್ಯಾಯ ಹಾಗೂ ಸುರಕ್ಷಿತ ಭೂಸಾರಿಗೆ ಮಾರ್ಗಗಳನ್ನು ಹುಡುಕುವುದು ತುರ್ತು ಅಗತ್ಯವಾಗಿದೆ ಎಂದು ಅವರು ಮಾಧ್ಯಮ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ತುರ್ಕಮೆನಿಸ್ತಾನ್, ಇರಾನ್, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನಗಳ ಮೂಲಕ ಭೂಮಾರ್ಗವಾಗಿ ರೈಲ್ವೆ ಜಾಲ ವಿಸ್ತರಿಸುವ ಯೋಜನೆ ಸಕ್ರಿಯವಾಗಿದ್ದು, ಇದು ಕಾರ್ಯರೂಪಕ್ಕೆ ಬಂದರೆ ರಷ್ಯಾ ಮತ್ತು ಭಾರತದ ನಡುವೆ ನೇರ ಸಾರಿಗೆ ಸಂಪರ್ಕ ಸಾಧ್ಯವಾಗಲಿದೆ. ಭಾರತವನ್ನು ತಲುಪಲು ಇರುವ ಪ್ರತಿಯೊಂದು ಸುರಕ್ಷಿತ ಮಾರ್ಗವೂ ರಷ್ಯಾಕ್ಕೆ ಸ್ವೀಕಾರಾರ್ಹ ಎಂದಿರುವ ಅವರು, ಅಂತಾರಾಷ್ಟ್ರೀಯ ಲಾಜಿಸ್ಟಿಕ್ಸ್ ಜೊತೆಗೆ ದೇಶೀಯ ನಿರ್ಮಾಣ ವಲಯ ಹಾಗೂ ಆರ್ಥಿಕ ಚೌಕಟ್ಟಿಗೆ ದೀರ್ಘಕಾಲೀನ ಬೆಂಬಲ ನೀಡುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.