ಇರಾನ್ : ಇರಾನ್‌ನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಕುರಿತು ವ್ಯಾಪಕ ಊಹಾಪೋಹಗಳು ಹಬ್ಬಿರುವ ಹಿನ್ನೆಲೆಯಲ್ಲಿ, ಇರಾನ್ ಸರ್ಕಾರಿ ನಿಯಂತ್ರಿತ 'ಮೆಹರ್' ಸುದ್ದಿ ಸಂಸ್ಥೆಯು ಅವರ ದಿನಾಂಕವಿಲ್ಲದ 12 ಸೆಕೆಂಡುಗಳ ವಿಡಿಯೊವೊಂದನ್ನು ಪ್ರಕಟಿಸಿದೆ. ಕಳೆದ ಫೆಬ್ರುವರಿಯ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ತಂದೆ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ ಮೊಜ್ತಬಾ ಅವರು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಆ ದಾಳಿಯಲ್ಲಿ ಮೊಜ್ತಬಾ ಅವರ ಮುಖ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಆದರೆ ಇದೀಗ ಬಿಡುಗಡೆಯಾಗಿರುವ ವಿಡಿಯೊದಲ್ಲಿ ಅವರು ಮುಚ್ಚಿದ ಕೋಣೆಯೊಂದರ ಕಾರ್ಪೆಟ್ ಮೇಲೆ ಕುಳಿತು ಜನರೊಂದಿಗೆ ಸಂವಾದ ನಡೆಸುತ್ತಿದ್ದು, ಉತ್ತಮ ಆರೋಗ್ಯ ಹೊಂದಿರುವಂತೆ ಕಂಡುಬಂದಿದ್ದಾರೆ. ಕಪ್ಪು ಪೇಟ, ಬಿಳಿ ಉಡುಪು ಮತ್ತು ತಿಳಿ ಬೂದು ಬಣ್ಣದ ನಿಲುವಂಗಿ ಧರಿಸಿರುವ ಅವರು ತಾಜಾ ವಿಡಿಯೊದಲ್ಲಿ ಕ್ರಿಯಾಶೀಲರಾಗಿ ಕಾಣಿಸಿಕೊಂಡಿದ್ದಾರೆ.
ಮಾರ್ಚ್ 8ರಂದು ಇರಾನ್‌ನ ಮೂರನೇ ಪರಮೋಚ್ಚ ನಾಯಕನಾಗಿ ನೇಮಕಗೊಂಡಾಗಿನಿಂದ ಅವರು ಮಾಧ್ಯಮಗಳಲ್ಲಿ ಲಿಖಿತ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದು, ತಮ್ಮ ತಂದೆಯ ಅಂತ್ಯಸಂಸ್ಕಾರದಲ್ಲೂ ಭಾಗವಹಿಸಿರಲಿಲ್ಲ. ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬುದು ಅಜ್ಞಾತವಾಗಿದ್ದು, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಸಹ ನಾಯಕರೊಂದಿಗೆ ನೇರ ಸಂಪರ್ಕ ಸಾಧಿಸುವುದು ಸವಾಲಾಗಿದೆ ಎಂದಿದ್ದರು. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಮಾಧ್ಯಮಗಳು ಮೊಜ್ತಬಾ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಮಾಡಿದ್ದವು. ಈ ಎಲ್ಲಾ ವದಂತಿಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಇರಾನ್ ಮಾಧ್ಯಮ ಈ ವಿಡಿಯೊವನ್ನು ಹಂಚಿಕೊಂಡಿದೆ.