ವಾಷಿಂಗ್ಟನ್: ಮುಂಬರುವ ಮಧ್ಯಂತರ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಅಮೆರಿಕದ ಉದ್ಯೋಗ ಮಾರುಕಟ್ಟೆ ಅನಿರೀಕ್ಷಿತವಾಗಿ ಕುಸಿತ ಕಂಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಭಾರಿ ರಾಜಕೀಯ ಆಘಾತ ನೀಡಿದೆ. ಜುಲೈ ತಿಂಗಳಲ್ಲಿ ಉದ್ಯೋಗದಾತರು 23,000 ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಮೇ ಮತ್ತು ಜೂನ್ ತಿಂಗಳ ಪರಿಷ್ಕೃತ ಅಂಕಿಅಂಶಗಳ ಪ್ರಕಾರ ಹೆಚ್ಚುವರಿಯಾಗಿ 103,000 ಉದ್ಯೋಗಗಳ ನಷ್ಟವಾಗಿದೆ. ವಿಶ್ಲೇಷಕರು ಸುಮಾರು 100,000 ಹೊಸ ಉದ್ಯೋಗಗಳ ಸೃಷ್ಟಿಯನ್ನು ನಿರೀಕ್ಷಿಸಿದ್ದರು. ಆದರೆ ಸ್ಥಳೀಯ ಸಾರ್ವಜನಿಕ ಶಾಲೆಗಳಲ್ಲಿ 50,000, ರೆಸ್ಟೋರೆಂಟ್ ಹಾಗೂ ಬಾರ್‌ಗಳಲ್ಲಿ 26,000 ಮತ್ತು ಚಿಲ್ಲರೆ ವ್ಯಾಪಾರ ವಲಯದಲ್ಲಿ 19,000 ಉದ್ಯೋಗಗಳು ಕಡಿತಗೊಂಡಿವೆ. ಕಾರ್ಮಿಕರು ಮಾರುಕಟ್ಟೆಯಿಂದ ಹೊರಗುಳಿದಿದ್ದರಿಂದ ನಿರುದ್ಯೋಗ ದರ ಕುಸಿದಿದೆಯೇ ಹೊರತು ಹೊಸ ಉದ್ಯೋಗ ಸೃಷ್ಟಿಯಿಂದಲ್ಲ ಎಂಬುದು ತಿಳಿದುಬಂದಿದೆ.
ಇನ್ನೊಂದೆಡೆ, ಸರ್ಕಾರದ ಸುಂಕ ನೀತಿಗಳಿಂದ ನಿರ್ಮಾಣ ವಲಯದಲ್ಲಿ 22,000 ಮತ್ತು ಉತ್ಪಾದನಾ ಕಾರ್ಖಾನೆಗಳಲ್ಲಿ 5,000 ಉದ್ಯೋಗಗಳು ಹೆಚ್ಚಾಗಿವೆ ಎಂದು ಶ್ವೇತಭವನದ ವಕ್ತಾರ ಕುಶ್ ದೇಸಾಯಿ ತಿಳಿಸಿದ್ದಾರೆ. ಆದರೆ, ಕಳೆದ 12 ತಿಂಗಳುಗಳಲ್ಲಿ ದೇಶೀಯ ಅಮೆರಿಕನ್ನರ ಉದ್ಯೋಗ ಪ್ರಮಾಣ 720,000 ರಷ್ಟು ಕುಸಿದಿರುವುದು ಟ್ರಂಪ್ ಆಡಳಿತದ ಆರ್ಥಿಕ ಪ್ರತಿಪಾದನೆಗೆ ಹಿನ್ನಡೆ ತಂದಿದೆ. ಈ ದಿಢೀರ್ ಮಂದಗತಿಯು ಫೆಡರಲ್ ರಿಸರ್ವ್‌ನ ಬಡ್ಡಿದರ ಹೆಚ್ಚಳದ ನಿರ್ಧಾರವನ್ನು ಸಂಕೀರ್ಣಗೊಳಿಸಿದ್ದು, ದರ ಏರಿಕೆಯನ್ನು ವಿಳಂಬಗೊಳಿಸುವ ಸಾಧ್ಯತೆಯಿದೆ. ಅಲ್ಲದೆ ಸರಾಸರಿ ಗಂಟೆಯ ವೇತನ ಏರಿಕೆ ಶೇ 3.2 ರಷ್ಟಕ್ಕೆ ಇಳಿಕೆಯಾಗಿದ್ದು, ಹೆಚ್ಚಿನ ಜೀವನ ವೆಚ್ಚದಿಂದ ಸಂಕಷ್ಟದಲ್ಲಿರುವ ಅಮೆರಿಕನ್ ಕುಟುಂಬಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.