image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

​'ಒಂದರ ಮೇಲೆ ದಾಳಿಯಾದರೆ ಮೂರೂ ದೇಶಗಳಿಂದ ಪ್ರತಿದಾಳಿ': ಸೌದಿ-ಪಾಕ್-ಟರ್ಕಿ ಜಂಟಿ ರಕ್ಷಣಾ ಒಪ್ಪಂದ

​'ಒಂದರ ಮೇಲೆ ದಾಳಿಯಾದರೆ ಮೂರೂ ದೇಶಗಳಿಂದ ಪ್ರತಿದಾಳಿ': ಸೌದಿ-ಪಾಕ್-ಟರ್ಕಿ ಜಂಟಿ ರಕ್ಷಣಾ ಒಪ್ಪಂದ

ಸೌದಿ ಅರೇಬಿಯಾ : ಸೌದಿ, ಪಾಕ್ ಹಾಗೂ ಟರ್ಕಿ ನಡುವೆ ಐತಿಹಾಸಿಕ 'ಮೆಕ್ಕಾ ರಕ್ಷಣಾ ಒಪ್ಪಂದ' ಅಂಕಿತ. ಮಧ್ಯಪ್ರಾಚ್ಯದ ಭದ್ರತಾ ಬಿಕ್ಕಟ್ಟಿನ ನಡುವೆಯೇ ಸೌದಿ ಅರೇಬಿಯಾ, ಪಾಕಿಸ್ತಾನ ಹಾಗೂ ಟರ್ಕಿ ದೇಶಗಳು ಮಹತ್ವದ 'ಮೆಕ್ಕಾ ರಕ್ಷಣಾ ಒಪ್ಪಂದ'ಕ್ಕೆ ಅಂಕಿತ ಹಾಕಿವೆ. ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆದ ಜಂಟಿ ಸಮ್ಮೇಳನದಲ್ಲಿ ಸೌದಿ ಯುವರಾಜ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌, ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ ಈ ಸೇನಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ನೂತನ ಒಪ್ಪಂದದ ಪ್ರಕಾರ, ಮೂರು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ದಾಳಿ ನಡೆದರೆ ಅದನ್ನು ಉಳಿದೆರಡೂ ರಾಷ್ಟ್ರಗಳ ಮೇಲಿನ ದಾಳಿ ಎಂದೇ ಪರಿಗಣಿಸಲಾಗುತ್ತದೆ. 'ಯಾವುದೇ ಒಂದು ದೇಶವು ದಾಳಿಗೊಳಗಾದರೆ ಅದರ ನೆರವಿಗೆ ಉಳಿದೆರಡು ರಾಷ್ಟ್ರಗಳು ಧಾವಿಸಲಿವೆ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವೆ 2025ರಲ್ಲೇ ಜಂಟಿ ಮಿಲಿಟರಿ ಒಪ್ಪಂದವೇರ್ಪಟ್ಟಿದ್ದು, ಇದೀಗ ಟರ್ಕಿ ಕೂಡ ಸೇರ್ಪಡೆಯಾಗುವುದರೊಂದಿಗೆ ಈ ಹೊಸ ತ್ರಿಪಕ್ಷೀಯ ಒಪ್ಪಂದ ರೂಪಗೊಂಡಿದೆ. ಇದು ಮೂರೂ ದೇಶಗಳ ಜಂಟಿ ಮಿಲಿಟರಿ ಕಾರ್ಯಾಚರಣೆ, ತರಬೇತಿ, ತಂತ್ರಜ್ಞಾನ ವರ್ಗಾವಣೆ ಮತ್ತು ಗುಪ್ತಚರ ಮಾಹಿತಿ ಹಂಚಿಕೆಗೆ ಹಾದಿ ಮಾಡಿಕೊಡಲಿದೆ.

ಈ ಬೆಳವಣಿಗೆಯನ್ನು 'ಇಸ್ಲಾಮಿಕ್ ನ್ಯಾಟೋ' ರಚನೆಯತ್ತ ಇಟ್ಟ ಪ್ರಮುಖ ಹೆಜ್ಜೆ ಎಂದು ವ್ಯಾಖ್ಯಾನಿಸಲಾಗುತ್ತಿದ್ದು, ಇರಾನ್-ಅಮೆರಿಕ ಸಮರದ ಮಧ್ಯೆ ದಾಳಿಗೆ ಒಳಗಾಗಿದ್ದ ಸೌದಿಗೆ ಇದು ಭದ್ರತಾ ಕವಚವಾಗಲಿದೆ. ತೈಲ ಸಮೃದ್ಧ ಸೌದಿ ಅರೇಬಿಯಾ, ಪರಮಾಣು ಶಕ್ತಿ ಹೊಂದಿರುವ ಪಾಕಿಸ್ತಾನ ಹಾಗೂ ನ್ಯಾಟೋದ ಬಲಿಷ್ಠ ಸೇನೆ ಹೊಂದಿರುವ ಟರ್ಕಿ ಒಂದಾಗಿರುವುದು ಮಧ್ಯಪ್ರಾಚ್ಯ ಮತ್ತು ಜಾಗತಿಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಒಪ್ಪಂದಕ್ಕೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ