image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬಾಂಗ್ಲಾದೇಶದಲ್ಲಿ ಹೆಚ್ಚಿದ ಆರ್ಥಿಕ ಸಂಕಷ್ಟ: ಸಿಎನ್‌ಜಿ ಅಭಾವದಿಂದ ನೌಕರರಿಗೆ ವಜಾ ಭೀತಿ

ಬಾಂಗ್ಲಾದೇಶದಲ್ಲಿ ಹೆಚ್ಚಿದ ಆರ್ಥಿಕ ಸಂಕಷ್ಟ: ಸಿಎನ್‌ಜಿ ಅಭಾವದಿಂದ ನೌಕರರಿಗೆ ವಜಾ ಭೀತಿ

ಢಾಕ : ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಗಡಿಪಾರಿನ ನಂತರ ಸುದೀರ್ಘ ಸಮಯದ ಬಳಿಕ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿ, ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿರುವುದು ಪ್ರಸ್ತುತ ಪ್ರಧಾನಿ ತಾರಿಕ್ ರೆಹಮಾನ್ ಅವರ ಸ್ಥಾನವನ್ನು ಕಸಿವಿಸಿಗೆ ತಳ್ಳಿದೆ. ಈ ರಾಜಕೀಯ ಅಸ್ಥಿರತೆಯ ನಡುವೆಯೇ, ದೇಶದಲ್ಲಿ ಭುಗಿಲೆದ್ದಿರುವ ತೀವ್ರ ಅನಿಲ ಬಿಕ್ಕಟ್ಟು ಸಿಎನ್‌ಜಿ ಭರ್ತಿ ಕೇಂದ್ರಗಳನ್ನು ಗಂಭೀರ ಆರ್ಥಿಕ ದುಸ್ಥಿತಿಗೆ ತಳ್ಳಿದೆ.

ಅನಿಲ ಸರಬರಾಜಿನ ನಿರಂತರ ಅಭಾವದಿಂದಾಗಿ ಬಹುತೇಕ ಸಿಎನ್‌ಜಿ ಕೇಂದ್ರಗಳಲ್ಲಿ ಮಾರಾಟ ಶೇಕಡಾ 50 ಕ್ಕಿಂತಲೂ ಹೆಚ್ಚು ಕುಸಿದಿದೆ. ಇದರಿಂದಾಗಿ ಕೇಂದ್ರಗಳ ನಿರ್ವಾಹಕರು ಭಾರಿ ನಷ್ಟ ಅನುಭವಿಸುತ್ತಿದ್ದು, ವಿದ್ಯುತ್ ಮತ್ತು ನೀರಿನ ಬಿಲ್‌ಗಳು, ಆಸ್ತಿ ಬಾಡಿಗೆ ಹಾಗೂ ನೌಕರರ ಸಂಬಳ-ಭತ್ಯೆಗಳನ್ನು ಸ್ವಂತ ಜೇಬಿನಿಂದಲೇ ಭರಿಸುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ನಿಗದಿಪಡಿಸಿರುವ ಶೇಕಡಾ 18 ರಷ್ಟು ಲಾಭಾಂಶದಲ್ಲಿ ಶೇಕಡಾ 14 ರಷ್ಟು ವಿದ್ಯುತ್ ಬಿಲ್‌ಗೇ ವ್ಯಯವಾಗುತ್ತಿದ್ದು, ನೌಕರರ ವೇತನ ಹಾಗೂ ಇತರ ನಿರ್ವಹಣೆಗೆ ಕೇವಲ ಶೇಕಡಾ 4 ರಷ್ಟು ಮಾತ್ರ ಉಳಿಯುತ್ತಿದೆ. ಆದಾಯ ಕ್ಷೀಣಿಸಿರುವುದರಿಂದ ಕಾರ್ಯಾಚರಣೆಗಳು ವಾಸ್ತವಿಕವಾಗಿ ಸ್ಥಗಿತಗೊಂಡಿದ್ದು, ಸಾವಿರಾರು ನೌಕರರ ಉದ್ಯೋಗಕ್ಕೆ ಕಂಟಕ ಎದುರಾಗಿದೆ.

ಪೂರ್ವಾಂಚಲ ಫಿಲ್ಲಿಂಗ್ ಸ್ಟೇಷನ್‌ನ ವ್ಯವಸ್ಥಾಪಕ ಮೊಹಮ್ಮದ್ ಶಾ ಆಲಂ ಮಾತನಾಡಿ, ಅನಿಲದ ಕಡಿಮೆ ಒತ್ತಡದಿಂದಾಗಿ ಮಾರಾಟ ಕುಸಿತ ಕಂಡಿದೆ. ನೌಕರರಿಗೆ ಕೆಲಸವಿಲ್ಲದಿದ್ದರೂ ವೇತನ ನೀಡಲಾಗುತ್ತಿದ್ದು, ಬಿಕ್ಕಟ್ಟು ದೀರ್ಘಕಾಲ ಮುಂದುವರಿದರೆ ನೌಕರರನ್ನು ವಜಾಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಎಚ್ಚರಿಸಿದ್ದಾರೆ. ವೆಸ್ಟ್ ಈಸ್ಟರ್ನ್ ಸಿಎನ್‌ಜಿ ಸ್ಟೇಷನ್‌ನ ಜನರಲ್ ಮ್ಯಾನೇಜರ್ ಮಹೇಶ್ ರಾಯ್ ಕೂಡ ತಮ್ಮ ಕೇಂದ್ರದ 27 ನೌಕರರು ನಿರುದ್ಯೋಗಿಗಳಾಗುವ ಭೀತಿಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಿಕ್ಕಟ್ಟು ಜುಲೈ 21 ರಂದು ಕಾಕ್ಸ್ ಬಜಾರ್‌ನಲ್ಲಿರುವ ಯುಎಸ್ ಸಂಸ್ಥೆ 'ಆಕ್ಸಿಲರೇಟ್ ಎನರ್ಜಿ' ನಿರ್ವಹಿಸುವ ತೇಲುವ ಎಲ್‌ಎನ್‌ಜಿ ಟರ್ಮಿನಲ್‌ನಲ್ಲಿ (FSRU) ಸಂಭವಿಸಿದ ಅಗ್ನಿ ಅವಘಡದಿಂದ ಶುರುವಾಗಿದೆ. ಬಾಯ್ಲರ್‌ಗೆ ಹಾನಿಯಾದ ಕಾರಣ ದೇಶದ ದೈನಂದಿನ ಅನಿಲ ಸರಬರಾಜು 2.65 ಶತಕೋಟಿ ಘನ ಅಡಿಗಳಿಂದ 2.13 ಶತಕೋಟಿ ಘನ ಅಡಿಗಳಿಗೆ ಕುಸಿದಿದೆ. ಆಗಸ್ಟ್ 20 ರವರೆಗೆ ಹೊಸ ಎಲ್‌ಎನ್‌ಜಿ ಸರಕು ದೊರೆಯದಿರುವುದರಿಂದ ನಿರಂತರ ಪೂರೈಕೆ ಕಷ್ಟಕರವಾಗಿದೆ. ಈ ಅಭಾವವು ಬಹುತೇಕ ಕೈಗಾರಿಕಾ ವಲಯಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದ್ದು, ಅನೇಕ ಉತ್ಪಾದನಾ ಘಟಕಗಳು ಮುಚ್ಚುವ ಅಂಚಿನಲ್ಲಿವೆ.

Category
ಕರಾವಳಿ ತರಂಗಿಣಿ