ವಾಷಿಂಗ್ಟನ್: ಇರಾನ್ ದೇಶಕ್ಕೆ ಇನ್ನು ಮುಂದೆ ಹೆಚ್ಚಿನ ಕಾಲಾವಕಾಶ ಕೊಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಭೀಕರ ಯುದ್ಧದ ಮುನ್ಸೂಚನೆ ಸಿಕ್ಕಿದೆ. ಇರಾನ್‌ನ ಪರಮಾಣು ಯೋಜನೆ ಮತ್ತು ಆಯಕಟ್ಟಿನ ಹೊರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆಯ ನಡುವೆಯೇ ಟ್ರಂಪ್ ಇರಾನ್ ನಾಯಕತ್ವವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ 'ಟ್ರುತ್ ಸೋಷಿಯಲ್'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಇರಾನ್‌ನ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದ್ದಾರೆ. ತೆರೆಮರೆಯಲ್ಲಿ ಅಮೆರಿಕದೊಂದಿಗೆ ಮಾತುಕತೆಗೆ ಬರಲು ನಿರಂತರವಾಗಿ ವಿನಂತಿಸುತ್ತಿರುವ ಇರಾನ್, ಸಾರ್ವಜನಿಕವಾಗಿ ಮಾತ್ರ ಅಮೆರಿಕದ ಜೊತೆ ಯಾವುದೇ ಚರ್ಚೆ ನಡೆಸುತ್ತಿಲ್ಲ ಮತ್ತು ಕೇವಲ ಒಮಾನ್ ದೇಶದೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕ ನಾಟಕವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಪ್ಪಂದಕ್ಕೆ ಒಪ್ಪದಿದ್ದರೆ ಸಂಪೂರ್ಣವಾಗಿ ಶರಣಾಗಲು ಸಿದ್ಧರಾಗಿ ಎಂದು ಎಚ್ಚರಿಸಿರುವ ಅವರು, ಅಮೆರಿಕದ ಅನುಮತಿಯಿಲ್ಲದೆ ಯಾವುದೇ ಸರಬರಾಜುಗಳು ಇರಾನ್‌ಗೆ ತಲುಪಲು ಬಿಡುವುದಿಲ್ಲ ಎಂದಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವುದಾಗಿ ಇರಾನ್ ಹೇಳಿಕೊಳ್ಳುತ್ತಿದ್ದರೂ, ಅದು ಈಗಾಗಲೇ ಅಮೆರಿಕ ನೌಕಾಪಡೆಯ ಸಂಪೂರ್ಣ ಕಂಟ್ರೋಲ್‌ನಲ್ಲಿದೆ ಮತ್ತು ಅಲ್ಲಿ 'ಉಕ್ಕಿನ ಗೋಡೆ' ನೆಲೆಯೂರಿದೆ ಎಂದು ಪ್ರತಿಪಾದಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಈ ಪ್ರಚೋದನಾತ್ಮಕ ಎಚ್ಚರಿಕೆಗೆ ಇರಾನ್ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.