ರಾವಲ್ಪಿಂಡಿ : ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಬೆಳೆಯುತ್ತಿರುವ ರಾಜತಾಂತ್ರಿಕ ಹಾಗೂ ಆರ್ಥಿಕ ನಿಕಟತೆಯು ಪಾಕಿಸ್ತಾನಕ್ಕೆ ಭಾರಿ ನುಂಗಲಾರದ ತೂಟಿಯಾಗಿ ಪರಿಣಮಿಸಿದ್ದು, ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗದ (DG ISPR) ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅತ್ಯಂತ ವಿವಾದಾತ್ಮಕ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲಿಬಾನ್ ಆಡಳಿತವು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವುದನ್ನು ತೀವ್ರವಾಗಿ ಟೀಕಿಸಿದ್ದು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ "ಮುಸ್ಲಿಮರು ಕಾಫಿರ್‌ಗಳೊಂದಿಗೆ (ಮುಸ್ಲಿಮೇತರರು) ಸ್ನೇಹ ಬೆಳೆಸಬಾರದು" ಎಂಬ ಧರ್ಮಧಾರಿತ ಹೇಳಿಕೆ ನೀಡಿದ್ದಾರೆ. ಅಫ್ಘಾನಿಸ್ತಾನ್ ತನ್ನ ಪ್ರಾದೇಶಿಕ ಮತ್ತು ಆರ್ಥಿಕ ಹಿತಾಸಕ್ತಿಗಳಿಗಾಗಿ ಭಾರತದೊಂದಿಗೆ ನಿಕಟ ಸಂಪರ್ಕ ಸಾಧಿಸುತ್ತಿರುವುದು ಹಾಗೂ ಭಾರತವು ಅಲ್ಲಿ ಕೈಗೊಳ್ಳುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಮತ್ತು ಮಾನವೀಯ ನೆರವು ಪಾಕಿಸ್ತಾನದ ಭದ್ರತಾ ಪಡೆಗಳಿಗೆ ಸಹಿಸಲಾಗದ ಮುಳ್ಳಾಗಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ್ ಗಡಿಭಾಗದ ದುರಾಂಡ್ ಲೈನ್‌ನಲ್ಲಿ ಉದ್ವಿಗ್ನತೆ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಬಂದಿರುವ ಈ ಹೇಳಿಕೆಗೆ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಗಡಿಭಾಗದ ಪ್ರಾದೇಶಿಕ ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿಗೆ ಧಾರ್ಮಿಕ ಬಣ್ಣ ಬಳಿದು ಜನರ ಭಾವನೆಗಳನ್ನು ಪ್ರಚೋದಿಸಲು ಪಾಕಿಸ್ತಾನ ಸೇನೆ ಯತ್ನಿಸುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಕಟುವಾಗಿ ಟೀಕಿಸಿದ್ದಾರೆ.