image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇಸ್ರೇಲಿಗರ ಬಂಧನಕ್ಕೆ ಯತ್ನಿಸಿದರೆ ಕಮಾಂಡೋ ದಾಳಿ: ನೇತನ್ಯಾಹು ಖಡಕ್ ಎಚ್ಚರಿಕೆ

ಇಸ್ರೇಲಿಗರ ಬಂಧನಕ್ಕೆ ಯತ್ನಿಸಿದರೆ ಕಮಾಂಡೋ ದಾಳಿ: ನೇತನ್ಯಾಹು ಖಡಕ್ ಎಚ್ಚರಿಕೆ

ಅಮೇರಿಕ : ಗಾಜಾದಲ್ಲಿ ಯುದ್ಧಾಪರಾಧ ನಡೆಸಿರುವ ಆರೋಪದ ಮೇಲೆ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಬಂಧನ ವಾರಂಟ್ ಹೊರಡಿಸಲು ಮುಂದಾಗಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ವಿದೇಶಿ ನೆಲದಲ್ಲಿ ಯಾವುದೇ ಇಸ್ರೇಲಿ ಪ್ರಜೆಯನ್ನು ಬಂಧಿಸಲು ಪ್ರಯತ್ನಿಸಿದರೆ, ಅವರ ರಕ್ಷಣೆಗೆ ತಮ್ಮ ದೇಶದ ಕಮಾಂಡೋಗಳನ್ನು ಕಳುಹಿಸುವುದಾಗಿ ಅವರು ನೇರ ಎಚ್ಚರಿಕೆ ನೀಡಿದ್ದಾರೆ.

ನ್ಯೂಯಾರ್ಕ್ ನಗರಕ್ಕೆ ನೇತನ್ಯಾಹು ಕಾಲಿಟ್ಟರೆ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದ ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮ್ದಾನಿ ಹಾಗೂ ನಗರಸಭೆ ಸದಸ್ಯೆ ಶಹಾನಾ ಹನೀಫ್ ಅವರ ಹೇಳಿಕೆಗಳ ಬೆನ್ನಲ್ಲೇ ನೇತನ್ಯಾಹು ಈ ವಾರ್ನಿಂಗ್ ನೀಡಿದ್ದಾರೆ. ಈ ಹೇಳಿಕೆಗಳು ಅಮೆರಿಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ವಿವಾದ ತೀವ್ರಗೊಳ್ಳುತ್ತಿದ್ದಂತೆ ಭಾರತೀಯ-ಉಗಾಂಡಾ ಮೂಲದ ಮಮ್ದಾನಿ ತಮ್ಮ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ತಮಗೆ ಯಾರನ್ನೂ ಬಂಧಿಸುವ ನೇರ ಅಧಿಕಾರವಿಲ್ಲ ಹಾಗೂ ಯಾವುದೇ ವ್ಯಕ್ತಿಯನ್ನು ಬಂಧಿಸುವ ಹಕ್ಕು ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ (NYPD) ಮಾತ್ರ ಇದೆ ಎಂದು ತಿಳಿಸುವ ಮೂಲಕ ಅವರು ತಮ್ಮ ಆರಂಭಿಕ ನಿಲುವಿನಿಂದ ಹಿಂದೆ ಸರಿದಿದ್ದಾರೆ.

ಗಾಜಾದಲ್ಲಿ ನಡೆದ ಯುದ್ಧದ ವೇಳೆ ಮಾನವೀಯತೆಯ ವಿರುದ್ಧ ಅಪರಾಧ ಎಸಗಲಾಗಿದೆ ಎಂಬ ಆರೋಪದ ಮೇಲೆ ಐಸಿಸಿ ಪ್ರಾಸಿಕ್ಯೂಟರ್ ನೇತನ್ಯಾಹು ವಿರುದ್ಧ ಬಂಧನ ವಾರಂಟ್ ಕೋರಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ವಾದ-ವಿವಾದಗಳಿಗೆ ಕಾರಣವಾಗಿದೆ. ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳು ಐಸಿಸಿಯ ಸದಸ್ಯತ್ವ ಹೊಂದಿಲ್ಲದಿರುವುದು ಹಾಗೂ ಪ್ಯಾಲೆಸ್ತೀನ್ ಐಸಿಸಿ ಸದಸ್ಯತ್ವ ಹೊಂದಿರುವುದರಿಂದ ಈ ವಾರಂಟ್‌ನ ಕಾನೂನಾತ್ಮಕ ಮಾನ್ಯತೆಯ ಕುರಿತು ಜಿಜ್ಞಾಸೆ ಎದುರಾಗಿದೆ. ಈ ತಾಂತ್ರಿಕ ಮತ್ತು ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ನೇತನ್ಯಾಹು ಸೇರಿದಂತೆ ಇಸ್ರೇಲ್‌ನ ಪ್ರಮುಖ ನಾಯಕರು ಐಸಿಸಿ ಕ್ರಮವನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ