image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕದ H-1B ವೀಸಾದಾರರಿಗೆ ಗ್ರೀನ್ ಕಾರ್ಡ್ ನೀಡಲು ಹೊಸ ಮಸೂದೆ ಸಲ್ಲಿಕೆ

ಅಮೆರಿಕದ H-1B ವೀಸಾದಾರರಿಗೆ ಗ್ರೀನ್ ಕಾರ್ಡ್ ನೀಡಲು ಹೊಸ ಮಸೂದೆ ಸಲ್ಲಿಕೆ

ವಾಷಿಂಗ್ಟನ್ : ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ-ವಿರೋಧಿ ನಿಯಮಗಳ ನಡುವೆಯೇ, ಅಮೆರಿಕದಲ್ಲಿ ದೀರ್ಘಕಾಲದಿಂದ ನೆಲೆಸಿರುವ ಲಕ್ಷಾಂತರ ವಲಸಿಗರಿಗೆ ನೆರವಾಗಲು ಡೆಮಾಕ್ರೆಟಿಕ್ ಸೆನೆಟರ್ ಅಲೆಕ್ಸ್ ಪಡಿಲ್ಲಾ ನೂತನ ಮಸೂದೆಯನ್ನು ಮಂಡಿಸಿದ್ದಾರೆ. ಈ ಪ್ರಸ್ತಾವನೆ ಕಾನೂನಾದರೆ ಭಾರತದ H-1B ವೀಸಾ ಹೊಂದಿರುವವರು ಸೇರಿದಂತೆ 80 ಲಕ್ಷಕ್ಕೂ ಹೆಚ್ಚು ಜನರಿಗೆ ಶಾಶ್ವತ ನಿವಾಸಿ ಸ್ಥಾನಮಾನ (ಗ್ರೀನ್ ಕಾರ್ಡ್) ಪಡೆಯಲು ದಾರಿ ಸುಗಮವಾಗಲಿದೆ. '1929ರ ವಲಸೆ ಕಾಯಿದೆಯ ನವೀಕರಣ' ಹೆಸರಿನ ಈ ಕಾಯಿದೆಯು ಅಮೆರಿಕದಲ್ಲಿ ಕನಿಷ್ಠ ಏಳು ವರ್ಷಗಳಿಂದ ನಿರಂತರವಾಗಿ ವಾಸಿಸುತ್ತಿರುವ ವಲಸಿಗರಿಗೆ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಮತ್ತು ಇತರ ಸಾಮಾನ್ಯ ಅರ್ಹತಾ ಮಾನದಂಡಗಳನ್ನು ಪೂರೈಸುವ ವಲಸಿಗರು ಇದರ ಲಾಭ ಪಡೆಯಬಹುದು.

ಕ್ಯಾಲಿಫೋರ್ನಿಯಾದ ಸೆನೆಟರ್ ಅಲೆಕ್ಸ್ ಪಡಿಲ್ಲಾ ಮಾತನಾಡಿ, 1986 ರಿಂದ ನವೀಕರಣಗೊಳ್ಳದ ಹಳೆಯ ವಲಸೆ ನಿಯಮವನ್ನು ಆಧುನೀಕರಿಸಲು ಈ ಪ್ರಸ್ತಾವನೆ ತರಲಾಗಿದೆ ಎಂದಿದ್ದಾರೆ. ಟ್ರಂಪ್ ಆಡಳಿತದ ವಲಸೆ ವಿರೋಧಿ ಅಭಿಯಾನದಿಂದಾಗಿ ಲಕ್ಷಾಂತರ ಕುಟುಂಬಗಳು ನಿರಂತರ ಭೀತಿಯಲ್ಲಿ ಬದುಕುತ್ತಿದ್ದು, ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತಿರುವ ವಲಸಿಗರಿಗೆ ನ್ಯಾಯಯುತ ಹಕ್ಕು ಸಿಗಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಮಸೂದೆಯು 'ಡ್ರೀಮರ್ಸ್', ತಾತ್ಕಾಲಿಕ ಸಂರಕ್ಷಿತ ಸ್ಥಾನಮಾನ (TPS) ಹೊಂದಿರುವವರು, ಅಗತ್ಯ ಸೇವಾ ಕಾರ್ಯಕರ್ತರು ಹಾಗೂ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಾಗಿ ವರ್ಷಗಳಿಂದ ಕಾಯುತ್ತಿರುವ H-1B ವೀಸಾ ಹೊಂದಿರುವ ಭಾರತೀಯ ವೃತ್ತಿಪರರಿಗೆ ಬಹುದೊಡ್ಡ ಆಸರೆಯಾಗಲಿದೆ. ಆದರೆ ರಿಪಬ್ಲಿಕನ್ ಪಕ್ಷದ ತೀವ್ರ ವಿರೋಧದ ನಡುವೆ ಈ ಮಸೂದೆ ಅಮೆರಿಕದ ಕಾಂಗ್ರೆಸ್‌ನಲ್ಲಿ ಅಂಗೀಕಾರಗೊಳ್ಳುವುದು ಸದ್ಯಕ್ಕೆ ಸವಾಲಿನ ಕೆಲಸವಾಗಿದೆ.

Category
ಕರಾವಳಿ ತರಂಗಿಣಿ