image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಅಮೆರಿಕ ದಾಳಿ ಸ್ಥಗಿತ: ಪ್ರತೀಕಾರದ ಕಾರ್ಯಾಚರಣೆ ನಿಲ್ಲಿಸಿದ ಇರಾನ್

ಅಮೆರಿಕ ದಾಳಿ ಸ್ಥಗಿತ: ಪ್ರತೀಕಾರದ ಕಾರ್ಯಾಚರಣೆ ನಿಲ್ಲಿಸಿದ ಇರಾನ್

ಟೆಹರಾನ್: ಅಮೆರಿಕ ತನ್ನ ಮೇಲಿನ ದಾಳಿಗಳನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳ ವಿರುದ್ಧ ನಡೆಸುತ್ತಿದ್ದ ಪ್ರತೀಕಾರದ ದಾಳಿಯನ್ನು ನಿಲ್ಲಿಸಿರುವುದಾಗಿ ಇರಾನ್ ಭಾನುವಾರ ತಿಳಿಸಿದೆ. "ನಮ್ಮ ಕಾರ್ಯತಂತ್ರವು ಮೂಲಭೂತವಾಗಿ ಪ್ರತೀಕಾರದ್ದಾಗಿತ್ತು. ಹೀಗಾಗಿ ಪ್ರತೀಕಾರದ ಕಾರ್ಯಾಚರಣೆಗಳನ್ನು ಪ್ರಸ್ತುತ ನಿಲ್ಲಿಸಿದ್ದೇವೆ" ಎಂದು ಇರಾನ್ ಸೇನಾ ವಕ್ತಾರ ಮೊಹಮ್ಮದ್ ಅಕ್ರಮಿನಿಯಾ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಸತತವಾಗಿ ನಡೆಸುತ್ತಿದ್ದ ಬಾಂಬ್ ದಾಳಿಗಳು ಈಗ ಸ್ವಲ್ಪ ನಿಂತಿರುವುದು ಈ ಭಾಗದಲ್ಲಿ ಮತ್ತೆ ಶಾಂತಿ ಮಾತುಕತೆಗಳು ಆರಂಭವಾಗಬಹುದು ಎಂಬ ಭರವಸೆಯನ್ನು ಮೂಡಿಸಿದೆ. ಆದರೆ, ದಾಳಿ ನಿಲ್ಲಲು ರಾಜತಾಂತ್ರಿಕ ಮಾತುಕತೆಗಳಿಗಿಂತ ಅಮೆರಿಕ ಬಳಿ ಇರುವ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರಗಳ ದಾಸ್ತಾನು ಕ್ಷೀಣಿಸುತ್ತಿರುವುದೇ ಪ್ರಮುಖ ಕಾರಣ ಇರಬಹುದು ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ. ಶಸ್ತ್ರಾಸ್ತ್ರ ಪೂರೈಕೆ ಕುಸಿಯುತ್ತಿರುವುದರಿಂದ ಸೇನಾ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದ್ದರೆ, ಇರಾನ್ ವಿರುದ್ಧದ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ ಎಂದು ರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ವರದಿ ಮಾಡಿದೆ.

ಇದಕ್ಕೂ ಮುನ್ನ ಶುಕ್ರವಾರವಷ್ಟೇ ಇರಾನ್ ಮೇಲೆ ಹೆಚ್ಚಿನ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ವಾಷಿಂಗ್ಟನ್‌ಗೆ ಭೇಟಿ ನೀಡಲಿದ್ದು, ಒಂದು ವೇಳೆ ಅಮೆರಿಕ ಮತ್ತೆ ದಾಳಿಯನ್ನು ಪುನರಾರಂಭಿಸಿದರೆ ಯುದ್ಧ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಇರಾನ್ ಸೇನೆ ಭಾನುವಾರ ಎಚ್ಚರಿಸಿದೆ. ಇನ್ನೊಂದೆಡೆ, ಯೆಮೆನ್‌ನ ವಾಯವ್ಯ ಪ್ರದೇಶದಲ್ಲಿ ಸೌದಿ ಅರೇಬಿಯಾದ ಡ್ರೋನ್ ಒಂದನ್ನು ಹೊಡೆದುರುಳಿಸಿರುವುದಾಗಿ ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಭಾನುವಾರ ಹೇಳಿದ್ದಾರೆ. ಜೊತೆಗೆ, ಕಳೆದ 24 ಗಂಟೆಗಳಲ್ಲಿ ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ದಾಟಲು ಯತ್ನಿಸುತ್ತಿದ್ದ ಆರು ಹಡಗುಗಳನ್ನು ಇರಾನ್‌ನ ಸಶಸ್ತ್ರ ಪಡೆಗಳು ತಡೆದಿವೆ ಎಂದು ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ