image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

'ನ್ಯೂಯಾರ್ಕ್‌ಗೆ ಬಂದೇ ಬರುತ್ತೇನೆ': ಮೇಯರ್ ಮಮ್ದಾನಿಗೆ ಬೆಂಜಮಿನ್ ನೆತನ್ಯಾಹು ತಿರುಗೇಟು

'ನ್ಯೂಯಾರ್ಕ್‌ಗೆ ಬಂದೇ ಬರುತ್ತೇನೆ': ಮೇಯರ್ ಮಮ್ದಾನಿಗೆ ಬೆಂಜಮಿನ್ ನೆತನ್ಯಾಹು ತಿರುಗೇಟು

ನ್ಯೂಯಾರ್ಕ್ : ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರ ತೀವ್ರ ವಿರೋಧ ಹಾಗೂ ಎಚ್ಚರಿಕೆಯ ನಡುವೆಯೂ, ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಾವು ನ್ಯೂಯಾರ್ಕ್‌ಗೆ ಆಗಮಿಸುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಹೊರಡಿಸಿರುವ ಬಂಧನ ವಾರಂಟ್‌ನಂತೆ ಅಮೆರಿಕದ ಫೆಡರಲ್ ಸರ್ಕಾರ ನೆತನ್ಯಾಹು ಅವರನ್ನು ಬಂಧಿಸಬೇಕು ಎಂದು ಮೇಯರ್ ಜೊಹ್ರಾನ್ ಮಮ್ದಾನಿ ಆಗ್ರಹಿಸಿದ್ದರು. ನೆತನ್ಯಾಹು ಒಬ್ಬ ಯುದ್ಧಾಪರಾಧಿ ಹಾಗೂ ಪ್ಯಾಲೆಸ್ಟೀನ್ ನಾಗರಿಕರ ವಿರುದ್ಧ ನಡೆದ ಜನಾಂಗೀಯ ನರಮೇಧದ ಸೂತ್ರಧಾರಿ ಎಂದು ಆಪಾದಿಸಿದ್ದ ಅವರು, 73 ಸಾವಿರಕ್ಕೂ ಅಧಿಕ ಜನರ ಸಾವಿಗೆ ಹಾಗೂ ಸಹಸ್ರಾರು ಮಕ್ಕಳ ವೈಕಲ್ಯಕ್ಕೆ ನೆತನ್ಯಾಹು ಹೊಣೆಗಾರರು ಎಂದಿದ್ದರು. ಒಂದು ವೇಳೆ ನೆತನ್ಯಾಹು ನ್ಯೂಯಾರ್ಕ್‌ಗೆ ಭೇಟಿ ನೀಡಿದರೆ ಅವರನ್ನು ಬಂಧಿಸಲು ನಗರಾಡಳಿತಕ್ಕೆ ಕಾನೂನಾತ್ಮಕ ಅಧಿಕಾರವಿಲ್ಲದಿದ್ದರೂ, ನಗರದ ಪರವಾಗಿ ಅವರನ್ನು ಸ್ವಾಗತಿಸುವುದಿಲ್ಲ ಎಂದು ಮಮ್ದಾನಿ ತಿಳಿಸಿದ್ದರು.

ಈ ಹೇಳಿಕೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ನೆತನ್ಯಾಹು, "ಇಸ್ರೇಲ್-ಅಮೆರಿಕ ನಡುವಿನ ಬಾಂಧವ್ಯ ಮತ್ತು ಈ ಯಹೂದಿ ಮಣ್ಣಿನ ಸತ್ಯವನ್ನು ಜಗತ್ತಿಗೆ ಸಾರಲು ನಾನು ನ್ಯೂಯಾರ್ಕ್‌ಗೆ ಬಂದೇ ಬರುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಸವಾಲು ಎಸೆದಿದ್ದಾರೆ. ಮುಂದುವರಿದು, ಮೇಯರ್ ಮಮ್ದಾನಿ ಅವರು ನಗರದಲ್ಲಿ ಯಹೂದಿಗಳ ವಿರುದ್ಧ ದ್ವೇಷ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ನೆತನ್ಯಾಹು ಆರೋಪಿಸಿದ್ದಾರೆ. ಇತ್ತೀಚೆಗೆ ಪ್ರಾರ್ಥನಾ ಮಂದಿರದ (ಸಿನಗಾಗ್) ಹೊರಗೆ ಯಹೂದಿ ವ್ಯಕ್ತಿಯೊಬ್ಬನ ಮೇಲೆ ನಡೆದ ಹಲ್ಲೆಗೆ ಮೇಯರ್ ಅವರ ಭಾಷಣವೇ ಪ್ರಚೋದನೆ ಎಂದು ಆಪಾದಿಸಿದ ಅವರು, "ಅಕ್ಟೋಬರ್ 7ರಂದು ಇಸ್ರೇಲ್ ನಾಗರಿಕರ ಮೇಲೆ ನಡೆದ ಭೀಕರ ಹತ್ಯಾಕಾಂಡವನ್ನು ಬೆಂಬಲಿಸುವ ವ್ಯಕ್ತಿಗಳಿಂದ ನಾನು ಪಾಠ ಕಲಿಯಬೇಕಿಲ್ಲ. ನೈಜ ಯುದ್ಧ ಅಪರಾಧಿಗಳು ಹಮಾಸ್ ಉಗ್ರರೇ ಹೊರತು ನಾವಲ್ಲ" ಎಂದು ಖಾರವಾಗಿ ಕಿಡಿಕಾರಿದ್ದಾರೆ.

Category
ಕರಾವಳಿ ತರಂಗಿಣಿ