image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಫಿಫಾ ವಿಶ್ವಕಪ್ ಸಮಾರೋಪದಲ್ಲಿ ಟ್ರಂಪ್ ಹಂಗಾಮಾ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಫಿಫಾ ವಿಶ್ವಕಪ್ ಸಮಾರೋಪದಲ್ಲಿ ಟ್ರಂಪ್ ಹಂಗಾಮಾ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ನ್ಯೂಯಾರ್ಕ್ : ಮೆಟ್‌ಲೈಫ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ 2026ರ ರೋಮಾಂಚಕ ಫೈನಲ್ ಹಣಾಹಣಿಯಲ್ಲಿ ಸ್ಪೇನ್ ತಂಡವು ಅರ್ಜೆಂಟಿನಾವನ್ನು 1-0 ಅಂತರದಿಂದ ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸುಮಾರು 80,000 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಪ್ತ ಗೆಳೆಯ ಹಾಗೂ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಅವರೊಂದಿಗೆ ಕುಳಿತು ವೀಕ್ಷಿಸಿದರು. ಆದರೆ, ಪಂದ್ಯದ ಮುಕ್ತಾಯದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿಚಿತ್ರ ವರ್ತನೆ ಈಗ ಇಡೀ ಜಗತ್ತಿನಲ್ಲಿ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿದೆ.

ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಚಾರದ ಹಪಾಹಪಿ ಜಾಸ್ತಿ ಎನ್ನುವುದನ್ನು ಸಾಬೀತುಪಡಿಸುವ ಮತ್ತೊಂದು ಘಟನೆ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜರುಗಿದೆ. ಸ್ಪೇನ್ ತಂಡ ಚಾಂಪಿಯನ್ ಪಟ್ಟಕ್ಕೇರಿ ವೇದಿಕೆಯ ಮೇಲೆ ಟ್ರೋಫಿ ಪಡೆದು ಸಂಭ್ರಮಾಚರಣೆ ಮಾಡುವಾಗ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಸ್ಪೇನ್ ನಾಯಕ ರೋಡ್ರಿಗೆ ವಿಶ್ವಕಪ್ ಟ್ರೋಫಿ ಹಸ್ತಾಂತರಿಸಿದ ಮೇಲೆಯೂ ಕ್ಯಾಮೆರಾ ಫ್ರೇಮ್‌ನಿಂದ ಹೊರಹೋಗದೆ ಅಲ್ಲಿಯೇ ಕಾಲಹರಣ ಮಾಡಲು ಯತ್ನಿಸಿದರು. ವೇದಿಕೆಯಲ್ಲಿ ಸ್ಪೇನ್ ಆಟಗಾರರೊಂದಿಗೆ ತಾವೂ ಒಂದಾಗಿ ಸಂಭ್ರಮಿಸಲು ಟ್ರಂಪ್ ಬಯಸಿದಂತೆ ಕಂಡಿದ್ದು, ಅವರ ಉಪಸ್ಥಿತಿಯಿಂದ ಸ್ಪೇನ್ ನಾಯಕ ರೋಡ್ರಿ ತೀವ್ರ ಮುಜುಗರ ಅನುಭವಿಸಿದರು. ಆಚರಣೆಗೆ ಜಾಗ ಬಿಟ್ಟುಕೊಡುವಂತೆ ರೋಡ್ರಿ ಸೂಕ್ಷ್ಮವಾಗಿ ಪಕ್ಕಕ್ಕೆ ಜರುಗುವಂತೆ ಸನ್ನೆ ಮಾಡಿದರೂ ಹಾಗೂ ವಿನಂತಿಸಿ ಪಕ್ಕಕ್ಕೆ ತಳ್ಳಿದರೂ ಟ್ರಂಪ್ ಅಲ್ಲಿಂದ ಕದಲಲಿಲ್ಲ. ಇದು ಸ್ಪೇನ್ ತಂಡದ ಚಾಂಪಿಯನ್ ಸಂಭ್ರಮವನ್ನು ತುಸು ತಡೆಹಿಡಿಯುವಂತೆ ಮಾಡಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ, ಕೊನೆಗೆ ಟ್ರಂಪ್ ಅವರ ಕೈಹಿಡಿದು ವೇದಿಕೆಯ ಮೂಲೆಗೆ ಕರೆದೊಯ್ಯಬೇಕಾಯಿತು. ಆದಾಗ್ಯೂ, ಸಂಪೂರ್ಣವಾಗಿ ವೇದಿಕೆಯಿಂದ ನಿರ್ಗಮಿಸಲು ನಿರಾಕರಿಸಿದ ಟ್ರಂಪ್, ಸ್ಪೇನ್‌ನ ಕೊನೆಯ ಆಟಗಾರನ ಪಕ್ಕದಲ್ಲೇ ನಿಂತು ಕ್ಯಾಮೆರಾಗೆ ಪೋಸ್ ನೀಡಲು ಯತ್ನಿಸಿದ ವಿಚಿತ್ರ ಪ್ರಸಂಗ ಜರುಗಿತು.

ಇದರ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮತ್ತೊಂದು ವಿಡಿಯೋ ಕ್ರೀಡಾಭಿಮಾನಿಗಳಲ್ಲಿ ಭಾರಿ ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ರನ್ನರ್ಸ್ ಅಪ್ ಪದಕ ಸ್ವೀಕರಿಸುವ ವೇಳೆ ಅರ್ಜೆಂಟೀನಾದ ರಕ್ಷಣಾತ್ಮಕ ಆಟಗಾರ ಕ್ರಿಸ್ಟಿಯನ್ ರೊಮೆರೊ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಹಸ್ತಲಾಘವ (ಹ್ಯಾಂಡ್‌ಶೇಕ್) ನಡೆದಿಲ್ಲ. ರೊಮೆರೊ ಅವರು ಟ್ರಂಪ್ ಅವರ ಎದುರಲ್ಲೇ ಇದ್ದರೂ ಅವರನ್ನು ಗಮನಿಸದಂತೆ ನೇರವಾಗಿ ಮುಂದೆ ಸಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

Category
ಕರಾವಳಿ ತರಂಗಿಣಿ