image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಇರಾನ್ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿದ ಸಂಘರ್ಷ

ಇರಾನ್ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ: ಮಧ್ಯಪ್ರಾಚ್ಯದಲ್ಲಿ ಉಲ್ಬಣಿಸಿದ ಸಂಘರ್ಷ

ಜೋರ್ಡಾನ್‌ : ಜೋರ್ಡಾನ್‌ನಲ್ಲಿ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳಲ್ಲಿ ಇಬ್ಬರು ಅಮೆರಿಕ ಸೈನಿಕರು ಮೃತಪಟ್ಟ ಕೆಲವೇ ಗಂಟೆಗಳಲ್ಲಿ, ಅಮೆರಿಕ ಸೇನೆಯು ಇರಾನ್ ಮೇಲೆ ಪ್ರತಿಕಾರವಾಗಿ ತೀವ್ರ ವೈಮಾನಿಕ ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ಆದೇಶದ ಮೇರೆಗೆ ಈ ಮಿಲಿಟರಿ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜೋರ್ಡಾನ್ ದಾಳಿಯ ಘಟನೆಯಲ್ಲಿ ಮತ್ತೊಬ್ಬ ಅಮೆರಿಕ ಸೈನಿಕ ನಾಪತ್ತೆಯಾಗಿದ್ದು, ಗಾಯಗೊಂಡಿದ್ದ ಇತರ ನಾಲ್ಕು ಸೈನಿಕರನ್ನು ಜೋರ್ಡನ್‌ನ ಆಸ್ಪತ್ರೆಗಳಿಂದ ಚಿಕಿತ್ಸೆಯ ಬಳಿಕ ಬಿಡುಗಡೆ ಮಾಡಲಾಗಿದೆ. ಮೃತರಾದ ಇಬ್ಬರು ಸೈನಿಕರ ಗುರುತನ್ನು ಅವರ ಕುಟುಂಬ ಸದಸ್ಯರಿಗೆ ಅಧಿಕೃತವಾಗಿ ಮಾಹಿತಿ ನೀಡುವವರೆಗೆ ಬಹಿರಂಗಪಡಿಸಲಾಗುವುದಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.

ವಿಶ್ವದ ಒಟ್ಟು ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗದಷ್ಟು ಸಾಗಣೆಯಾಗುವ ಪ್ರಮುಖ ಸಮುದ್ರ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಪ್ರದೇಶವೇ ಪ್ರಸ್ತುತ ಸಂಘರ್ಷದ ಪ್ರಮುಖ ಕೇಂದ್ರ ಬಿಂದುವಾಗಿದೆ. ಈ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ಇರಾನ್ ಒಡ್ಡಬಹುದಾದ ಬೆದರಿಕೆಯನ್ನು ಹತ್ತಿಕ್ಕುವುದು ಹಾಗೂ ಜೋರ್ಡಾನ್‌ನಲ್ಲಿ ಅಮೆರಿಕ ಸೈನಿಕರ ಮೇಲೆ ದಾಳಿ ನಡೆಸಿದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳಿಗೆ ತ್ವರಿತವಾಗಿ ಶಿಕ್ಷೆ ನೀಡುವುದು ತಮ್ಮ ದಾಳಿಯ ಮುಖ್ಯ ಉದ್ದೇಶ ಎಂದು ಸೆಂಟ್ ಕಾಮ್ ತಿಳಿಸಿದೆ. ಇರಾನ್‌ನೊಂದಿಗಿನ ಸಂಘರ್ಷ ತೀವ್ರಗೊಂಡ ಬಳಿಕ ಅಮೆರಿಕ ಸೇನೆಯಲ್ಲಿ ಸಂಭವಿಸಿದ ಮೊದಲ ದೃಢಪಟ್ಟ ಸಾವುಗಳು ಇವುಗಳಾಗಿದ್ದು, ಸೈನಿಕರ ತ್ಯಾಗವು ವಾಷಿಂಗ್ಟನ್‌ನ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹೇಳಿದ್ದಾರೆ.

ಇತ್ತ ಅಮೆರಿಕದ ಸೇನೆ ನಡೆಸಿದ ವೈಮಾನಿಕ ದಾಳಿಗಳು ಇರಾನ್‌ನ ದಕ್ಷಿಣ ಬಂದರು ನಗರವಾದ ಸಿರಿಕ್ ಸಮೀಪದ ಪ್ರದೇಶಗಳು, ಹಾಜಿಯಾಬಾದ್ ಹಾಗೂ ಹೋರ್ಮೊಜ್ಗಾನ್ ಪ್ರಾಂತ್ಯದ ಕೇಶ್ಮ್ ದ್ವೀಪದ ಮೇಲೂ ಅಪ್ಪಳಿಸಿವೆ ಎಂದು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈವರೆಗೆ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಥಳೀಯ ಗವರ್ನರ್ ತಿಳಿಸಿದ್ದಾರೆ. ಕಳೆದ ವಾರ ಉಭಯ ದೇಶಗಳ ನಡುವಿನ ಕದನ ವಿರಾಮ ವಿಫಲವಾದ ಬಳಿಕ ಪರಸ್ಪರ ದಾಳಿಗಳು ತೀವ್ರಗೊಂಡಿದ್ದು, ಪ್ರಸ್ತುತ ಪರಿಸ್ಥಿತಿಯು ಇಡೀ ಮಧ್ಯಪ್ರಾಚ್ಯ ಪ್ರದೇಶಕ್ಕೆ ಯುದ್ಧದ ಆತಂಕವನ್ನು ವಿಸ್ತರಿಸಿದೆ.

ಅಮೆರಿಕದೊಂದಿಗಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸ್ಪಷ್ಟ ಸೂಚನೆಯನ್ನು ಇರಾನ್ ನೀಡಿದೆ. ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ 'ಮರೆಯಲಾಗದ ಪಾಠ' ಕಲಿಸಲಾಗುವುದು ಎಂದು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ಎರಡೂ ದೇಶಗಳ ನಡುವಿನ ತಿಳಿವಳಿಕೆ ಒಪ್ಪಂದವನ್ನು ಅಮೆರಿಕ ಪದೇಪದೆ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಖಮೇನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿ ಸಂಪೂರ್ಣವಾಗಿ ನಿಷ್ಪ್ರಯೋಜಕ ಮತ್ತು ವಿಶ್ವಾಸಾರ್ಹತೆಯಿಲ್ಲದ್ದು ಎಂದು ಜರೆದಿದ್ದಾರೆ. ಮತ್ತೊಂದೆಡೆ, ಇರಾನ್ ಸಂಸತ್ತಿನ ರಾಷ್ಟ್ರ ಭದ್ರತಾ ಆಯೋಗದ ಮುಖ್ಯಸ್ಥ ಎಬ್ರಾಹಿಂ ಅಜೀಜಿ ಮಾತನಾಡಿ, ಸರ್ವೋಚ್ಚ ನಾಯಕರ ಎಚ್ಚರಿಕೆಯನ್ನು ಅಮೆರಿಕ ಅರ್ಥಮಾಡಿಕೊಂಡಿದ್ದರೆ, ಅಲ್ಲಿನ ಸೈನಿಕರು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಈ ಪ್ರದೇಶದಿಂದ ಪರಾರಿಯಾಗಲಿದ್ದಾರೆ ಎಂದು ಗುಡುಗಿದ್ದಾರೆ.

ಸದ್ಯ ಉಭಯ ದೇಶಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು, ಹೊರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಪಡೆಯಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯೀ ದೂರಿದ್ದಾರೆ. ಇದಕ್ಕೆ ಪ್ರತಿಯಾಗಿ, ಇರಾನ್ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಒಡ್ಡುತ್ತಿದ್ದು ಜಲಸಂಧಿಯ ಸಾಗಣೆಯನ್ನು ನಿಯಂತ್ರಿಸಲು ಯತ್ನಿಸುತ್ತಿದೆ ಎಂದು ಅಮೆರಿಕ ಪ್ರತಿಪಾದಿಸಿದೆ. ಈ ನಡುವೆ ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷಕ್ಕೆ ತಕ್ಷಣವೇ ಅಂತ್ಯ ಹಾಡಿ, ಎಲ್ಲರೂ ಮಾತುಕತೆ ಮತ್ತು ಸಂಧಾನದ ಹಾದಿಗೆ ಮರಳಬೇಕು ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕರೆ ನೀಡಿದೆ. ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಯುಎಇ ವಿದೇಶಾಂಗ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.

Category
ಕರಾವಳಿ ತರಂಗಿಣಿ