ಮಧ್ಯಪ್ರಾಚ್ಯ : ಅಮೆರಿಕ ಮತ್ತು ಇರಾನ್ ನಡುವಿನ ದ್ವೇಷದ ಪರಾಕಾಷ್ಠೆ ಮತ್ತೊಮ್ಮೆ ತಾರಕಕ್ಕೇರಿದ್ದು, ಆಧುನಿಕ ಮಾನವ ಇತಿಹಾಸದಲ್ಲೇ ಅತ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೇನು ಯುದ್ಧ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ, ಎರಡೂ ರಾಷ್ಟ್ರಗಳು ಮತ್ತೆ ಪರಸ್ಪರರ ವಿರುದ್ಧ ಬಂದೂಕನ್ನು ಹೆಗಲೇರಿಸಿಕೊಂಡಿವೆ. ಇರಾನ್‌ನ ಹಲವು ಸ್ಥಳಗಳ ಮೇಲೆ ರಾತ್ರಿಯಿಡೀ ಅಮೆರಿಕ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕದ ಮಿಲಿಟರಿ ವಿಮಾನಗಳನ್ನು ಗುರಿಯಾಗಿಸಿಕೊಂಡು ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಅಮೆರಿಕದ ಹಲವು ಫೈಟರ್ ಜೆಟ್‌ಗಳು ಮತ್ತು ಇಂಧನ ತುಂಬಿಸುವ ವಿಮಾನಗಳು ನಾಶವಾಗಿರುವುದಾಗಿ ಇರಾನ್‌ನ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ (ಐಆರ್‌ಜಿಸಿ) ಪ್ರತಿಪಾದಿಸಿದೆ. ಆದರೆ ಜೋರ್ಡಾನ್ ಸೇನೆಯು ಮೂರು ಇರಾನ್ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದ್ದು, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಇಸ್ಲಾಮಿಕ್ ವಿರೋಧಿ ಅಮೆರಿಕನ್ನರ ಹಿತಾಸಕ್ತಿಗಳನ್ನು ಕಾಪಾಡುವವರ ವಿರುದ್ಧ ಹೋರಾಡುವಂತೆ ಜೋರ್ಡಾನ್ ಜನರಿಗೆ ಐಆರ್‌ಜಿಸಿ ಕರೆ ನೀಡಿದೆ.
ಕೇವಲ ಜೋರ್ಡಾನ್ ಮಾತ್ರವಲ್ಲದೇ ಸಿರಿಯಾದ ಅಲ್-ಟಾನ್ಫ್‌ನಲ್ಲಿರುವ ಅಮೆರಿಕದ ವಿಶೇಷ ಕಾರ್ಯಾಚರಣೆಗಳ ಕಮಾಂಡ್ ಸೆಂಟರ್ ಮೇಲೂ ಇರಾನ್‌ನ ಐಆರ್‌ಜಿಸಿ ಪಡೆಗಳು ದಾಳಿ ನಡೆಸಿವೆ ಎನ್ನಲಾಗಿದೆ. ಆದರೆ ಈ ದಾಳಿಯ ಬಗ್ಗೆ ಸಿರಿಯಾ ಸರ್ಕಾರವಾಗಲಿ ಅಥವಾ ಅಮೆರಿಕದ ಸೇನೆಯಾಗಲಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದೇ ರೀತಿ ಕತಾರ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಯುಎಸ್-ಮಿತ್ರ ರಾಷ್ಟ್ರಗಳ ವಿರುದ್ಧ ಟೆಹ್ರಾನ್ ತನ್ನ ಹೊಸ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದೆ. ಕುವೈತ್‌ನಲ್ಲಿ ವಿದ್ಯುತ್ ಮತ್ತು ಉಪ್ಪುನೀರಿನ ಸಂಸ್ಕರಣಾ ಘಟಕವನ್ನು ಇರಾನ್ ಕ್ಷಿಪಣಿಗಳು ಹಾನಿಗೊಳಿಸಿವೆ. ಆದರೆ ತಾನು ಕೇವಲ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಮಾತ್ರ ದಾಳಿ ಮಾಡುತ್ತಿರುವುದಾಗಿ ಐಆರ್‌ಜಿಸಿ ಸ್ಪಷ್ಟನೆ ನೀಡಿದೆ. ಇರಾನ್ ದಾಳಿಯಿಂದ ತನ್ನ ಸೇನಾ ನೆಲೆಗಳಿಗೆ ಆದ ಹಾನಿಯ ಬಗ್ಗೆ ಅಮೆರಿಕ ಯಾವುದೇ ಅಧಿಕೃತ ಹೇಳಿಕೆಯನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಅಲ್ಲದೆ, ಜೋರ್ಡಾನ್ ಮಿಲಿಟರಿ ನೆಲೆಯಲ್ಲಿ ಫೈಟರ್ ಜೆಟ್‌ಗಳ ನಾಶದ ಪ್ರತಿಪಾದನೆಗೂ ಅಮೆರಿಕ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇರಾನ್ ಮಾತ್ರ ಪ್ರತೀಕಾರದ ದಾಳಿಗಳನ್ನು ಮುಂದಿನ ದಿನಗಳಲ್ಲೂ ಮುಂದುವರೆಸುವುದಾಗಿ ಎಚ್ಚರಿಸಿದೆ.