ಪ್ಯಾರಿಸ್ : ಒಂದು ಕಾಲದಲ್ಲಿ 'ಅಣುಶಕ್ತಿಯ ಮಹಾಶಕ್ತಿ' ಎಂದು ಜಗತ್ತಿನಾದ್ಯಂತ ಗುರುತಿಸಿಕೊಂಡಿದ್ದ ಫ್ರಾನ್ಸ್, ಇಂದು ಪ್ರಕೃತಿಯ ಮುನಿಸಿಗೆ ಅಸಹಾಯಕವಾಗಿ ನಿಂತಿದೆ. ದೇಶದ ವಿದ್ಯುತ್ ವ್ಯವಸ್ಥೆಯ ಜೀವನಾಡಿಯಾಗಿರುವ ಅಣು ವಿದ್ಯುತ್ ಸ್ಥಾವರಗಳೇ ತೀವ್ರ ಬಿಸಿಗಾಳಿಯ ಒತ್ತಡಕ್ಕೆ ಮಣಿದು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾದ ಅಭೂತಪೂರ್ವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಫ್ರಾನ್ಸ್‌ನ ಸಮಸ್ಯೆಯಲ್ಲ, ಬದಲಿಗೆ ಹವಾಮಾನ ಬದಲಾವಣೆಯು ಜಾಗತಿಕ ಇಂಧನ ವ್ಯವಸ್ಥೆಯನ್ನು ಹೇಗೆ ದೊಡ್ಡ ಸವಾಲಿಗೆ ದೂಡುತ್ತಿದೆ ಎಂಬುದರ ಎಚ್ಚರಿಕೆಯ ಸಂಕೇತವಾಗಿದೆ.
ಪ್ರಸ್ತುತ ಫ್ರಾನ್ಸ್‌ನಲ್ಲಿ ಮೂರನೇ ಬಾರಿಗೆ ಅಪ್ಪಳಿಸಿರುವ ಭೀಕರ ಬಿಸಿಗಾಳಿಯಿಂದಾಗಿ ಗೋಲ್ಫೆಕ್, ಬುಗೆ ಮತ್ತು ಚೂಜ್ ಅಣು ವಿದ್ಯುತ್ ಸ್ಥಾವರಗಳ ಮೂರು ಪ್ರಮುಖ ರಿಯಾಕ್ಟರ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರೊಂದಿಗೆ ಇನ್ನು ಎಂಟು ರಿಯಾಕ್ಟರ್‌ಗಳು ಅತ್ಯಂತ ಕಡಿಮೆ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ವಿಶೇಷವೆಂದರೆ, ಈ ಸ್ಥಗಿತಕ್ಕೆ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ, ಬದಲಿಗೆ ಪರಿಸರ ಮತ್ತು ಜಲಚರಗಳನ್ನು ರಕ್ಷಿಸುವ ಅನಿವಾರ್ಯತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಅಣು ವಿದ್ಯುತ್ ಸ್ಥಾವರಗಳು ಕಾರ್ಯನಿರ್ವಹಿಸುವಾಗ ಅಪಾರ ಪ್ರಮಾಣದ ಶಾಖ ಉತ್ಪತ್ತಿಯಾಗುತ್ತದೆ. ಅದನ್ನು ತಂಪಾಗಿಡಲು ನದಿಗಳ ನೀರನ್ನು ಬಳಸಲಾಗುತ್ತದೆ. ಆದರೆ ಈಗಾಗಲ್ಲೇ ತೀವ್ರ ಬಿಸಿಯಿಂದಾಗಿ ನದಿಗಳ ನೀರಿನ ತಾಪಮಾನವು ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಾವರಗಳಿಂದ ಮತ್ತಷ್ಟು ಬಿಸಿ ನೀರನ್ನು ನದಿಗೆ ಬಿಟ್ಟರೆ, ಜಲಚರ ಜೀವಿಗಳು ಹಾಗೂ ಇಡೀ ನದಿ ಪರಿಸರ ವ್ಯವಸ್ಥೆ ಸಂಪೂರ್ಣ ನಾಶವಾಗಬಹುದು. ಹೀಗಾಗಿ, ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಿಯಾಕ್ಟರ್‌ಗಳನ್ನು ಆಫ್ ಮಾಡಲಾಗಿದೆ. ವಿಶ್ವದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ದೇಶವೂ ಪ್ರಕೃತಿಯ ಮುಂದೆ ಎಷ್ಟು ಅಸಹಾಯಕವಾಗಬಹುದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ.
ಈ ಭೀಕರ ಬಿಸಿಗಾಳಿಯ ಪರಿಣಾಮವಾಗಿ ಫ್ರಾನ್ಸ್‌ನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಗರಿಷ್ಠ ಮಟ್ಟದ ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಕೆಲವು ಭಾಗಗಳಲ್ಲಿ ತಾಪಮಾನವು 41 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆಯಿದ್ದು, ಸುಮಾರು 2.5 ಕೋಟಿ ಜನರು ಇದರ ನೇರ ಪರಿಣಾಮ ಎದುರಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದ್ದು, ಕ್ರೀಡಾಕೂಟಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ. ಕಾಳ್ಗಿಚ್ಚು ಮತ್ತು ನೀರಿನಲ್ಲಿ ಮುಳುಗಿ ಮೃತಪಡುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ.
ಒಂದು ಕಾಲದಲ್ಲಿ ಸದಾ ಚಳಿಗಾಲಕ್ಕೆ ಹೆಸರಾಗಿದ್ದ ಯುರೋಪಿಯನ್ ದೇಶಗಳು ಇಂದು ಧಗಧಗಿಸುವ ಬೇಸಿಗೆಯ ಬಿಸಿಗೆ ಬೆಂದು ಹೋಗುತ್ತಿವೆ. ಫ್ರಾನ್ಸ್‌ನಲ್ಲಿ ಅಣು ರಿಯಾಕ್ಟರ್‌ಗಳ ಈ ಸ್ಥಗಿತವು ಭವಿಷ್ಯದಲ್ಲಿ ಇಂಧನ ಭದ್ರತೆ, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ನಡುವೆ ಸಮತೋಲನ ಸಾಧಿಸುವುದು ಜಗತ್ತಿಗೆ ಎಷ್ಟು ದೊಡ್ಡ ಸವಾಲಾಗಲಿದೆ ಎಂಬುದಕ್ಕೆ ತಜ್ಞರು ನೀಡಿದ ಎಚ್ಚರಿಕೆಯ ಗಂಟೆಯಾಗಿದೆ.