ಮ್ಯಾನ್ಮಾರ್ : ಮ್ಯಾನ್ಮಾರ್‌ನ ಸಂಘರ್ಷ ಪೀಡಿತ ರಾಖೈನ್ ರಾಜ್ಯದಿಂದ ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಬಂಗಾಳಕೊಲ್ಲಿಯಲ್ಲಿ ಮುಳುಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 500ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಭೀಕರ ಘಟನೆ ಸಂಭವಿಸಿದೆ. ಈ ದುರಂತದ ಕುರಿತು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (IOM) ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (UNHCR) ಜಂಟಿ ಹೇಳಿಕೆ ಬಿಡುಗಡೆ ಮಾಡಿ ತೀವ್ರ ಕಳವಳ ವ್ಯಕ್ತಪಡಿಸಿವೆ. ಜೂನ್ ಅಂತ್ಯದಲ್ಲಿ ಮ್ಯಾನ್ಮಾರ್‌ನಿಂದ ಹೊರಟಿದ್ದ ಈ ದೋಣಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ರೋಹಿಂಗ್ಯಾ ನಿರಾಶ್ರಿತರ ಪೈಕಿ ಕೆಲವರು ಬಾಂಗ್ಲಾದೇಶದ ಗಡಿಯಾಚೆಗಿನ ನಿರಾಶ್ರಿತರ ಶಿಬಿರಗಳಿಂದಲೂ ಪ್ರಯಾಣ ಬೆಳೆಸಿದ್ದರು ಎಂದು ವರದಿಯಾಗಿದೆ. ಸುಮಾರು 250 ಪ್ರಯಾಣಿಕರಿದ್ದ ಮೊದಲ ಹಡಗು ಹೊರಟ ಕೆಲವೇ ದಿನಗಳಲ್ಲಿ ಸಂಪರ್ಕ ಕಳೆದುಕೊಂಡಿದ್ದರೆ, 280ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ದಿದ್ದ ಎರಡನೇ ಹಡಗು ಜುಲೈ 8 ರಂದು ಮ್ಯಾನ್ಮಾರ್‌ನ ಅಯೆಯರ್‌ವಾಡಿ ಕರಾವಳಿಯ ಸಮೀಪ ಮುಳುಗಿದೆ. ಈ ದುರಂತದಲ್ಲಿ ಎರಡು ಹಡಗುಗಳಲ್ಲಿದ್ದ ಬಹುತೇಕರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದ್ದು, ಜೀವಹಾನಿಯ ಅಧಿಕೃತ ದೃಢೀಕರಣ ಇನ್ನೂ ಬಾಕಿ ಇದೆ.
ಸಾಮಾನ್ಯವಾಗಿ ರೋಹಿಂಗ್ಯಾಗಳು ಮಳೆಗಾಲದಲ್ಲಿ ಸಮುದ್ರ ಮಾರ್ಗದ ಅಪಾಯಕಾರಿ ಪ್ರಯಾಣವನ್ನು ತಪ್ಪಿಸುತ್ತಾರೆ. ಆದರೆ ಪ್ರಸ್ತುತ ಈ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹ ಹಾಗೂ ಮ್ಯಾನ್ಮಾರ್‌ನಲ್ಲಿನ ಮಿಲಿಟರಿ ದಮನ ಮತ್ತು ಆಂತರಿಕ ಸಂಘರ್ಷದಿಂದ ತಪ್ಪಿಸಿಕೊಳ್ಳಲು ಹವಾಮಾನದ ಕಠಿಣ ಪರಿಸ್ಥಿತಿಯನ್ನೂ ಲೆಕ್ಕಿಸದೆ ನಡೆಸಿದ ಸಾಹಸವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. 2017ರ ಮಿಲಿಟರಿ ಕಾರ್ಯಾಚರಣೆಯ ನಂತರ ಸುಮಾರು 1.2 ಮಿಲಿಯನ್ ರೋಹಿಂಗ್ಯಾಗಳು ದೇಶ ತೊರೆದಿದ್ದು, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿಂದ ಉತ್ತಮ ಜೀವನ ಹುಡುಕಿಕೊಂಡು ಕಡಲ ಮಾರ್ಗವಾಗಿ ವಲಸೆ ಹೋಗುವಾಗ ಇಂತಹ ದುರಂತಗಳು ಮರುಕಳಿಸುತ್ತಿವೆ. UNHCR ದತ್ತಾಂಶದ ಪ್ರಕಾರ, ಕಳೆದ ವರ್ಷವೊಂದರಲ್ಲೇ 6,500ಕ್ಕೂ ಹೆಚ್ಚು ರೋಹಿಂಗ್ಯಾಗಳು ಸಮುದ್ರ ದಾಟಲು ಯತ್ನಿಸಿದ್ದು, ಅದರಲ್ಲಿ 900ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಈ ಜಲಮಾರ್ಗವು ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ಮತ್ತು ಅತಿ ಹೆಚ್ಚು ಮರಣ ಪ್ರಮಾಣ ಹೊಂದಿದ ವಲಸೆ ಮಾರ್ಗವಾಗಿ ಮಾರ್ಪಟ್ಟಿದೆ.