image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಬಾಂಗ್ಲಾಕ್ಕೆ ಮರಳಿದರೆ ಶೇಖ್ ಹಸೀನಾಗೆ ಜೈಲು ಶಿಕ್ಷೆ ಖಚಿತ: ವಿದೇಶಾಂಗ ಸಚಿವೆ ಶಾಮಾ ಒಬೈದ್ ಇಸ್ಲಾಂ

ಬಾಂಗ್ಲಾಕ್ಕೆ ಮರಳಿದರೆ ಶೇಖ್ ಹಸೀನಾಗೆ ಜೈಲು ಶಿಕ್ಷೆ ಖಚಿತ: ವಿದೇಶಾಂಗ ಸಚಿವೆ ಶಾಮಾ ಒಬೈದ್ ಇಸ್ಲಾಂ

ಢಾಕ : ಪದಚ್ಯುತಗೊಂಡಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಒಂದು ವೇಳೆ ದೇಶಕ್ಕೆ ಹಿಂತಿರುಗಿದರೆ ಅವರನ್ನು ನೇರವಾಗಿ ಜೈಲಿಗಟ್ಟಲಾಗುವುದು ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಾಮಾ ಒಬೈದ್ ಇಸ್ಲಾಂ ಸ್ಪಷ್ಟಪಡಿಸಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ಶೇಖ್ ಹಸೀನಾ ಢಾಕಾಕ್ಕೆ ಮರಳಲು ಯೋಜಿಸುತ್ತಿದ್ದಾರೆ ಎಂಬ ವರದಿಗಳು ಹೊರಬಿದ್ದ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರದ ವತಿಯಿಂದ ಈ ಖಡಕ್ ಹೇಳಿಕೆ ಹೊರಬಿದ್ದಿದೆ. ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ರಿಯಾಗಿರುವ ಶೇಖ್ ಹಸೀನಾ, 2024ರ ಆಗಸ್ಟ್ 5ರಂದು ನಡೆದ ತೀವ್ರ ಸ್ವರೂಪದ ವಿದ್ಯಾರ್ಥಿ ದಂಗೆಯ ಕಾರಣದಿಂದಾಗಿ ಅಧಿಕಾರ ಕಳೆದುಕೊಂಡು ಭಾರತಕ್ಕೆ ಪಲಾಯನ ಮಾಡಿದ್ದರು. ಪ್ರಸ್ತುತ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿಎಸ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಸಚಿವೆ ಶಾಮಾ ಒಬೈದ್, ಶೇಖ್ ಹಸೀನಾ ಅವರು ಬಾಂಗ್ಲಾದೇಶಕ್ಕೆ ಬಂದು ಶರಣಾದರೆ ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನಿನ ಚೌಕಟ್ಟಿನಡಿಯಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಮತ್ತು ಅವರು ಜೈಲು ಸೇರುವುದು ಖಚಿತ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಶೇಖ್ ಹಸೀನಾ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಮತ್ತು ಶಿಕ್ಷೆಯನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಚಿವೆ, ಈಗಾಗಲೇ ನ್ಯಾಯಾಲಯದಿಂದ ಅಪರಾಧಿ ಎಂದು ಸಾಬೀತಾಗಿರುವ ವ್ಯಕ್ತಿಯ ಹೇಳಿಕೆಗಳನ್ನು ಪರಿಗಣಿಸಲು ಸರ್ಕಾರಕ್ಕೆ ಯಾವುದೇ ಅಗತ್ಯವಿಲ್ಲ. ವಿದೇಶದಲ್ಲಿ ಕುಳಿತು ಅವರು ನೀಡುತ್ತಿರುವ ಹೇಳಿಕೆಗಳು ಕೇವಲ ತಲೆಮರೆಸಿಕೊಂಡಿರುವ ಅವಾಮಿ ಲೀಗ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ತಂತ್ರವಷ್ಟೇ ಎಂದು ಲೇವಡಿ ಮಾಡಿದ್ದಾರೆ.

2024ರ ವಿದ್ಯಾರ್ಥಿ ದಂಗೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರ ಹಾಗೂ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇರೆಗೆ ಢಾಕಾದ ವಿಶೇಷ ನ್ಯಾಯಮಂಡಳಿಯು ಕಳೆದ ನವೆಂಬರ್‌ನಲ್ಲಿ ಶೇಖ್ ಹಸೀನಾಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ನವದೆಹಲಿಗೆ ಈಗಾಗಲೇ ಬಾಂಗ್ಲಾದೇಶ ಒತ್ತಾಯಿಸಿದೆ. ಹಿಂದಿನ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಈ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಸ್ತುತ ಅಧಿಕಾರದಲ್ಲಿರುವ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (BNP) ಸರ್ಕಾರವೂ ಮುಂದುವರಿಸಿದೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.

Category
ಕರಾವಳಿ ತರಂಗಿಣಿ