ರಿಯಾಧ್ : ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರ ಪಡೆಗಳು ಸೌದಿ ಅರೇಬಿಯಾದ ಮೇಲೆ ಭೀಕರ ದಾಳಿ ನಡೆಸಿವೆ. ಸೌದಿ ಅರೇಬಿಯಾದ ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎರಡು ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಹೌತಿ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಸರಣಿ ಡ್ರೋನ್‌ಗಳ ಮೂಲಕ ದಾಳಿ ನಡೆಸಿವೆ. ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿರುವ ಮುನ್ಸೂಚನೆ ಸಿಕ್ಕಿರುವುದರಿಂದ, ಸೌದಿ ವಾಯುಪ್ರದೇಶದಲ್ಲಿ ಹಾರಾಟ ನಡೆಸದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.
ಈ ಭೀಕರ ದಾಳಿಯ ಸಂಪೂರ್ಣ ಹೊಣೆಯನ್ನು ಹೌತಿ ಬಂಡುಕೋರ ಪಡೆಗಳೇ ಹೊತ್ತುಕೊಂಡಿವೆ. ಯೆಮೆನ್‌ನಲ್ಲಿರುವ ಸನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಿರುವುದಾಗಿ ಹೌತಿ ಪಡೆಗಳ ಮಿಲಿಟರಿ ವಕ್ತಾರ ಯಹ್ಯಾ ಸಾರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೌದಿ ಅರೇಬಿಯಾ ನಡೆಸಿದ ಆಕ್ರಮಣಕ್ಕೆ ಉತ್ತರವಾಗಿ ತಾವು ಈ ಮಿಲಿಟರಿ ಕಾರ್ಯಾಚರಣೆ ನಡೆಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಸನಾ ವಿಮಾನ ನಿಲ್ದಾಣದ ಮೇಲಿನ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವವರೆಗೂ ಯಾವುದೇ ವಿಮಾನಯಾನ ಸಂಸ್ಥೆಗಳು ಸೌದಿ ವಾಯುಪ್ರದೇಶವನ್ನು ಬಳಸಬಾರದು, ಒಂದು ವೇಳೆ ಬಳಸಿದರೆ ಅದಕ್ಕೆ ಅವರೇ ಜವಾಬ್ದಾರರು ಎಂದು ಹೌತಿಗಳು ಕಠಿಣ ಎಚ್ಚರಿಕೆ ನೀಡಿದ್ದಾರೆ. ಸೌದಿ ರಕ್ಷಣಾ ವ್ಯವಸ್ಥೆಯು ದಕ್ಷಿಣ ವಲಯದತ್ತ ಬಂದ ಕ್ಷಿಪಣಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರರು ತಿಳಿಸಿದ್ದರೂ, ಈ ದಾಳಿಯಿಂದಾಗಿ ದುಬೈ, ಶಾರ್ಜಾ ಸೇರಿದಂತೆ ಪ್ರಮುಖ ನಗರಗಳಿಗೆ ಸಾಗುವ 10ಕ್ಕೂ ಹೆಚ್ಚು ವಿಮಾನ ಯಾನಗಳು ರದ್ದಾಗಿದ್ದು, ತೀವ್ರ ಆತಂಕ ಸೃಷ್ಟಿಯಾಗಿದೆ.
ಈ ಸಂಘರ್ಷದ ಹಿನ್ನೆಲೆಯನ್ನು ನೋಡುವುದಾದರೆ, ಇತ್ತೀಚೆಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಗಾಗಿ ಹೌತಿ ನಿಯೋಗವನ್ನು ಟೆಹ್ರಾನ್‌ಗೆ ಕರೆದೊಯ್ಯುತ್ತಿದ್ದ ಇರಾನಿನ ವಿಮಾನವನ್ನು ತಡೆಯಲು ಸೌದಿ ಅರೇಬಿಯಾ ಪ್ರಯತ್ನಿಸಿತ್ತು. ಈ ತಿಂಗಳ ಆರಂಭದಲ್ಲಿ ನಡೆದ ಈ ವಾಯುಪ್ರದೇಶದ ಉಲ್ಲಂಘನೆ ಮತ್ತು ಸೋಮವಾರ ಸನಾ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿ ಹೌತಿ ಪಡೆಗಳನ್ನು ಕೆರಳಿಸುವಂತೆ ಮಾಡಿದೆ. ಸೌದಿ ಅರೇಬಿಯಾದ ಈ ಅತಿಕ್ರಮಣಕ್ಕೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಹೌತಿಗಳು ಎಚ್ಚರಿಸಿದ ಕೆಲವೇ ಗಂಟೆಗಳಲ್ಲಿ ಈ ಕ್ಷಿಪಣಿ ದಾಳಿ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ಸೌದಿ ಮತ್ತು ಹೌತಿ ಪಡೆಗಳ ನಡುವೆ ಇದ್ದ ಕದನ ವಿರಾಮ ಒಪ್ಪಂದವು ಈ ದಾಳಿಯೊಂದಿಗೆ ಸಂಪೂರ್ಣವಾಗಿ ಮುರಿದುಬಿದ್ದಂತಾಗಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಆವರಿಸಿದೆ.