image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ಪಾಕ್ ರೇಂಜರ್‌ಗಳಿಂದ ಪಿಒಕೆ ಮಸೀದಿ ಧ್ವಂಸ, ಪವಿತ್ರ ಕುರಾನ್ ಕಳವು ಆರೋಪ: ಮುಂದುವರಿದ ಪ್ರತಿಭಟನೆ

ಪಾಕ್ ರೇಂಜರ್‌ಗಳಿಂದ ಪಿಒಕೆ ಮಸೀದಿ ಧ್ವಂಸ, ಪವಿತ್ರ ಕುರಾನ್ ಕಳವು ಆರೋಪ: ಮುಂದುವರಿದ ಪ್ರತಿಭಟನೆ

ಪಿಒಕೆ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಮೂಲಸೌಕರ್ಯಗಳಿಗಾಗಿ ಆಗ್ರಹಿಸಿ ಸ್ಥಳೀಯ ಜನತೆ ನಡೆಸುತ್ತಿರುವ ಹೋರಾಟವು 33 ನೇ ದಿನಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ರೇಂಜರ್ ಪಡೆಗಳನ್ನು ಬಳಸುತ್ತಿದ್ದು, ರಾವಲ್ ಕೋಟ್‌ನಲ್ಲಿ ಈ ಪಡೆಗಳು ಅಟ್ಟಹಾಸ ಮೆರೆದಿವೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಹೋರಾಟದ ಸ್ಥಳಕ್ಕೆ ನುಗ್ಗಿದ ರೇಂಜರ್‌ಗಳು ಬೂಟುಗಾಲಿನಲ್ಲೇ ಮಸೀದಿಯನ್ನು ಪ್ರವೇಶಿಸಿ, ಅಲ್ಲಿನ ಆವರಣವನ್ನು ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಮಸೀದಿ ಹಾಗೂ ಜನರ ಮನೆಗಳನ್ನು ಲೂಟಿ ಮಾಡಿ ಪವಿತ್ರ ಕುರಾನಿನ ಪ್ರತಿಗಳನ್ನು ಕದ್ದೊಯ್ದಿದ್ದಾರೆ ಎಂದು ಪಿಒಕೆ ಜನರು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನಾಕಾರರ ಮೇಲೆ ರೇಂಜರ್ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದು, ಈ ದಾಳಿಯಲ್ಲಿ ಇತ್ತೀಚೆಗೆ ಮೂವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಈ ಸಂಘರ್ಷದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 65 ದಾಟಿದ್ದು, ನೂರರ ಹತ್ತಿರ ತಲುಪಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಮಾತನಾಡಿರುವ ಹೋರಾಟಗಾರರ ನಾಯಕ ಸರ್ದಾರ್ ಉಮತ್ ನಜೀರ್, ಪಾಕ್ ರೇಂಜರ್‌ಗಳು ಮಸೀದಿಯ ಬೆಲೆಬಾಳುವ ವಸ್ತುಗಳು ಮತ್ತು ಕುರಾನ್ ಗ್ರಂಥವನ್ನು ಜಫ್ತಿ ಹೆಸರಿನಲ್ಲಿ ಕಳ್ಳತನ ಮಾಡಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯದ ಮಾದರಿಯಲ್ಲೇ ಪಾಕಿಸ್ತಾನ ಸರ್ಕಾರವು ಪಿಒಕೆ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

Category
ಕರಾವಳಿ ತರಂಗಿಣಿ